ವಿಪತ್ತು ನಿರ್ವಹಣೆ : ವಾರದೊಳಗೆ ಅಗತ್ಯ ಮಾಹಿತಿ ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಸೂಚನೆ

 ಪ್ರಕೃತಿ ವಿಕೋಪ ಅಥವಾ ಮಾನವ ನಿರ್ಮಿತ ವಿಪತ್ತುಗಳ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡಲ್ಲಿ, ತ್ವರಿತವಾಗಿ ಹಾಗೂ ಸಮರ್ಥವಾಗಿ ವಿಕೋಪವನ್ನು ನಿರ್ವಹಿಸಲು ಸಾಧ್ಯವಾಗಲಿದ್ದು, ಇದಕ್ಕೆ ಅಗತ್ಯವಿರುವ ಇಲಾಖಾವಾರು ಮಾಹಿತಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
   ಕೊಪ್ಪಳ ಜಿಲ್ಲೆಯ ವಿಪತ್ತು ನಿರ್ವಹಣೆ ಯೋಜನೆಯನ್ನು ಸ್ವಯಂಚಾಲನೆಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಂಪ್ಯೂಟರ್ ಆಪರೇಟರ‍್ಸ್‌ಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಪ್ರಕೃತಿ ವಇಕೋಪ ಅಥವಾ ಮಾನವ ನಿರ್ಮಿತ ವಿಪತ್ತುಗಳ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಮಹತ್ವದ ಜವಾಬ್ದಾರಿ ಇದೆ.  ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ವಿಕೋಪ ನಿರ್ವಹಣೆ ಅತ್ಯಂತ ಸುಲಭವಾಗಲಿದೆ.   ಯಾವುದೇ ಬಗೆಯ ವಿಪತ್ತು ನಿರ್ವಹಣೆಯಲ್ಲಿ ಕಂದಾಯ, ಆಹಾರ, ಪೊಲೀಸ್, ಪಂಚಾಯತಿ ರಾಜ್ ಸೇರಿದಂತೆ ಎಲ್ಲ ಇಲಾಖೆಗಳಿಗೂ ತನ್ನದೇ ಆದ ಮಹತ್ವಪೂರ್ಣ ಜವಾಬ್ದಾರಿ ಇದೆ.  ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳೂ ತಮ್ಮ ತಮ್ಮ ಜವಾಬ್ದಾರಿಯನ್ನು ವಹಿಸಿ, ತ್ವರಿತವಾಗಿ ವಿಪತ್ತಿಗೆ ಸ್ಪಂದಿಸುವ ರೀತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ.  ಸ್ವಯಂ ಚಾಲಿತ ವಿಕೋಪ ನಿರ್ವಹಣಾ ಯೋಜನೆಯನ್ನು ಜಿಲ್ಲೆಯಲ್ಲೂ ಜಾರಿಗೊಳಿಸಲಾಗುತ್ತಿದ್ದು, ಇದಕ್ಕಾಗಿ ಈಗಾಗಲೆ ಅಗತ್ಯ ಸಾಫ್ಟ್‌ವೇರ್ ಸಿದ್ಧಗೊಂಡಿದ್ದು, ಇದರಲ್ಲಿ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಅಳವಡಿಸಬೇಕಾಗಿದೆ.  ಈಗಾಗಲೆ ಆಯಾ ಇಲಾಖೆಗಳು ನೀಡಬೇಕಿರುವ ಮಾಹಿತಿಯ ಬಗೆಗಿನ ನಮೂನೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದ್ದು.  ಒಂದು ವಾರದ ಒಳಗಾಗಿ ಎಲ್ಲ ಇಲಾಖಾ ಅಧಿಕಾರಿಗಳು ಮಾಹಿತಿಯನ್ನು ಸಲ್ಲಿಸಬೇಕು.  ಅಲ್ಲದೆ ನಿಖರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸೂಚನೆ ನೀಡಿದರು.
  ಜಿಲ್ಲಾ ಎನ್‌ಐಸಿ ಅಧಿಕಾರಿ ವೀರಣ್ಣ ಏಳುಬಾವಿ ಹಾಗೂ ವೆಂಕಟೇಶ್ ಅವರು ವಿಪತ್ತು ನಿರ್ವಹಣೆಗೆ ಸಂಬಂಧಿತ ಮಾಹಿತಿಯನ್ನು ಆಯಾ ಇಲಾಖೆಗಳು ನಿಗದಿತ ತಂತ್ರಾಂಶದಲ್ಲಿ ಅಳವಡಿಸುವ ಕುರಿತಂತೆ ಅಧಿಕಾರಿ, ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ತರಬೇತಿ ನೀಡಿದರು.
  ಸಹಾಯಕ ಆಯುಕ್ತ ಮಂಜುನಾಥ್, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್‌ಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
Please follow and like us:
error

Related posts

Leave a Comment