ಸಂವಿಧಾನಕೋಸ್ಕರ ಶಾಸ್ತ್ರ ಬಲಿ ಕೊಡಕ್ಕಾಗಲ್ಲ

 ‘ಮಡೆಸ್ನಾನ: ಒಂದು ಸಂವಾದ’ ಪರ-ವಿರೋಧ ಚರ್ಚೆಯಲ್ಲಿ ಪೇಜಾವರ ಶ್ರೀ
ಬೆಂಗಳೂರು, ಜ.8: ಸಂವಿಧಾನ ಅಥವಾ ಶಾಸ್ತ್ರದ ಆಯ್ಕೆಯ ವಿಚಾರ ಬಂದಾಗ ನಾನು ಶಾಸ್ತ್ರಕ್ಕೆ ಆದ್ಯತೆ ನೀಡುತ್ತೇನೆ. ಸಂವಿಧಾನ ಕೋಸ್ಕರ ಹಿರಿಯರು, ಋಷಿಗಳು ರಚಿಸಿದ ಶಾಸ್ತ್ರಗಳನ್ನು ಬಲಿಕೊಡ ಕ್ಕಾಗಲ್ಲ ಎಂದು ಪೇಜಾವರದ ಶ್ರೀವಿಶ್ವೇಶ್ವರತೀರ್ಥ ಸ್ವಾಮೀಜಿ ಹೇಳಿದರು.ನಿಡುಮಾಮಿಡಿ ಮಹಾಸಂಸ್ಥಾನ ಮಠ ಮತ್ತು ಮಾನವ ಧರ್ಮಪೀಠದ ವತಿಯಿಂದ ರವಿವಾರ ನಗರದ ಗಾಂಧಿ ಭನವದಲ್ಲಿ ಏರ್ಪಡಿಸಿದ್ದ ‘ಮಡೆಸ್ನಾನ: ಒಂದು ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಈ ಮೇಲಿನಂತೆ ಹೇಳಿದರು. ಆದರೆ ಈ ಹೇಳಿಕೆ ಬಗ್ಗೆ ಸಭೆಯಲ್ಲಿ ವ್ಯಾಪಕ ಆಕ್ಷೇಪಗಳು ವ್ಯಕ್ತವಾದಾಗ ಪೇಜಾವರ ಶ್ರೀಗಳು ಈ ಬಗ್ಗೆ ಸ್ಪಷ್ಟೀಕರಣ ನೀಡಿದರು.‘ನಾವು ಎಷ್ಟೇ ಕ್ರಾಂತಿಕಾರಿಗಳಾಗಿದ್ದರೂ,ವೇದ ಮತ್ತು ಶಾಸ್ತ್ರದ ಇತಿಮಿತಿಗಳಿವೆ.ಅಧಿಕಾರದಲ್ಲಿರುವವರು ದೇಶದ ಸಂವಿಧಾನ ಒಪ್ಪಿಕೊಂಡಂತೆ ಮಠಾಧೀಶರು ಶಾಸ್ತ್ರಗಳನ್ನು ಒಪ್ಪಿಕೊಂಡಿದ್ದಾರೆ.ಬ್ರಾಹ್ಮಣ ಮಠಾಧೀಶರಿಗೆ ಶಾಸ್ತ್ರಗಳ ಇತಿಮಿತಿ ಸ್ವಲ್ಪ ಹೆಚ್ಚಿರುತ್ತದೆ.ಶಾಸ್ತ್ರದ ಚೌಕಟ್ಟು ನಮಗಿದೆ. ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ.ನಾವು ಶಾಸ್ತ್ರ ಮತ್ತು ಸಂವಿಧಾನ ಎರಡಕ್ಕೂ ಬದ್ಧರಾಗಿ ನಡೆದುಕೊಳ್ಳಬೇಕಾದರೆ ಅನೇಕ ವಿಷಯಗಳಲ್ಲಿ ದ್ವಂದ್ವ ಉಂಟಾಗುವುದು ಸಹಜ ಎಂದರು.
ಸ್ವಾಮೀಜಿಗಳ ಈ ಮಾತಿನಿಂದ ಸಭೆಯಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ವ್ಯಕ್ತವಾಗಿ ಚರ್ಚೆಗೆ ಗ್ರಾಸವಾಯಿತು. ಹಿರಿಯ ವಕೀಲ ರವಿವರ್ಮ ಕುಮಾರ್, ಚಿಂತಕ ಜಿ.ಕೆ. ಗೋವಿಂದರಾವ್, ದಲಿತ ಮುಖಂಡ ಮಾವಳ್ಳಿ ಶಂಕರ್ ಸ್ವಾಮೀಜಿಯ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಅನಂತರ ತಮ್ಮ ಹೇಳಿಕೆ ಬಗ್ಗೆ ಸಮಜಾಯಿಷಿ ನೀಡಿದ ಪೇಜಾವರ ಸ್ವಾಮೀಜಿ, ‘ನಾನು ಸಂವಿಧಾನಕ್ಕೆ ವಿರೋಧಿ ಅಲ್ಲ.ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಅದನ್ನು ನಾನು ಗೌರವಿಸುತ್ತೇನೆ. ಆದರೆ, ಶಾಸ್ತ್ರ ಮತ್ತು ಸಂವಿಧಾನದ ವಿಚಾರ ಬಂದಾಗ ಸಂವಿಧಾನಕ್ಕೆ ವಿರೋಧವಾಗದಂತೆ ಶಾಸ್ತ್ರ ಮತ್ತು ಸಂವಿಧಾನದ ನಡುವೆ ಸಮನ್ವಯತೆ ಸಾಧಿಸಿ ಮುನ್ನಡೆಯುತ್ತೇನೆ’ ಎಂದು ಹೇಳಿದರು. 
ನಿಖರ ಉತ್ತರ ಬಂದಿಲ್ಲ: ಸಾಣೆಹಳ್ಳಿ ಸ್ವಾಮೀಜಿ
ಸಂವಾದದ ಅಧ್ಯಕ್ಷತೆ ವಹಿಸಿದ್ದ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಪೇಜಾವರ ಶ್ರೀಗಳಿಂದ ನಿಖರವಾದ ಉತ್ತರ ಬಂದಿಲ್ಲ ಎನ್ನುವ ಅಸಮಾಧಾನ ಈ ಸಭೆಗೆ ಇದೆ.ಆದರೆ,ಮಾನವೀಯತೆಗೆ ವಿರೋಧವಾದ ಎಲ್ಲ ಆಚರಣೆ ನಿಷೇಧ ಆಗಬೇಕು ಎಂದು ನಮ್ಮೆಲ್ಲರ ಒತ್ತಾಯ.ಪೇಜಾವರ ಶ್ರೀಗಳು ಮಡೆಸ್ನಾನ ನಿಷೇಧದ ವಿಚಾರದಲ್ಲಿ ನಮ್ಮ ಜೊತೆಗೆ ಇದ್ದಾರೆ ಎನ್ನುವುದು ನಮಗೆ ಸಂತೋಷ ಉಂಟು ಮಾಡಿದೆ.ಈ ವಿಷಯ ಇಂದಿನ ಸಂವಾದದ ಸಾರ್ಥಕತೆ.ಬೇರೆ ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದಂತೆ ಉಪವಾಸ ಕೂರುವ ಘೋಷಣೆ ಮಾಡಿದಂತೆ ಶ್ರೀಗಳು ‘ಸರಕಾರ ಮಡೆಸ್ನಾನ ನಿಷೇಧ ಮಾಡದಿದ್ದರೆ ಉಪವಾಸ ಕೂರುತ್ತೇನೆ’ಎಂದು ಘೋಷಣೆ ಮಾಡಿದರೆ ಸರಕಾರದ ಮೇಲೆ ಹೆಚ್ಚಿನ ಒತ್ತಡ ತಂದಂತಾಗುತ್ತದೆ ಎಂದು ಸಲಹೆ ನೀಡಿದರು.
ನಿಮ್ಮ ಶಿಷ್ಯ ವೃತ್ತಿ ಸ್ವೀಕರಿಸುತ್ತೇನೆ:ನಿಡುಮಾಮಿಡಿ ಸವಾಲು
‘ಸದಾಶಯ ನುಡಿಗಳನ್ನಾಡಿದ ವೀರಭದ್ರಚನ್ನಮಲ್ಲ ಸ್ವಾಮೀಜಿ,ನೀವು ಪೀಠದಲ್ಲಿ ಇರುವುದರೊಳಗೆ ಕೃಷ್ಣ ಮಠದಲ್ಲಿ ಪಂಕ್ತಿಭೇದ ನಿಷೇಧಿಸಿ.ಈ ಬಗ್ಗೆ ಸಪ್ತಮಠಗಳ ಪೀಠಾಧಿಪತಿಗಳಿಗೆ ಮನವೊಲಿಸಿ.ಹಿಂದೂಗಳೆಲ್ಲ ಒಂದು;ಹಿಂದೂಗಳೆಲ್ಲ ಬಂಧು ಅನ್ನುವುದಕ್ಕೆ ನೀವು ಸಾಕಷ್ಟು ತ್ಯಾಗ ಮಾಡಿದ್ದೀರಿ.ಈ ವಿಚಾರದಲ್ಲಿ ನಾನು ನಿಮ್ಮ ಮುಂದೆ ದುಬಾರಿ ಬೇಡಿಕೆಯೇನು ಇಡುತ್ತಿಲ್ಲ.ನಿಮ್ಮ ಪೀಠದಿಂದ ಅಂತರ್ಜಾತಿ ವಿವಾಹ ನಡೆಯಲಿ ಎಂದು ಹೇಳಲು ಸಾಧ್ಯವೇ.ಭಕ್ತರಿಗೆ ಅಲ್ಲದಿದ್ದರೂ,ಹಿಂದುಳಿದ ಸಮುದಾಯಗಳ ಮಠಾಧೀಶರಿಗೆ ವರ್ಷದಲ್ಲಿ ಕನಿಷ್ಠ ಒಂದು ದಿನ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡುತ್ತೀರಾ?ಜಾತ್ಯತೀತ ತತ್ವದಲ್ಲಿ ನಿಮಗೆ ನಂಬಿಕೆ ಇದ್ದರೆ,ಈ ವೇದಿಕೆ ಮೂಲಕ ಈ ಬಗ್ಗೆ ಭರವಸೆ ನೀಡಿದರೆ‘ನಾನೇ ನಿಮ್ಮ ಶಿಷ್ಯ ವೃತ್ತಿಯನ್ನು ಸ್ವೀಕರಿಸುತ್ತೇನೆ’ಎಂದು ಪೇಜಾವರ ಸ್ವಾಮೀಜಿಗೆ ಸವಾಲು ಹಾಕಿದರು.
ಮಡೆಸ್ನಾನ ನಿಷೇಧ:ಸರ್ಕಾರಕ್ಕೆ ಆಗ್ರಹ
ಬೆಂಗಳೂರು:ರಾಜ್ಯದಲ್ಲಿ ಮಡೆಸ್ನಾನ ಪದ್ಧತಿ ಆಚರಣೆ ನಿಷೇಧಕ್ಕೆ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ ಪೇಜಾವರ ಮಠದ ವಿಶ್ವೇಶತೀರ್ಥರು ಸೇರಿದಂತೆ ವಿವಿಧ ಮಠಾಧಿಪತಿಗಳು ಭಾನುವಾರ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಂಡರು.
ನಿಡುಮಾಮಿಡಿ ಮಹಾಸಂಸ್ಥಾನವು ನಗರದ ಕುಮಾರಕೃಪಾ ಪೂರ್ವದಲ್ಲಿರುವ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ `ಮಡೆಸ್ನಾನ:ಒಂದು ಸಂವಾದ`ಕಾರ್ಯಕ್ರಮದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಸುಮಾರು ಮೂರು ಗಂಟೆ ಕಾಲ ನಡೆದ ಸಂವಾದದ ಬಳಿಕ ಅಧ್ಯಕ್ಷತೆ ವಹಿಸಿದ್ದ ಹೊಸದುರ್ಗದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,`ಮಡೆಸ್ನಾನ ಪದ್ಧತಿ ನಿಷೇಧಕ್ಕೆ ಸೂಕ್ತ ಕಾನೂನು ರಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ` ಎಂದು ಪ್ರಕಟಿಸಿದರು.
ಅಸಮಾಧಾನ:`ಮಡೆಸ್ನಾನ ನಿಷೇಧಕ್ಕೆ ಸಂಬಂಧಪಟ್ಟಂತೆ ವಿಶ್ವೇಶ್ವತೀರ್ಥರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬ ಅಸಮಾಧಾನವಿದೆ.ಆದರೂ ಈ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕು ಎಂಬ ಒತ್ತಾಯದ ಹೋರಾಟದಲ್ಲಿ ಅವರು ನಮ್ಮಂದಿಗೆ ಇರುವುದಾಗಿ ಘೋಷಿಸಿರುವುದು ಸಂತೋಷದ ಸಂಗತಿ` ಎಂದರು.
`ವಿಶ್ವೇಶತೀರ್ಥರು ಸೇರಿದಂತೆ ಯಾರ ಮಾತನ್ನು ಸರ್ಕಾರ ಆಲಿಸುವುದಿಲ್ಲ. ಆದರೆ ಸಾರ್ವಜನಿಕರ ಒತ್ತಾಯಕ್ಕೆ ಸರ್ಕಾರ ಮಣಿಯಬೇಕಾಗುತ್ತದೆ.ಅಸಮಾನತೆಯನ್ನು ಅನುಸರಿಸುವ ಹಿಂದೂ ಧರ್ಮವನ್ನು ಒಪ್ಪುವುದಾದರೂ ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತದೆ.ಹಾಗಾಗಿ ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಎಲ್ಲರೂ ದನಿಯೆತ್ತಬೇಕಿದೆ` ಎಂದು ಹೇಳಿದರು.

ಇದಕ್ಕೂ ಮೊದಲು ಆಶಯ ನುಡಿಗಳನ್ನಾಡಿದ ನಿಡುಮಾಮಿಡಿ ಮಹಾಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ,`ಮಡೆಸ್ನಾನದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಕ್ತ ಸಂವಾದ ಆಯೋಜಿಸಲಾಗಿದೆ.ಮಡೆಸ್ನಾನದ ಬಗ್ಗೆ ಚಿಂತಿಸುವಾಗ ಒಂದು ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ.ಮಾನವೀಯತೆ,ಮಾನವ ಧರ್ಮವೇ ಎಂಜಲೆಲೆಯ ಮೇಲೆ ಉರುಳಾಡಿದಷ್ಟು ಬೇಸರವಾಯಿತು` ಎಂದರು.
`ವಿಶ್ವೇಶತೀರ್ಥರಲ್ಲಿ ಇಷ್ಟವಾಗುವ ಹಾಗೂ ಇಷ್ಟವಾಗದ ಹಲವು ವಿಚಾರಗಳಿವೆ.ಅವರ ಸ್ಪಂದನಶೀಲ ವ್ಯಕ್ತಿತ್ವ ಕಂಡರೆ ಬಹಳ ಪ್ರೀತಿ.ಅವರಲ್ಲಿ ಮಠದ ಸಾಂಪ್ರದಾಯಿಕ ಗಡಿಗಳನ್ನು ಮೀರುವ ತುಡಿತವಿದೆ.ಮಾಧ್ವ ಪರಂಪರೆಯಲ್ಲಿ ಹೊಸ ಸುಧಾರಣೆ ತರುವ ಮೂಲಕ ಸಂಚಲನ ಮೂಡಿಸಿದ್ದಾರೆ.ಸಂವಾದ ಮನೋಭಾವ,ಕ್ರಿಯಾಶೀಲ ಕಾರ್ಯವೈಖರಿ ಬಗ್ಗೆ ಗೌರವವಿದೆ` ಎಂದರು.
`ಆದರೆ ಸುಧಾರಣೆ, ಪರಿವರ್ತನೆಯ ವಿಷಯ ಬಂದಾಗ ಅವರ ನಿಲುವು ಗೊಂದಲಮಯವಾಗಿರುತ್ತದೆ.ಸ್ಪಷ್ಟವಾದ ನಿರ್ಧಾರವನ್ನು ಅವರು ವ್ಯಕ್ತಪಡಿಸುವುದಿಲ್ಲ. ಮಡೆಸ್ನಾನ ಕುರಿತಂತೆ ಹಲವು ಗೊಂದಲಮಯ ಹೇಳಿಕೆ ನೀಡಿದ್ದಾರೆ.ಜನರ ಅಭಿಪ್ರಾಯಗಳಿಗೆ ಅನುಗುಣವಾಗಿ ನಿಲುವು ಬದಲಾಯಿಸುವುದು ಸರಿಯಲ್ಲ` ಎಂದು ನೇರ ಆರೋಪ ಮಾಡಿದರು.
ಶಿಷ್ಯ ವೃತ್ತಿ ಸ್ವೀಕರಿಸುತ್ತೇನೆ:`ನನ್ನ ದುಬಾರಿಯಲ್ಲದ ಕೆಲವು ಬೇಡಿಕೆಗಳಿವೆ.ಪೇಜಾವರ ಮಠದಲ್ಲಿ ತಾವಿರುವಾಗಲೇ ಪಂಕ್ತಿ ಭೇದವನ್ನು ನಿಷೇಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಿಂದುಗಳೆಲ್ಲಾ ಹುಟ್ಟಿನಿಂದ ಸಮಾನರು.ಹಾಗಾಗಿ ಅಂತರಜಾತಿ ವಿವಾಹ, ವಿಧವಾ ವಿವಾಹವಾಗುವಂತೆ ಜನತೆಗೆ ಸಂದೇಶ ನೀಡಬೇಕು.ಅಷ್ಟಮಠಗಳಲ್ಲಿ ವರ್ಷದಲ್ಲಿ ಒಂದು ದಿನ ಹಿಂದುಳಿದ,ದಲಿತ ಸಮುದಾಯದ ಧಾರ್ಮಿಕ ಮುಖಂಡರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಈ ಬೇಡಿಕೆಗಳನ್ನು ಈಡೇರಿಸಿದರೆ ನಾನು ನಿಮ್ಮ ಬಳಿ ಶಿಷ್ಯವೃತ್ತಿ ಸ್ವೀಕರಿಸುತ್ತೇನೆ` ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವೇಶತೀರ್ಥರು,`ನನಗೆ ಕೆಲವೊಂದು ಇತಿಮಿತಿ ಇದೆ.ಸಮಾಜದ ಬಗ್ಗೆ ತುಡಿತವೂ ಇದೆ. ಧರ್ಮಶಾಸ್ತ್ರದ ಚೌಕಟ್ಟನ್ನು ಮೀರುವಂತಿಲ್ಲ. ಪರಂಪರೆಯ ಸಂವಿಧಾನ ಹಾಗೂ ದೇಶದ ಸಂವಿಧಾನ ಎರಡಕ್ಕೂ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ಇದು ಕೆಲವರಿಗೆ ಗೊಂದಲವೆನಿಸಬಹುದು` ಎಂದರು.
`ಮಡೆಸ್ನಾನದ ಬಗ್ಗೆ 500ವರ್ಷಗಳ ಹಿಂದೆ ವಾದಿರಾಜರು ಉಲ್ಲೇಖ ಮಾಡಿದ್ದಾರೆ.ಆದರೆ ಬ್ರಾಹ್ಮಣರು ಊಟ ಮಾಡಿದ ಎಲೆಗಳ ಮೇಲೆ ಉರುಳು ಸೇವೆ ಮಾಡಿ ಎಂದು ಎಲ್ಲಿಯೂ ಹೇಳಿಲ್ಲ.ಸುಬ್ರಹ್ಮಣ್ಯ ಕ್ಷೇತ್ರ ಅಷ್ಟು ಪವಿತ್ರ ಎಂಬುದಕ್ಕೆ ಆ ಉಲ್ಲೇಖವಿದೆ.ನಾನುದು ಖಾರವಾಗಿ ಪ್ರತಿಕ್ರಿಯಿಸಿದರು.
 ಎಲ್ಲಿಯೂ ಮಡೆಸ್ನಾನವನ್ನು ಸಮರ್ಥಿಸಿಲ್ಲ.ಮಡೆಸ್ನಾನದಿಂದಲೇ ಹಿಂದು ಪರಂಪರೆ ಉಳಿಯಬೇಕಿಲ್ಲ`ಎಂ
`ಹಿಂದೂ ಧರ್ಮದ ಆಚರಣೆಗಳನ್ನಷ್ಟೇ ವಿರೋಧಿಸಲಾಗುತ್ತಿದೆ.ಮುಸ್ಲಿಮರು ಹಬ್ಬದ ಸಂದರ್ಭದಲ್ಲಿ ಒಂದೇ ತಟ್ಟೆಯಲ್ಲಿ ಆಹಾರ ಸೇವಿಸುವುದು ಕೂಡ ಎಂಜಲು ಸೇವಿಸಿದಂತಾಗುತ್ತದೆ.ಪತ್ನಿಗೆ ಸರಳವಾಗಿ ವಿಚ್ಛೇದನ ನೀಡಿ ಮರು ಮದುವೆಯಾಗುವ ಅವಕಾಶ ನೀಡಲಾಗಿದೆ.ಇದರಿಂದ ಆ ಮಹಿಳೆಯರಿಗೆ ಅನ್ಯಾಯವಾಗುತ್ತದೆ.ಆದರೆ ಈ ಬಗ್ಗೆ ಯಾರೊಬ್ಬರು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಆದರೆ ಎಲ್ಲ ಅನಿಷ್ಟ ಪದ್ಧತಿಗಳಿಗೂ ಹಿಂದೂ ಧರ್ಮ ಹಾಗೂ ಪುರೋಹಿತಶಾಹಿಯನ್ನೇ ಹೊಣೆಯಾಗಿಸುವ ಹುನ್ನಾರ ನಡೆಯುತ್ತಿದೆ`ಎಂದರು.
ಎಚ್ಚರಿಕೆ:`ಮಡೆಸ್ನಾನ ಪದ್ಧತಿ ವಿರುದ್ಧ ಪ್ರತಿಭಟನೆ ನಡೆಸಿದರೆ ಅದಕ್ಕೆ ಪ್ರತಿಯಾಗಿ ಇನ್ನಷ್ಟು ಪ್ರತಿರೋಧ ವ್ಯಕ್ತವಾಗುತ್ತದೆ.ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು.ಇದರ ನಿಷೇಧಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಮಡೆಸ್ನಾನ ನಿಷೇಧಕ್ಕೆ ಕಾನೂನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಒಂದೊಮ್ಮೆ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು` ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ,ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ,ಗುಳೇದಗುಡ್ಡದ ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ,ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಕನಕಗುರು ಪೀಠದ ಗುಲ್ಬರ್ಗ ವಿಭಾಗದ ಸಿದ್ಧರಾಮಾನಂದ ಸ್ವಾಮೀಜಿ, ವಿಮರ್ಶಕ ಕೆ. ಮರುಳಸಿದ್ದಪ್ಪ, ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಇದ್ದರು.
ಮಡೆಸ್ನಾನ ನಿಷೇಧಕ್ಕೆ‌ ಪೇಜಾವರ ಶ್ರೀ ಒಲವು
ಬೆಂಗಳೂರು:’ಮಡೆಸ್ನಾನ ನಿಷೇಧಿಸುವುದಕ್ಕೆ ಎಲ್ಲ ರೀತಿಯಿಂದಲೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ನಿಡುಮಾಮಿಡಿ ಮಠ ಮತ್ತು ಮಾನವ ಧರ್ಮಪೀಠ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಡೆಸ್ನಾನ: ಒಂದು ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾನು ಮಡೆಸ್ನಾನವನ್ನು ಎಂದೂ ಸಮರ್ಥಿಸಿಕೊಂಡಿಲ್ಲ.ಅದರ ನಿಷೇಧಕ್ಕೆ ನನ್ನ ವಿರೋಧವೂ ಇಲ್ಲ.ಈ ಬಗ್ಗೆ ಮೊದಲು ಕುಕ್ಕೆಯ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳ ಜತೆ ಮಾತನಾಡಿ ಅವರನ್ನು ಒಪ್ಪಿಸೋಣ.ಬಳಿಕ ಸರ್ಕಾರದ ಜತೆ ಚರ್ಚಿಸಿ ಸೂಕ್ತ ಕಾನೂನು ರೂಪಿಸಲು ಪ್ರಯತ್ನಿಸುತ್ತೇನೆ.ಒಂದು ವೇಳೆ ಸರ್ಕಾರ ಒಪ್ಪಿಗೆ ನೀಡದಿದ್ದರೆ,ಮಡೆಸ್ನಾನ ನಿಷೇಧ ಹೋರಾಟಕ್ಕೆ ನಾನೂ ಕೈಜೋಡಿಸುತ್ತೇನೆ’ ಎಂದು ಸ್ವಾಮೀಜಿ ಭರವಸೆ ನೀಡಿದ್ದಾರೆ.
ಮಡೆಸ್ನಾನ ಅಂದರೆ,ಅಂಗ ಪ್ರದಕ್ಷಿಣೆ.ಇದನ್ನು 500ವರ್ಷಗಳ ಹಿಂದೆ ವಾದಿರಾಜ ತೀರ್ಥರು ಉಲ್ಲೇಖೀಸಿದ್ದಾರೆ.ಇಲ್ಲಿ ಎಂಜಲು ಸ್ಪರ್ಶ ಮಾಡಿದರೂ ಕುಷ್ಠರೋಗ ನಿವಾರಣೆಯಾಗುತ್ತದೆ ಎನ್ನುವ ಮೂಲಕ ಸುಬ್ರಹ್ಮಣ್ಯಸ್ವಾಮಿ ಮಹಿಮೆಯನ್ನು ವಾದಿರಾಜರು ವರ್ಣಿಸಿದ್ದಾರೆ.ಹಾಗಂತ, ಬ್ರಾಹ್ಮಣರ ಎಂಜಲು ಸ್ಪರ್ಶಿಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ವಾಮೀಜಿ ನುಡಿದರು.
ಮಡೆಸ್ನಾನ ವಿಚಾರದ ಬಗ್ಗೆ ಪ್ರತಿಭಟನೆ ಮಾಡಿದಷ್ಟು ಪ್ರತೀಕಾರ ಹೆಚ್ಚಾಗುತ್ತವೆ.ಹೀಗಾಗಿ, ದೇವಸ್ಥಾನದವರು,ಅಲ್ಲಿನ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಘರ್ಷಣೆ ಆಗದ ರೀತಿ ನಿಷೇಧ ಹೇರುವುದು ಸೂಕ್ತ.ಒಂದುವೇಳೆ ಇದರಿಂದ ಕೆಲವರ ನಂಬಿಕೆಗೆ ಘಾಸಿಯಾಗುವುದಾರೆ,ಇನ್ನು ಮುಂದೆ ಬರೀ ಅನ್ನದ ಎಲೆ ಮೇಲೆ ಉರುಳು ಸೇವೆ ಮಾಡಲಿ. ಅದು ಬೇಡ ಅಂದರೆ,ಬರೀ ಅಂಗ ಪ್ರದಕ್ಷಿಣೆಗೆ ಮಾತ್ರ ಅವಕಾಶ ಇರಲಿ.ಆ ಮೂಲಕ ಜಾತಿ ಸಾಮರಸ್ಯಕ್ಕೆ ಚ್ಯುತಿ ಬರದ ರೀತಿ ವಿವಾದ ಬಗೆಹರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಮುಸ್ಲಿಂರ ಎಂಜಲು ಊಟ ನಿಷೇಧಿಸಿ
ಮಡೆಸ್ನಾನದ ಬಗ್ಗೆ ಮಾತನಾಡುವವರು ಮುಸ್ಲಿಮರು ಹಬ್ಬದ ವೇಳೆ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಎಂಜಲು ಅಲ್ಲವೇ?ಸಂಪ್ರದಾಯದ ಹೆಸರಿನಲ್ಲಿ ವಿಚ್ಛೇದನ ಕೊಟ್ಟು ಮೂರು ಬಾರಿ ಮದುವೆ ಆಗುವುದು ಮಹಿಳೆ ಮೇಲಿನ ಶೋಷಣೆ ಅಲ್ಲವೇ ಎಂದು ಇದೇ ಸಂದರ್ಭ ಪೇಜಾವರ ಶ್ರೀಗಳು ಪ್ರಶ್ನಿಸಿದರು.
ಇವುಗಳ ಬಗ್ಗೆ ಯಾರು ಮಾತನಾಡುತ್ತಿಲ್ಲ
 ಪ್ರತಿಭಟಿಸುತ್ತಿಲ್ಲ.ಹಿಂದೂ ಧರ್ಮದ ಆಚರಣೆ ನಿಷೇಧಿಸುವುದಾರೆ,ಮುಸ್ಲಿಂ ಧರ್ಮದಲ್ಲಿನ ಇಂಥ ಅನಿಷ್ಟ ಪದ್ಧತಿಗಳನ್ನು ರದ್ದುಗೊಳಿಸಲಿ ಎಂದು ಅವರು ಸವಾಲು ಹಾಕಿದರು.
ಇದೊಂದು ಕುತಂತ್ರ: ಇಂಥ ಹೋರಾಟಗಳ ಹಿಂದೆ ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಕುತಂತ್ರ ಅಡಗಿದೆ.ಪುರೋಹಿತಶಾಹಿಗಳ ಮೇಲಿನ ಆಕ್ರೋಶದ ಹೆಸರಿನಲ್ಲಿ ಹಿಂದೂ ಧರ್ಮದೊಳಗೆ ಒಡಕು ಸೃಷ್ಟಿಸುವ ಹುನ್ನಾರ ಇದಾಗಿದೆ.ಇಂಥ ಪರಿಸ್ಥಿತಿಯಲ್ಲಿ ನಮ್ಮ ಧರ್ಮದೊಳಗಿನ ಸಮಸ್ಯೆಗಳನ್ನು ಜಾತಿ ಸಾಮರಸ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Please follow and like us:
error