ತ್ರಿವಳಿಗಳಿಗೆ ಶೋಕಾಸ್ ಕಳಂಕಿತರಿಂದ ಉತ್ತರ ಬಂದ ಬಳಿಕ ಸದನ ಸಮಿತಿ ರಚನೆ: ಬೋಪಯ್ಯ

ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ : 
ಬೆಂಗಳೂರು, ಫೆ.10: ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅವರಿಂದ ಉತ್ತರ ಬಂದ ಬಳಿಕ ಪ್ರಕರಣದ ತನಿಖೆ ನಡೆಸಲು ಸದನ ಸಮಿತಿಯನ್ನು ರಚಿಸಲಾಗುವುದು ಎಂದು ವಿಧಾಸಭಾಧ್ಯಕ್ಷ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಜ ನ್ಯಾಯವನ್ನು ಪಾಲಿಸುವ ದೃಷ್ಟಿಯಿಂದ ಮೂವರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಇದೇ ತಿಂಗಳ 13ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದರು.
ಪ್ರಕರಣದ ತನಿಖೆ ನಡೆಸಲು 7 ಮಂದಿ ಸದಸ್ಯರನ್ನೊಳಗೊಂಡ ಸದನ ಸಮಿತಿಯನ್ನು ಫೆ.14ರಂದು ರಚನೆ ಮಾಡಲಾಗುವುದು. ಇದರಲ್ಲಿ ಬಿಜೆಪಿಯ 4, ಕಾಂಗ್ರೆಸ್‌ನ 2 ಹಾಗೂ ಜೆಡಿಎಸ್‌ನ ಓರ್ವ ಸದಸ್ಯರಿರುತ್ತಾರೆ. ಸಮಿತಿಗೆ ಯಾರು ಸದಸ್ಯರಾಗಬೇಕು ಎಂಬುದನ್ನು ಆಯಾ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರೇ ನಿರ್ಧರಿಸಲಿದ್ದಾರೆ ಎಂದು ಬೋಪಯ್ಯ ತಿಳಿಸಿದರು. ಆರೋಪಿಗಳಾದ ಮಾಜಿ ಸಚಿವರು ನೀಡುವ ಉತ್ತರವನ್ನು ಸದನ ಸಮಿತಿಗೆ ಒಪ್ಪಿಸಲಾಗುವುದು. ಸಮಿತಿಯು ತನ್ನದೇ ಆದ ರೀತಿಯಲ್ಲಿ ತನಿಖೆ ನಡೆಸಲು ಸ್ವತಂತ್ರವಿದೆ. ಮಾರ್ಚ್ 12ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗುವುದು ಎಂದು ಅವರು ಹೇಳಿದರು.
ಸದನ ಸಮಿತಿಗೆ ವಿಪಕ್ಷ ಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಬೋಪಯ್ಯ, ದೇಶದ ಯಾವುದೆ ರಾಜ್ಯದಲ್ಲಿ ಈ ರೀತಿಯ ಆಯ್ಕೆ ನಡೆದಿಲ್ಲ. ಆದಾಗ್ಯೂ, ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ವಿರೋಧ ಪಕ್ಷದವರನ್ನೇ ಅಧ್ಯಕ್ಷರನ್ನಾಗಿ ಅವರು ನೇಮಕ ಮಾಡುವುದಾದರೆ ತನ್ನ ಅಭ್ಯಂತರವೇನಿಲ್ಲ ಎಂದರು. ಶಾಸಕರಿಗೆ ಐಪಾಡ್: ವಿಧಾನಪರಿಷತ್ ಸದಸ್ಯರಿಗೆ ನೀಡಿರುವಂತೆ ವಿಧಾನಸಭಾ ಸದಸ್ಯರಿಗೂ ಅತ್ಯಾಧುನಿಕ ಐಪಾಡ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಬೋಪಯ್ಯ ತಿಳಿಸಿದರು.
ಕಹಿ ಘಟನೆಗಳಿಂದ ಮನಸ್ಸಿಗೆ ನೋವು’
ಬೆಂಗಳೂರು: ತಾನು ವಿಧಾನಸಭಾಧ್ಯಕ್ಷನಾದ ಬಳಿಕ ಸದನದಲ್ಲಿ ನಡೆದ ಕಹಿ ಘಟನೆಗಳಿಂದ ಮನಸ್ಸಿಗೆ ನೋವುಂಟಾಗಿದೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ. ಈ ಘಟನೆಯಿಂದ ಬೇಸತ್ತು ಅವರು ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರೇ? ಎಂಬ ಪ್ರಶ್ನೆಗೆ ಉತ್ತರಿಸಿದ ಬೋಪಯ್ಯ, ತಾನು ರಾಜಕಾರಣಿಯಲ್ಲ, ವೃತ್ತಿಯಿಂದ ವಕೀಲ, ಕೃಷಿಕ. ಎಲ್ಲರಂತೆ ತನಗೂ ಭಾವನೆಗಳಿವೆ. ಪದೇ ಪದೇ ಇಂತಹ ಕಹಿ ಘಟನೆಗಳು ಮರುಕಳಿಸುತ್ತಿದ್ದರೆ, ಸಹಜವಾಗಿಯೇ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದರು. ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆ ನಡೆದಾಗ ತಾನು ಸದನದಲ್ಲಿರಲಿಲ್ಲ. ರಾತ್ರಿ ಸುಮಾರು 9:30ಕ್ಕೆ ಸುದ್ದಿ ವಾಹಿನಿಯನ್ನು ವೀಕ್ಷಿಸಿದಾಗಲೇ ತನಗೆ ಅದು ಗೊತ್ತಾಗಿದ್ದು ಎಂದು ಅವರು ಹೇಳಿದರು
Please follow and like us:
error