You are here
Home > Koppal News > ಮುಚ್ಚಿ ವಿಲೀನ ಎಂದರೆ ಕೊಂದು ಸ್ವರ್ಗಕ್ಕೆ ಕಳುಹಿಸಲಾಯಿತು ಎಂದಂತೆ

ಮುಚ್ಚಿ ವಿಲೀನ ಎಂದರೆ ಕೊಂದು ಸ್ವರ್ಗಕ್ಕೆ ಕಳುಹಿಸಲಾಯಿತು ಎಂದಂತೆ

ಈಗ ಮೂರು ಸಾವಿರ ಚಿಲ್ಲರೆ ಸರಕಾರಿ ಶಾಲೆಗಳನ್ನು ಮುಚ್ಚಲು ಸರಕಾರ ತುದಿಗಾಲಲ್ಲಿ ನಿಂತಿದೆ. ಇದನ್ನು, ಸರಕಾರ ‘‘ಮುಚ್ಚುವುದಲ್ಲ ಬದಲಿಗೆ ವಿಲೀನ’’ ಎಂದು ಕರೆಯುತ್ತಿದೆ. ಇದು – ‘‘ಕೊಂದದ್ದನ್ನು ಕೊಲೆಯಲ್ಲ; ಸ್ವರ್ಗಕ್ಕೆ ಕಳುಹಿಸುವುದು’’ ಎಂದಂತೆ. ಈಗಾಗಲೇ ಕಳೆದ ಹತ್ತು ವರ್ಷದಿಂದ ಹತ್ತು ಸಾವಿರಕ್ಕೂ ಹೆಚ್ಚು ಸರಕಾರೀ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಿ ಸ್ವರ್ಗಕ್ಕೆ ಕಳುಹಿಸಲಾಗಿದೆ. ಇದನ್ನು ಮಕ್ಕಳ ಕೊರತೆಯ ಕಾರಣ ಕೊಟ್ಟು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಸರಾಸರಿ ಲೆಕ್ಕಕ್ಕೆ ಬಂದರೆ ಒಂದು ಸರಕಾರಿ ಶಾಲೆಯಲ್ಲಿ 120 ಮಕ್ಕಳಿದ್ದರೆ ಅದೇ ಒಂದು ಖಾಸಗಿ ಶಾಲೆಯಲ್ಲಿ 229 ಮಕ್ಕಳು ಇದ್ದಾರೆ. ಇದರ ಅರ್ಥ ಏನು? ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆಯಾಗದಂತೆ ಕಾಪಾಡಲು ಖಾಸಗಿ ಹಿತಕ್ಕೆ ಬಲಿಯಾದ ಸರಕಾರ ಮತ್ತು ಅಧಿಕಾರಶಾಹಿಯ ಒಳಸಂಚಲ್ಲವೇ ಇದು?
ಒಂದು ನಿಜವಾದ ಸರಕಾರ ಇದ್ದಿದ್ದರೆ ಏನು ಮಾಡ್ತಾ ಇತ್ತು? ತನ್ನ ಮುಖಕ್ಕೆ ತಾನೇ ಉಗಿದುಕೊಳ್ಳುವ ಇಂಥ ಕೆಲಸ ಮಾಡ್ತಾ ಇರಲಿಲ್ಲ.ಬದಲಾಗಿ ಖಾಸಗಿ ಶಾಲೆಗಳನ್ನೇ ಮುಚ್ಚಿ ಅದನ್ನು ಸರಕಾರಿ ಶಾಲೆಯೊಡನೆ ವಿಲೀನಗೊಳಿಸುತ್ತಿತ್ತು. ಅಷ್ಟೇಕೆ, ಕನ್ನಡ ಮಾಧ್ಯಮಕ್ಕೆ ಎಂದು ಅನುಮತಿ ಪಡೆದು ಗುಟ್ಟಾಗಿ ಇಂಗ್ಲಿಷ್ ಮಾಧ್ಯಮ ಬೋಧಿಸುವ ಖಾಸಗಿ ಶಾಲೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರೂ ಸರಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಯ ಕೊರತೆ ಬರುತ್ತಿರಲಿಲ್ಲ. ಇದು ಯಾರಿಗೆ ಗೊತ್ತಿಲ್ಲ?
ಈಗಲೂ ಖಾಸಗಿ ಶಾಲೆಗಳನ್ನು ಮುಚ್ಚಿದರೆ ಓದುತ್ತಿರುವ ಮಕ್ಕಳ ಹೆಚ್ಚಳದಿಂದ ಮೂರು ಸಾವಿರ ಶಾಲೆಗಳನ್ನು ಮುಚ್ಚುವ ಮಾತಿರಲಿ,ಈಗಾಗಲೆ ಮುಚ್ಚಿರುವ ಹತ್ತು ಸಾವಿರ ಚಿಲ್ಲರೆ ಶಾಲೆಗಳನ್ನೂ ಪುನಃ ತೆಗೆಯಬೇಕಾಗಿ ಬರುತ್ತದೆ.ಬಹುಶಃ ಇದೂ ಸಾಲದೇ ಬರಬಹುದು.ಆದ್ದರಿಂದ ಸರಕಾರಕ್ಕೆ ನಾವು ಈಗ ಒಕ್ಕೊರಲಿನಿಂದ ‘ಸರಕಾರಿ ಶಾಲೆಗಳ ಮೇಲೆ ಕಾಗೆ ಹಾರಿಸಬೇಡಿ’ ಎಂದು ಕೂಗಿ ಹೇಳಬೇಕಾಗಿದೆ.‘ಮೂರು ಸಾವಿರ ಶಾಲೆಗಳನ್ನು ಮುಚ್ಚಬೇಡಿ’ ಎಂದು ಮಾತ್ರವಲ್ಲ: ‘ಈಗಾಗಲೆ ಮುಚ್ಚಿರುವ ಹತ್ತು ಸಾವಿರ ಶಾಲೆಗಳನ್ನು ಮತ್ತೆ ತೆಗೆಯಿರಿ’ ಎಂದು ಆಗ್ರಹಿಸಬೇಕಾಗಿದೆ.
ಜೊತೆಗೆ, ‘‘ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ’’ಯನ್ನು ಕೇಂದ್ರ ಸರಕಾರ ಜಾರಿಗೆ ತಂದು ಹೆಚ್ಚು ಕಮ್ಮಿ ಎಲ್ಲಾ ರಾಜ್ಯಗಳೂ ಅಳವಡಿಸಿಕೊಂಡಿದ್ದರೂ ನಮ್ಮ ರಾಜ್ಯ ಮಾತ್ರ ಶಾಸ್ತ್ರ ಕೇಳುತ್ತಾ ಕೂತಿದೆ.ನ್ಯಾಯಾಲಯ ಈ ಕಾಯ್ದೆಯನ್ನು ಜಾರಿಗೊಳಿಸುವಂತೆ ಆದೇಶಿಸಿದ್ದರೂ ಸರಕಾರ ನ್ಯಾಯಾಲಯಕ್ಕೂ ಬೆಲೆ ಕೊಡುತ್ತಿಲ್ಲ. ಸರಕಾರದ ಉದ್ದೇಶ ಏನು,ಸರಕಾರ ಯಾಕಿದೆ ಎಂಬುದು ಅರ್ಥವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ತಾರತಮ್ಯದ ರೋಗಕ್ಕೆ ತುತ್ತಾದ ಭಾರತದಲ್ಲಿ, ಮಕ್ಕಳ ನಡುವೆಯಾದರೂ ಭಿನ್ನ ಭೇದವಿಲ್ಲದ ಏಕರೂಪ ಶಿಕ್ಷಣಕ್ಕಾಗಿ ಒಂದು ಜನಾಂದೋಲನಕ್ಕೆ ಈ ನೆಲ ಕಾಯುತ್ತಿದೆ.ಇದನ್ನೆಲ್ಲಾ ಸರಕಾರ ಗಮನಿಸಿ ಕಾರ್ಯಪ್ರವೃತ್ತವಾಗಬೇಕು.ಇಲ್ಲದಿದ್ದರೆ ‘‘ಮಾತೃಭೂಮಿಯನ್ನೇ ಮಾರ್ಕಂಡು ತಿನ್ನುವವರಿಗೆ ಮಾತೃಭಾಷೆ ಯಾವ ಲೆಕ್ಕ’’ ಎಂಬ ಅಪವಾದದಿಂದ ಈ ಸರಕಾರಕ್ಕೆ ತಪ್ಪಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲವೇನೋ?
-ದೇವನೂರ ಮಹಾದೇವ

Leave a Reply

Top