ಒತ್ತಡದ ಬದುಕು ನಿವಾರಣೆಗೆ ಕ್ರೀಡೆಗಳು ಸಹಕಾರಿ : ಡಿಸಿ ಆರ್.ಆರ್. ಜನ್ನು

ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸುವವರಿಗೆ ಕ್ರೀಡಾ ಕೂಟಗಳು ಕರ್ತವ್ಯ ದಕ್ಷತೆಯನ್ನು ಪುನಶ್ಚೇತನಗೊಳಿಸಿ, ಆತ್ಮಸ್ಥೈರ್ಯ ವೃದ್ಧಿಸಲು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.
     ಕೊಪ್ಪಳ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
      ಪೊಲೀಸರು  ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸಬೇಕಾಗುತ್ತದೆ,  ಅಲ್ಲದೆ ದಿನದ 24 ಗಂಟೆಗಳೂ ಸಹ ಅವರು ಸಾರ್ವಜನಿಕರ ಸೇವೆಗೆ ಸನ್ನದ್ಧರಾಗಿರಬೇಕಾಗುತ್ತದೆ.  ಈ ರೀತಿಯ ಮಾನಸಿಕ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವವರಿಗೆ ಇಂತಹ ಕ್ರೀಡಾಕೂಟಗಳು ಮನಸ್ಸನ್ನು ಉಲ್ಲಸಿತಗೊಳಿಸುವುದರ ಜೊತೆಗೆ, ಅವರಲ್ಲಿ ಆತ್ಮ ಸ್ಥೈರ್ಯ ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ.   ಪೊಲೀಸರು, ಮಾನಸಿಕ ಆರೋಗ್ಯದ ಜೊತೆ ಜೊತೆಗೆ ದೈಹಿಕ ಸದೃಢತೆಯನ್ನು ಕಾಯ್ದುಕೊಂಡು ಬರಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಕ್ರೀಡೆಗಳು ದೇಹಕ್ಕೆ ಶಕ್ತಿ ಹಾಗೂ ಸ್ಪೂರ್ತಿ ನೀಡುತ್ತವೆ.  ಕೊಪ್ಪಳದಲ್ಲಿ ಡಿ. 25 ರಂದು ಸಂಭವಿಸಿದ ನೀರಿನ ಬೃಹತ್ ಟ್ಯಾಂಕ್ ಕುಸಿತ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕಾರ್ಮಿಕರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿದ ಪರಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದ್ದು, ಈ ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು ಪ್ರಾರಂಭದಲ್ಲಿ ಸ್ವಾಗತ ಭಾಷಣ ನೆರವೇರಿಸಿದರು. ಕೊಪ್ಪಳ ಡಿವೈಎಸ್‍ಪಿ ರಾಜೀವ್  ಅವರು ವಂದಿಸಿದರು.  ಜಿಲ್ಲೆಯ ವಿವಿಧ ತಾಲೂಕುಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

Leave a Reply