fbpx

ಮತ ಚಲಾವಣೆಯೇ ಪ್ರಜಾಪ್ರಭುತ್ವದ ಉಳಿವಿನ ಮಂತ್ರ- ಕೊಟ್ರಪ್ಪ ಚೋರನೂರ

 ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹೊಣೆಗಾರಿಕೆಯನ್ನು ನಮ್ಮ ಸಂವಿಧಾನ ನಿಗದಿಪಡಿಸಿದೆ.   ಪ್ರತಿಯೊಬ್ಬ ಮತದಾರ, ತನ್ನ ಹಕ್ಕು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ದೊರಕಿದಂತೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಹೇಳಿದರು.
  ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ, ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ವಿದ್ಯಾಲಯವತಿಯಿಂದ ತಾಲೂಕಿನ ಹಲಗೇರಿಯಲ್ಲಿ ಎನ್.ಎಸ್.ಎಸ್. ಶಿಬಿರದ ಅಂಗವಾಗಿ ಏರ್ಪಡಿಸಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  
  ಮತದಾನ ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ. ಯಾವುದೇ ಸರ್ಕಾರ ರಚನೆಗೆ ಚುನಾವಣೆ ಪ್ರಕ್ರಿಯೆ ಪ್ರಮುಖವಾಗಿದ್ದು, ಅರ್ಹ ಮತದಾರ, ಅದನ್ನು ಚಲಾಯಿಸುವ ಮೂಲಕ ತನ್ನ ಕರ್ತವ್ಯ ನಿರ್ವಹಿಸಬೇಕಿದೆ.  ಪ್ರತಿಯೊಂದು ಮತವೂ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಸಾಧ್ಯವಿಲ್ಲ ಎಂಬ ಮತದಾರರ ನಿರ್ಲಕ್ಷ್ಯ ಮನೋಭಾವ ಬದಲಾಗಬೇಕಿದೆ. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದು ಆದ್ಯ ಕರ್ತವ್ಯ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬ ನಾಗರೀಕ ತಪ್ಪದೇ ಮತದಾನ ಮಾಡಬೇಕು.   ಪ್ರತಿಯೊಬ್ಬ ಮತದಾರನು ನಿರ್ಭಯದಿಂದ ಮತ ಚಲಾಯಿಸಬೇಕು.  ಜಾತಿ, ಹಣ, ಮತ್ತಿತರ ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸುತ್ತೇವೆ ಎಂದು ಪ್ರಮಾಣ ಮಾಡಬೇಕು.  ಶೇಕಡವಾರು ಮತದಾನ ಹೆಚ್ಚಾಗುವಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಅವರು ಮನವಿ ಮಾಡಿದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಪ್ರತಿನಿಧಿಗಳನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಮಹತ್ತರ ಜವಾಬ್ದಾರಿ ಈ ನಾಡಿನ ಪ್ರತಿಯೊಬ್ಬ ಮತದಾರನ ಮೇಲಿದ್ದು, ಈ ಜವಾಬ್ದಾರಿಯ ಮಹತ್ವವನ್ನು ಅರಿತು, ಎಲ್ಲ ಮತದಾರರು ತಪ್ಪದೆ ತಮ್ಮ ಮತ ಚಲಾಯಿಸಬೇಕು.  ಮತದಾರ ಎನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಮರೆತಲ್ಲಿ, ಅಂತಹ ವ್ಯಕ್ತಿ ಯಾವುದೇ ಸೌಲಭ್ಯ ಕೇಳುವುದು ಅಥವಾ ಆರೋಪಿಸುವ ನೈತಿಕತೆಯನ್ನು ಕಳೆದುಕೊಂಡಂತಾಗುತ್ತದೆ.  ಪ್ರತಿಯೊಂದು ಮತವೂ, ಚುನಾವಣೆಯ ಫಲಿತಾಂಶದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದ್ದು, ಅಂತಹ ಅಮೂಲ್ಯವಾದ ಮತವನ್ನು ಹಣದ ಆಸೆಗೆ ಅಥವಾ ಹೆಂಡ, ಮದ್ಯದ ಚಟಕ್ಕೆ ಮಾರಾಟ ಮಾಡಿಕೊಂಡಲ್ಲಿ, ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಮಾರಕವಾಗಲಿದೆ ಎಂದರು.
  ಶಿಕ್ಷಣ ಪ್ರೇಮಿ ರಾಯನಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಶಿಕ್ಷಕರುಗಳಾದ ಶರಣಪ್ಪ ಮುಂಡರಗಿ, ವೀರನಗೌಡ ಮಾಲಿಪಾಟೀಲ್, ಎನ್.ಎಸ್.ಎಸ್. ಅಧಿಕಾರಿ ಬಸವರಾಜ ಎಸ್.ಎಂ., ಕಲಾವಿದ ಹನುಮಂತಪ್ಪ ಈಳಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಶಿಬಿರಾರ್ಥಿ ರಮೇಶ್‌ರಾವ್ ಗಾಯಕವಾಡ್ ಸ್ವಾಗತಿಸಿದರು, ಸಿದ್ದೇಶ್ ಪಾಟೀಲ್ ವಂದಿಸಿದರು, ಮುರಳಿರಾವ್, ರಾಕೇಶ್ ನಿರೂಪಿಸಿದರು.  ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಎಲ್ಲ ಮತದಾರರು ಕಡ್ಡಾಯ ಮತದಾನ ಮಾಡುವ ಕುರಿತು ಶಿಬಿರಾರ್ಥಿಗಳು ಹಾಗೂ ಹಲಗೇರಿ ಗ್ರಾಮದ ಸಾರ್ವಜನಿಕರು ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
Please follow and like us:
error

Leave a Reply

error: Content is protected !!