ಇಂದ್ರಕೀಲ ನಗರ ವಿಶ್ವ ಪರಿಸರ ದಿನ ಆಚರಣೆ.

 ಕೊಪ್ಪಳ, ೨೪-  ನಗರದ ಪರಿಸರ ರಕ್ಷಣೆ, ಬೆಳವಣಿಗೆಗೆ ಮುಂದಾಗಿರುವ ಶ್ರೀ ಗವಿಶ್ರೀ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ  ಹಾಗೂ ಎಂ.ಎಸ್.ಪಿ.ಎಲ್. ಕಂಪನಿ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಅಲ್ಲದೇ ಪರಿಸರ ರಕ್ಷಣೆ, ನಗರ ಸ್ವಚ್ಛತೆಗೆ ಜನರು ಕೈ ಜೋಡಿಸಬೇಕೆಂದು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ ಹೇಳಿದರು.
ಅವರು ನಗರದ ೨೨ ನೇ ವಾರ್ಡನ ಇಂದ್ರಕೀಲ ನಗರದಲ್ಲಿ ಶ್ರೀಗವಿಶ್ರೀ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸೇವಾ ಸಂಸ್ಥೆ (ರಿ) ಕೊಪ್ಪಳ ಮತ್ತು ಎಂ.ಎಸ್.ಪಿ.ಎಲ್. ಪೆಲ್ಲೆಟ್ ಪ್ಲಾಂಟ್ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಗರದಲ್ಲಿ ತಾಪಮಾನ ಹೆಚ್ಚುತ್ತಿದ್ದು ಮನೆಗೆ ಎರಡು ಸಸಿ ನೆಡುವುದರ ಮೂಲಕ ಅವುಗಳನ್ನು ಬೆಳೆಸಿ ಉಳಿಸಿದಾಗ ನಾವು- ನೀವೆಲ್ಲರೂ ಉತ್ತಮ ಆರೋಗ್ಯದಿಂದ ಇರಲು ಸಾಧ್ಯವೆಂದು ತಿಳಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ಗ.ರಾ.ಸುರೇಶ ಮಾತನಾಡಿ ಪ್ಲಾಸ್ಟಿಕ್ ಬಳಕೆಯನ್ನು ಸಾರ್ವಜನಿಕರು ಬಿಡಬೇಕು. ಸ್ವಾರ್ಥಕ್ಕೆ ಮನುಷ್ಯ ಪರಿಸರ ನಾಶ ಮಾಡುವುದು ವಿನಾಶಕ್ಕೆ ಹಾದಿ ಎಂದೂ ಎಚ್ಚರಿಸಿದರು.ಕೃಷಿ ಇಲಾಖೆ ಉಪಕೃಷಿ ನಿರ್ದೇಶಕ ವೀರೇಶ ಹುನಗುಂದ ಮಾತನಾಡಿ ಪರಿಸರ ನಾಶ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ ಎಂದು ತಿಳಿಸಿದರಲ್ಲದೇ ಮನುಷ್ಯ ವಿನಾಶದಿಂದ ಪಾರಾಗಲು ಪ್ರತಿಯೊಬ್ಬರೂ ಕನಿಷ್ಠ ೪ ಮರ ಬೆಳೆಸುವ ಮೂಲಕ ಸಾರ್ಥಕತೆ ಕಾಣಬೇಕೆಂದರು. ಎಂ.ಎಸ್.ಪಿ.ಎಲ್. ಪೆಲ್ಲೆಟ್ ಪ್ಲಾಂಟ್‌ನ ರಾಮನಗೌಡ ಮಾತನಾಡಿ ನಗರದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪರಿಸರ ಬೆಳವಣಿಗೆಗೆ ಅಗತ್ಯ ಸಹಕಾರ ನೀಡಲು  ನಮ್ಮ ಕಂಪನಿ ಸದಾ ಸಿದ್ಧವಾಗಿದ್ದು ಎಷ್ಟೇ ಸಸಿ ಮತ್ತು ಟ್ರೀ ಗಾರ್ಡ್‌ಗಳನ್ನು ನೀಡುವುದಾಗಿ ಭರವಸೆ ನೀಡಿದರು.ಅಧ್ಯಕ್ಷತೆಯನ್ನು ವಾರ್ಡ್‌ನ ಸದಸ್ಯ ಪ್ರಾಣೇಶ ಮಹೇಂದ್ರಕರ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಗವಿಶ್ರೀ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸಂತೋಷ ದೇಶಪಾಂಡೆ, ನಗರಸಭೆ ನೈರ್ಮಲ್ಯಾಧಿಕಾರಿ ಶ್ರೀಮತಿ ಜಯಶೀಲ, ಎಂ.ಎಸ್.ಪಿ.ಎಲ್. ನ ದೀಪಕ್, ವೀರೇಶ ಕೊಪ್ಪಳ ಹಾಗೂ ವಾರ್ಡನ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು.

Please follow and like us:
error