ಸುಶಿಕ್ಷಿತರಿಂದಲೆ ಮತದಾನಕ್ಕೆ ನಿರಾಸಕ್ತಿ ಕಳವಳಕಾರಿ : ಎಲ್.ಬಿ. ಜಂಬಗಿ

   ಸಮಾಜದ ಪ್ರಜ್ಞಾವಂತ ವರ್ಗ ಎನಿಸಿಕೊಳ್ಳುವ ವಿದ್ಯಾವಂತ ಸುಶಿಕ್ಷಿತ ಸಮುದಾಯ ಮತದಾನದಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಜಿಲ್ಲಾ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್.ಬಿ. ಜಂಬಗಿ ಅವರು ಅಭಿಪ್ರಾಯಪಟ್ಟರು.
  ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಪ್ರಪಂಚದಲ್ಲಿಯೇ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ನಮ್ಮದು, ನಮ್ಮನ್ನಾಳುವ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಕಳುಹಿಸುವ ಗುರುತರ ಹೊಣೆ ಮತದಾರರ ಮೇಲಿದೆ.  ಚುನಾವಣೆಗಳಲ್ಲಿ ಕೇವಲ ಶೇ. ೫೦ ರಿಂದ ೭೦ ರಷ್ಟು ಮಾತ್ರ ಮತದಾನವಾಗುತ್ತಿದೆ. ಉಳಿದ ಶೇ. ೩೦ ರಿಂದ ೪೦ ರಷ್ಟು ಮತದಾರರು ಮತದಾನ ಏಕೆ ಮಾಡುತ್ತಿಲ್ಲ?  ಶೇ. ೧೦೦ ರಷ್ಟು ಮತದಾನವಾದಾಗಲೇ ಫಲಿತಾಂಶಕ್ಕೆ ಒಂದು ಅರ್ಥ ಬರುತ್ತದೆ. ವಿದ್ಯಾವಂತರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದು, ಅತ್ಯಂತ ಕಳವಳಕಾರಿಯಾಗಿದೆ.  ನಮ್ಮ ಒಂದು ಓಟಿನಿಂದ ಏನಾಗಬೇಕಿದೆ ಎಂದುಕೊಳ್ಳುವುದು ಈ ದೇಶದ ಸಂವಿಧಾನ ನೀಡಿರುವ ಮತದಾನದ ಹಕ್ಕಿಗೆ ಚ್ಯುತಿ ತಂದಂತೆ.  ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಂದು ಓಟಿಗೂ ಅತ್ಯಂತ ಮಹತ್ವವಿದೆ.  ಚುನಾವಣೆ ಸಂದರ್ಭದಲ್ಲಿ ಹಣ, ಸಾಮಗ್ರಿಗಳ ಹಂಚಿಕೆ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳಿಂದ ತಿಳಿದುಬರುತ್ತಿದೆ.  ಮತದಾರರಿಗೆ ಆಮಿಷ ಒಡ್ಡುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ.  ಇದರಿಂದಾಗಿ ಬಡವರು ಬಡವರಾಗಿಯೇ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿಯೇ ಉಳಿಯುತ್ತಿದ್ದಾರೆ.  ಹಣದುಬ್ಬರ ಪ್ರಮಾಣದಲ್ಲಿ ಏರಿಕೆಯಾಗಿ ದಿನನಿತ್ಯ ಬಳಕೆಯ ಸಾಮಗ್ರಿಗಳು, ಆಹಾರದ ಬೆಲೆ ಏರಿಕೆ ಬಿಸಿ ಸಾಮಾನ್ಯ ಜನರಿಗೆ ತಟ್ಟುತ್ತಿದೆ.  ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಪ್ರಮುಖ ದೋಷವಾಗಿದೆ.  ಸೂಕ್ತ ವ್ಯಕ್ತಿಯನ್ನು ಶಾಸಕಾಂಗಕ್ಕೆ ಆಯ್ಕೆ ಮಾಡುವ ಮೂಲಕ ಮತದಾರರು ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು.  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಯುವ ಜನತೆ ಚುನಾವಣಾ ಪ್ರಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.  ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಬೇಕು.  ಹೀಗಾದಲ್ಲಿ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸುಭದ್ರವಾಗಿ ದೇಶದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಜಿಲ್ಲಾ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್.ಬಿ. ಜಂಬಗಿ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಪ್ರಜಾಪ್ರಭುತ್ವದಲ್ಲಿ ಧೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ.  ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಜಾತಿ, ಧರ್ಮ, ಜನಾಂಗ ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸೋಣ ಎಂದು ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.
  ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕಾರಾಗಿ ಭಾಗವಹಿಸಿದ್ದ ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಸ್. ಪಾಟೀಲ್ ಅವರು ಮಾತನಾಡಿ, ಇತ್ತೀಚಿನ ಚುನಾವಣೆಗಳ ಸಮೀಕ್ಷೆಯಲ್ಲಿ ಶೇ. ೧೮ ರಿಂದ ೨೦ ರಷ್ಟು ಮಾತ್ರ ಯುವಜನತೆ ಮತದಾನದಲ್ಲಿ ಪಾಲ್ಗೊಳ್ಳುತ್ತಿರುವ ಅಂಶ ಕಂಡುಬಂದಿದ್ದು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯುವಕರನ್ನು ಶಕ್ತಗೊಳಿಸುವುದು ಹಾಗೂ ಅವರನ್ನು ಭಾಗವಹಿಸುವಂತೆ ಮಾಡುವುದು ರಾಷ್ಟ್ರೀಯ ಮತದಾರರ ದಿನಾಚರಣೆಯ ಉದ್ದೇಶವಾಗಿದೆ.  ೧೯೮೮ ರಲ್ಲಿ ಸಂವಿಧಾನದ ೬೧ನೇ ತಿದ್ದುಪಡಿಯ ಮೂಲಕ ಮತದಾನದ ಹಕ್ಕು ಪಡೆಯಲು ಇರುವ ವಯೋಮಿತಿಯನ್ನು ೨೧ ರಿಂದ ೧೮ ಕ್ಕೆ ಇಳಿಸಲಾಗಿದೆ.  ಇದರಿಂದಾಗಿ ದೇಶದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿಯೊಂದು ಚುನಾವಣೆಯಲ್ಲಿಯೂ ಯುವಜನತೆಯ ಪಾತ್ರ ಈಗ ಹೆಚ್ಚಾಗಿದೆ.  ಮತದಾನದ ಹಕ್ಕನ್ನು ಈಗ ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಿ ಸುಪ್ರಿಂಕೋರ್ಟ್ ಕಾನೂನು ಬದ್ಧ ಹಕ್ಕು ಎಂದು ಪರಿಗಣಿಸಿದೆ.  ಆದರೆ ಮತದಾನದ ಹಕ್ಕು ಸಂವಿಧಾನ ಬದ್ಧ ಹಕ್ಕು ಆಗಬೇಕು.  ಆಗ ಮಾತ್ರ ಶಾಸಕಾಂಗ ವ್ಯವಸ್ಥೆಗೆ ಇನ್ನಷ್ಟು ಬಲ ಬರಲಿದೆ ಎಂದು ಅಭಿಪ್ರಾಯಪಟ್ಟರು.
  ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಎಂ. ಶರಣಬಸಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿಜಯವರ್ಮಾ, ಡಿಡಿಪಿಐ ಮಂಟೇಲಿಂಗಾಚಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
  ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಹೊಸದಾಗಿ ನೋಂದಣಿಯಾದ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಕಾರ್ಡ್ ಅನ್ನು ಸಾಂಕೇತಿಕವಾಗಿ ವಿತರಿಸಲಾಯಿತು.  ಯುವಜನತೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆ, ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗು ಪ್ರಶಸ್ತಿ ಪತ್ರ ವಿತರಿಸಲಾಯಿತು.  ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ತಲಾ ೩ ಜನ ಉತ್ತಮ ಮತಗಟ್ಟೆ ಅಧಿಕಾರಿಗಳಿಗೆ ೧೦೦೦ ರೂ. ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಲಾಯಿತು.  ಹೊಸದಾಗಿ ನೋಂದಣಿಯಾದ ಯುವ ಮತದಾರರಿಗೆ ಏರ್ಪಡಿಸಲಾಗಿದ್ದ ಲಕ್ಕಿ ಡ್ರಾನಲ್ಲಿ ಬಂಡಿಹರ್ಲಾಪುರ ಗ್ರಾಮದ ಮಾರುತಿ ಭೀಮಪ್ಪ ಹಾಗೂ ಕರ್ಕಿಹಳ್ಳಿ ಗ್ರಾಮದ ಉಮಾ ಲಕ್ಷ್ಮಣ ಅವರು ತಲಾ ೧೦೦೦ ರೂ. ಗಳ ಬಹುಮಾನಕ್ಕೆ ಆಯ್ಕೆಯಾದರು.
Please follow and like us:
error