fbpx

ಕಸಾಪ ಕಾರ್ಯಗಳು ಶ್ಲಾಘನೀಯ ಅರಳಿ ನಾಗರಾಜ.

ಕೊಪ್ಪಳ, ನ.೦೭ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಜನಪದ ಕ್ಷೇತ್ರಗಳ ವಿಸ್ತರಣೆಗೆ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು, ಅದರ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಅರಳಿ ನಾಗರಾಜ ಪ್ರಶಂಸಿಸಿದರು.
     ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ೬೦ನೇ ಕನ್ನಡ ರಾಜ್ಯೋತ್ಸವ, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ ಹಾಗೂ ಕಸಾಪ ಅಜೀವ ಸದಸ್ಯರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
       ಜಿಲ್ಲೆಯಲ್ಲಿ ೪೨ ತಿಂಗಳ ಕಾಲಾವಧಿಯಲ್ಲಿ ೧೪ ಸಮ್ಮೇಳನಗಳನ್ನು ಹಾಗೂ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರ ಗಮನ ಸೆಳೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯಕ್ರಮಗಳು ನಿಜಕ್ಕೂ ಪ್ರಶಂಸಾರ್ಹವಾಗಿವೆ ಎಂದು ಅರಳಿ ನಾಗರಾಜ ಅವರು ಸಂತಸ ವ್ಯಕ್ತಪಡಿಸಿದರು. 
     ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ತಮ್ಮ ಕಾಲಾವಧಿಯಲ್ಲಿ ಕಸಾಪ ನಡೆಸುವ ಕಾರ್ಯಕ್ರಮಗಳಿಗೆ ಸದಾ ಸಂಪೂರ್ಣ ಬೆಂಬಲ ನೀಡಿದ ಸಾರ್ವಜನಿಕರು, ಪತ್ರಕರ್ತರು, ಜಿಲ್ಲಾ ಕಸಾಪದ ಸರ್ವ ಸದಸ್ಯರು, ಕನ್ನಡಪರ ಸಂಘಟನೆಗಳು, ಅಜೀವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಬಂಡಾಯ ಸಾಹಿತಿ ಪ್ರೊ||ಅಲ್ಲಮಪ್ರಭು ಬೆಟ್ಟದೂರ ಅವರು ‘ಕರ್ನಾಟಕ ಏಕೀಕರಣ’ದ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಅಕ್ಬರ್ ಸಿ.ಕಾಲಿಮಿರ್ಚಿ, ಅಭಿನಂದನಾ ನುಡಿ ಸಲ್ಲಿಸಿದರು.
     ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ್ ಹಾಗೂ ಸ್ವತಂತ್ರ ಯೋಧರಾದ ಅಳವಂಡಿಯ ಫಕೀರೆಡ್ಡೆಪ್ಪ ಗದ್ದನಕೇರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಹಾಗೂ ಜಿಲ್ಲೆಯ ಎಲ್ಲಾ ಹೋಬಳಿ ಕಸಾಪ ಅಧ್ಯಕ್ಷರಿಗೆ ಗೌರವ ಸಮರ್ಪಣೆ ನೀಡಲಾಯಿತು. ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ||ಕೆ.ಬಿ.ಬ್ಯಾಳಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿ.ಕಾ.ಬಡಿಗೇರ, ಚಂದಪ್ಪ ಅಕ್ಕಿ, ಎಸ್.ಎನ್.ಮಾಲೀಪಾಟೀಲ್ ಸೇರಿದಂತೆ ವಿವಿಧ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಅಕ್ಕಮಹಾದೇವಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಆರ್.ಎಸ್.ಸರಗಣಾಚಾರ ಸ್ವಾಗತಿಸಿದರು. ದೇವಪ್ಪ ವಾಲ್ಮೀಕಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶಿವಾನಂದ ಮೇಟಿ ವಂದಿಸಿದರು.

Please follow and like us:
error

Leave a Reply

error: Content is protected !!