ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ.

ಕೊಪ್ಪಳ,
ಆ.೧೩ (ಕ ವಾ): ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ
ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್ ಹಾಗೂ ಡೀಸೆಲ್ ಮೆಕ್ಯಾನಿಕಲ್ ವೃತ್ತಿಯ
ಶಿಶಿಕ್ಷು ತರಬೇತಿಗಾಗಿ ಆ.೧೭ ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಮೆ||ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಬೇವಿನಹಳ್ಳಿ, ಕೊಪ್ಪಳ
ಕಂಪನಿಯವರಿಂದ ಈ ಸಂದರ್ಶನ ಏರ್ಪಡಿಸಲಾಗಿದ್ದು, ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್,
ಟರ್ನರ್ ಹಾಗೂ ಡೀಸೆಲ್ ಮೆಕ್ಯಾನಿಕಲ್ ವೃತ್ತಿಯಲ್ಲಿ ಐ.ಟಿ.ಐ ಪಾಸಾದ ಮತ್ತು ಪರೀಕ್ಷೆಗೆ
ಹಾಜರಾಗಿ ಫಲಿತಾಂಶಕ್ಕಾಗಿ ಕಾದಿರುವ, ಗರಿಷ್ಠ ೨೪ ವರ್ಷ ವಯೋಮಿತಿಯೊಳಗಿರುವ
ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಸಂದರ್ಶನವು ಆ.೧೭ ರಂದು ಬೆಳಿಗ್ಗೆ ೯.೩೦ ಗಂಟೆಗೆ
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕುಕನೂರಿನಲ್ಲಿ ನಡೆಯಲಿದ್ದು, ಆಸಕ್ತ
ಅಭ್ಯರ್ಥಿಗಳು ಬಯೋಡೇಟಾ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ವಿದ್ಯಾರ್ಹತೆಯ ಪ್ರಮಾಣ
ಪತ್ರಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.

ಬದನೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳು ಬಾಧೆ ನಿರ್ವಹಣೆಗೆ ಸಲಹೆಗಳು.

ಕೊಪ್ಪಳ
ಆ. ೧೩ (ಕ ವಾ): ಬದನೆ ಬೆಳೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳು
ಬಾಧೆ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು
ನೀಡಿದೆ. ಬದನೆಯಲ್ಲಿ ಕೀಟ ಬಾಧೆಗೆ ಸಿಲುಕಿದ ಕೊಂಬೆ ಮತ್ತು
ಹಣ್ಣುಗಳನ್ನು ಕಿತ್ತು ನಾಶಪಡಿಸಬೇಕು. ಮೊಹಕ ಬಲೆಗಳ ಸಹಾಯದಿಂದ ಲೂಸಿನ್ ಲ್ಯೂರ್
ಉಪಯೋಗಿಸಿ ಈ ಕೀಟದ ಪತಂಗವನ್ನು ಸೆರೆಹಿಡಿದು ಕೈಯಿಂದ ಸಾಯಿಸಬೇಕು. ಈ ರೀತಿ
ಮಾಡುವುದರಿಂದ ಕನಿಷ್ಟ ಅರ್ಧದಷ್ಟು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು, ಅದರಿಂದಾಗುವ
ದುಷ್ಪರಿಣಾಮವನ್ನು ಮತ್ತು ಈ ಕೀಟ ನಿಯಂತ್ರಣಕ್ಕೆ ತಗುಲುವ ಖರ್ಚನ್ನು ಕಡಿಮೆ ಮಾಡಬಹುದು.
ಒಂದು ಎಕರೆಗೆ ೧೨ ರಿಂದ ೧೬ ಮೋಹಕ ಬಲೆಗಳನ್ನು ಅಳವಡಿಸಬೇಕು ಮತ್ತು ೧೫ ದಿನಗಳಿಗೊಮ್ಮೆ
ಮೋಹಕ ಬಲೆಯ ಲ್ಯೂರನ್ನು ಬದಲಿಸಬೇಕು. ಬ್ಯಾಸಿಲ್ಲಸ್ ತುರೆನಜೆನಿಸ್ಸ್ ೧ ಮಿ.ಲೀ ಜೈವಿಕ
ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಪ್ರತಿ ಎಕರೆಗೆ ೧೦೦
ಕಿ. ಗ್ರಾಂ ಬೇವಿನ ಹಿಂಡಿಯನ್ನು ಸಸಿ ನಾಟಿ ಮಾಡುವ ಸಮಯದಲ್ಲಿ ಕೊಟ್ಟಿಗೆ ಗೊಬ್ಬರದ
ಜೊತೆಗೆ ಸೇರಿಸಬೇಕು, ನಂತರ ಪ್ರತಿ ತಿಂಗಳಿಗೊಮ್ಮೆ ಎರಡು ಬಾರಿ ಮಣ್ಣಿನಲ್ಲಿ
ಸೇರಿಸಬೇಕು.  ಸ್ಪೈನೋಸಾಡ್ ೪೫ ಎಸ್.ಸಿ ೦.೧೨ ಮಿ.ಲೀ, ಇಂಡಾಕ್ಸಾಕಾರ್ಬ್ ೦.೩ ಮಿ.ಲೀ,
ಪ್ರೋಫೆನೊಫಾಸ್ ೫೦ ಇ.ಸಿ ೨.೦ ಮಿ.ಲೀ, ಸೈಪರಮೆಥ್ರಿನ್ ೧೦ ಇಸಿ ೦.೫ ಮಿ.ಲೀ,
ರೈನಾಕ್ಸಿಪೈರ್ ೨೦ ಎಸ್.ಸಿ ೦.೨೫ ಮಿ.ಲೀ, ಲಾಮ್ಡಾಸೆಹಾಲೋಥ್ರಿನ್ ೫ ಇಸಿ ೦.೫ ಮಿ.ಲೀ,
ಕೀಟನಾಶಕಗಳನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ- ೦೮೫೩೯-೨೨೦೩೦೫ ಕ್ಕೆ ಸಂಪರ್ಕಿಸಬಹುದು.
Please follow and like us:
error