ಚಿಕ್ಕಸಿಂದೋಗಿ ಗ್ರಾಮದಲ್ಲಿ ಶೌಚಾಲಯ ಬಳಕೆಗೆ ಸಂಸದರಿಂದ ಜಾಗೃತಿ.

ಕೊಪ್ಪಳ ಜು. ೦೩ –  ಶೌಚಾಲಯವನ್ನು ಕಟ್ಟಿಸಿಕೊಳ್ಳಲು ಆದ್ಯತೆ ನೀಡುವುದರ ಜೊತೆಗೆ, ಬಳಕೆ ಮಾಡುವುದರ ಮೂಲಕ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಡಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
      ಸ್ವಚ್ಛ ಭಾರತ ಅಭಿಯಾನದಡಿ ಕೊಪ್ಪಳ ತಾಲೂಕಿನ ಕೋಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕ ಸಿಂದೋಗಿ ಗ್ರಾಮದಲ್ಲಿ ಶೌಚಾಲಯ ಬಳಕೆ ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರದಂದು ಪಾಲ್ಗೊಂಡು ಅವರು ಮಾತನಾಡಿದರು.
      ಸ್ವಚ್ಛಭಾರತ ಅಭಿಯಾನದಡಿ ಪ್ರತಿಯೊಬ್ಬರು ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳುವುದಷ್ಟೇ ಅಲ್ಲ.  ಶೌಚಾಲಯ ಬಳಕೆಗೆ ಎಲ್ಲರೂ ಮುಂದಾಗಬೇಕು.  ಸ್ವಚ್ಛತೆ ಮತ್ತು ನೈರ್ಮಲ್ಯದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಗ್ರಾಮವನ್ನು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ನಿರ್ಮಾಣ ಮಾಡಲು ಪಣತೊಡಬೇಕೆಂದು ಗ್ರಾಮಸ್ಥರಲ್ಲಿ ಸಂಸದ ಸಂಗಣ್ಣ ಕರಡಿ ಅವರು ಮನವಿ ಮಾಡಿಕೊಂಡರು.        
      ಶೌಚಾಲಯ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಬಿಲ್ ಪಾವತಿ ಕುರಿತಂತೆ ವಿವಿಧೆಡೆಗಳಿಂದ ದೂರುಗಳು ಕೇಳಿ ಬರುತ್ತಿದ್ದು, ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣದ ಬಿಲ್ ಮೊತ್ತ ಪಾವತಿಸದೆ, ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.  ಅಲ್ಲದೆ ಸುಳ್ಳು ದಾಖಲೆ ಸೃಷ್ಟಿಸಿ ಸರಕಾರದ ಹಣ ಮದ್ಯವರ್ತಿಗಳ ಪಾಲಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ.  ಈ ನಿಟ್ಟಿನಲ್ಲಿ ಸೂಕ್ತ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಡುವದರ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ  ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರಿಗೆ ಸೂಚನೆ ನೀಡಿದರು.
       ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಕೊಪ್ಪಳ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ, ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:

Leave a Reply