ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನ. ೨೯ ಕೊನೆಯ ದಿನ – ಡಾ. ಸುರೇಶ್ ಇಟ್ನಾಳ್

  ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಜಾರಿಗೊಳಿಸಿದ್ದು, ಅರ್ಹರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸಲು ನ. ೨೯ ಕೊನೆಯ ದಿನಾಂಕವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
  ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಮತದಾರರ ಪಟ್ಟಿಗೆ ಅರ್ಹ ವ್ಯಕ್ತಿಗಳು ತಮ್ಮ ಹೆಸರು ಸೇರ್ಪಡೆಗೊಳಿಸುವ ಕುರಿತು ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎನ್ನುವುದನ್ನು ಮತದಾರರ ಪರಿಶೀಲಿಸಿಕೊಳ್ಳುವ ಬಗ್ಗೆ ಈಗಾಗಲೆ ಹಲವು ಬಾರಿ ಪ್ರಕಟಣೆ ನೀಡಿ, ಪ್ರಚಾರ ಕೈಗೊಳ್ಳಲಾಗಿದೆ.  ಕರಡು ಮತದಾರರ ಪಟ್ಟಿಯನ್ನು ಈಗಾಗಲೆ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಯನ್ನು ಈಗಲೇ ಪರಿಶೀಲಿಸಿಕೊಂಡು, ಖಚಿತ ಪಡಿಸಿಕೊಳ್ಳದೇ, ಸಾಮಾನ್ಯವಾಗಿ ಮತದಾನದ ದಿನದಂದೇ ಎಲ್ಲ ರಾಜಕೀಯ ಪಕ್ಷಗಳ ಮುಖಂಡರುಗಳು ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗಿರುವ ಬಗ್ಗೆ ದೂರು ಸಲ್ಲಿಸುತ್ತಾರೆ.  ಇಂತಹ ಪ್ರಕರಣಗಳು ನಿಯಂತ್ರಣಗೊಳ್ಳಬೇಕೆಂದರೆ, ಕರಡು ಮತದಾರರ ಪಟ್ಟಿಯನ್ನು ಅವಲೋಕಿಸಿ, ಖಚಿತಪಡಿಸಿಕೊಳ್ಳಬೇಕು.  ಮತದಾನದ ದಿನದಂದು, ಬಂದು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ.  ಇದರಿಂದ ಯಾವ ಉಪಯೋಗವೂ ಆಗುವುದಿಲ್ಲ.  ೨೦೧೪ ರ ಜನವರಿ ೦೧ ದಿನವನ್ನು ಅರ್ಹತಾ ದಿನವನಾಗಿಸಿಕೊಂಡು, ೧೮ ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಹರಿರುವುದರಿಂದ, ಅಂತಹವರು ನಮೂನೆ-೬ ಅನ್ನು ಭರ್ತಿ ಮಾಡಿ, ಸಂಬಂಧಪಟ್ಟ ಮತಗಟ್ಟೆಗಳು, ತಹಸಿಲ್ದಾರರ ಕಚೇರಿಗಳಲ್ಲಿ ಸಲ್ಲಿಸಬೇಕು.  ತಹಸಿಲ್ದಾರರು, ಗ್ರಾಮಪಂಚಾಯತಿಯವರು ಸಹ ತಮ್ಮ ವ್ಯಾಪ್ತಿಯಲ್ಲಿ ಇದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು.  ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವ ಕಾರ್ಯ ತ್ವರಿತಗೊಳ್ಳಬೇಕು.  ಜಿಲ್ಲೆಯಲ್ಲಿನ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲ ಕಾರ್ಮಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಸಿಕೊಳ್ಳಲು ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು.  ಎಲ್ಲ ಉಪನ್ಯಾಸಕರು ಮತ್ತು ಶಿಕ್ಷಕರು ಶಾಲಾ ಕಾಲೇಜುಗಳಲ್ಲಿ ಬೋಧನೆ ಮಾಡುವಾಗಿ ವಿದ್ಯಾರ್ಥಿಗಳು, ಪಾಲಕರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಕುರಿತು ಅರಿವು ಮೂಡಿಸಬೇಕು.  ವಿವಿಧ ಸಂಘಟನೆಗಳು, ಮಹಿಳಾ ಸಂಘಗಳು, ಸ್ತ್ರೀಶಕ್ತಿ ಗುಂಪುಗಳು, ಯುವಕ ಸಂಘಗಳು ಮತದಾರರ ಹೆಸರು ನೋಂದಣಿಗೆ ಸಕ್ರಿಯರಾಗಿ ಇಲಾಖೆಗಳೊಂದಿಗೆ ಕೈಜೋಡಿಸಬೇಕು.  ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸೂಚನೆ ನೀಡಿದರು.
೧೧೯೨ ಮತಗಟ್ಟೆಗಳು : ಕಳೆದ ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು ೧೧೩೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.  ಇದೀಗ ಹೆಚ್ಚುವರಿಯಾಗಿ ೫೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಮತಗಟ್ಟೆಗಳ ಒಟ್ಟು ಸಂಖ್ಯೆ ೧೧೯೨ ಆಗಲಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೫೨ ಮತಗಟ್ಟೆಗಳು (ಹೆಚ್ಚುವರಿ ೭), ಕನಕಗಿರಿ ಕ್ಷೇತ್ರದಲ್ಲಿ ಒಟ್ಟು ೨೩೯ (ಹೆಚ್ಚುವರಿ-೧೪).  ಗಂಗಾವತಿ- ೨೧೧ (ಹೆಚ್ಚುವರಿ-೧೧).  ಯಲಬುರ್ಗಾ- ೨೩೭ (ಹೆಚ್ಚುವರಿ ೮) ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೫೩ ಮತಗಟ್ಟೆಗಳನ್ನು (ಹೆಚ್ಚುವರಿ-೧೬) ಸ್ಥಾಪಿಸಲಾಗಿದೆ.
ಬೂತ್ ಮಟ್ಟದ ಏಜಂಟರನ್ನು ನೇಮಿಸಿ : ಎಲ್ಲ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರುಗಳನ್ನು ನೇಮಕ ಮಾಡಿ, ಅಂತಹ ಏಜೆಂಟರುಗಳ ಪಟ್ಟಿಯನ್ನು ಸಲ್ಲಿಸುವಂತೆ ಈಗಾಗಲೆ ಸಂಬಂಧಪಟ್ಟ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದ್ದರೂ, ಯಾವುದೇ ರಾಜಕೀಯ ಪಕ್ಷಗಳು ವಿವರ ಸಲ್ಲಿಸಿಲ್ಲ.  ಕೂಡಲೆ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರುಗಳನ್ನು ನೇಮಿಸಿ, ಅಂತಹವರ ಪಟ್ಟಿಯನ್ನು ಸಲ್ಲಿಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಸೇರಿದಂತೆ ಜಿಲ್ಲಾ ಕೈಗಾರಿಕಾ ಕೇಂದ್ರ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು, ತಾಲೂಕುಗಳ ತಹಸಿಲ್ದಾರರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Please follow and like us:
error