ರಸಗೊಬ್ಬರ, ಬಿತ್ತನೆ ಬೀಜಗಳ ಗುಣಮಟ್ಟದ ಬಗ್ಗೆ ನಿಗಾ ವಹಿಸಿ- ಅಮರೇಶ್ ಕುಳಗಿ.

ಕೊಪ್ಪಳ ಸೆ. ೨೩ (ಕ ವಾ) ಜಿಲ್ಲೆಯಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದು, ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಗುಣಮಟ್ಟದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಮುಂಗಾರು ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ.  ಆದರೆ ಸೆಪ್ಟಂಬರ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.  ಅಗತ್ಯ ಗೊಬ್ಬರ ಹಾಗೂ ಬಿತ್ತನೆ ಬೀಜ ಖರೀದಿಯಲ್ಲಿ ರೈತರು ತೊಡಗಿದ್ದು, ಖಾಸಗಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಗುಣಮಟ್ಟದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು.  ಒಂದು ವೇಳೆ ಯಾವುದೇ ಕೃಷಿ ಸಾಮಗ್ರಿಯ ಗುಣಮಟ್ಟ ಕಳಪೆಯಾದಲ್ಲಿ, ರೈತರ ಕೃಷಿ ಚಟುವಟಿಕೆಯ ಮೇಲೆ ಇದರ ನೇರ ಪರಿಣಾಮ ಬೀರುತ್ತದೆ.  ಮೊದಲೆ ಬರ ಪರಿಸ್ಥಿತಿಯಿಂದ ಆತಂಕಗೊಂಡಿರುವ ರೈತರು, ಕಳಪೆ ಬಿತ್ತನೆ ಬೀಜ ಅಥವಾ ಗೊಬ್ಬರ ಪೂರೈಕೆಯಾದಲ್ಲಿ, ಇನ್ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ.  ವಸ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಅಧಿಕಾರಿಗಳು ಖಾಸಗಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಕೃಷಿ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.  ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿರೇಶ್ ಸಾಲೋಣಿ ಅವರು ಮಾತನಾಡಿ, ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜಗಳ ದರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿ ಬರುತ್ತಿವೆ.  ಎಲ್ಲ ಅಂಗಡಿಗಳಲ್ಲಿ ನಿಯಮದಂತೆ ದರಗಳ ಪಟ್ಟಿಯ ಫಲಕವನ್ನು ಅಳವಡಿಸಿ, ಪ್ರದರ್ಶಿಸಬೇಕು.  ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ನಿಯಮ ಉಲ್ಲಂಘಿಸುವವರ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.  ಈ ಕುರಿತಂತೆ ಅಗತ್ಯ ಕ್ರಮ ಜರುಗಿಸಲು ಜಿ.ಪಂ. ಅಧ್ಯಕ್ಷರು ಜಂಟಿಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.
     ಜಂಟಿಕೃಷಿ ನಿರ್ದೇಶಕ ರಾಮದಾಸ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಶೇ. ೮೫ ರಷ್ಟು ಬೆಳೆ ನಷ್ಟವಾಗಿದ್ದು, ೧. ೭೨ ಹೆ. ನಲ್ಲಿ ಬಿತ್ತಿದ ಬೆಳೆ ಹಾನಿಗೀಡಾಗಿದೆ.  ಈಗಾಗಲೆ ನಷ್ಟದ ಬಗ್ಗೆ ಸರ್ವೆ ನಂಬರ್ ಹಾಗೂ ರೈತವಾರು ಸಮೀಕ್ಷೆ ನಡೆಸಿ, ಸಮಗ್ರ ಮಾಹಿತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.  ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗೆ ಅನುಗುಣವಾಗಿ ಮಳೆಯಾದರೆ, ಸೆಪ್ಟಂಬರ್ ತಿಂಗಳಿನಲ್ಲಿ ೯೬ ಮಿ.ಮೀ. ವಾಡಿಕೆ ಬದಲಿಗೆ ೧೭೬ ಮಿ.ಮೀ. ಮಳೆಯಾಗಿದ್ದು, ಶೇ. ೮೯ ರಷ್ಟು ಹೆಚ್ಚು ಮಳೆಯಾಗಿದೆ.  ಈ ಪೈಕಿ ಕುಷ್ಟಗಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ.  ಹಿಂಗಾರು ಹಂಗಾಮು ಅಕ್ಟೋಬರ್ ಮೊದಲ ವಾರದಿಂದ ಪ್ರಾರಂಭವಾಗಲಿದ್ದು, ಈಗಾಗಲೆ ಕಡಲೆ, ಬಿಳಿಜೋಳ, ಗೋಧಿ, ಸೂರ್ಯಕಾಂತಿ, ಕುಸುಬೆ ಬೆಳೆಗಳ ಅಗತ್ಯ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿರಿಸಿ, ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವ ಕಾರ್ಯ ಪ್ರಾರಂಭವಾಗಿದೆ.  ಪ್ರತಿ ದಿನ ಸುಮಾರು ೧೫೦೦ ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜ ವಿತರಣೆ ಆಗುತ್ತಿದೆ.  ಬಿತ್ತನೆ ಬೀಜ ಅಥವಾ ಗೊಬ್ಬರಗಳ ಯಾವುದೇ ಕೊರತೆ ಇಲ್ಲ.  ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಖಾಸಗಿ ಗೊಬ್ಬರ ಮಾರಾಟಗಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಂಗಾಕಲ್ಯಾಣಕ್ಕೆ ಮೋಟಾರು ಪೂರೈಸಿ : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಫಲಾನುಭವಿಗಳ ಜಮೀನಿಗೆ ವಿವಿಧ ಅಭಿವೃದ್ಧಿ ನಿಗಮಗಳ ಗಂಗಾ ಕಲ್ಯಾಣ ಯೋಜನೆಯಡಿ ೨೦೧೩-೧೪ ಮತ್ತು ೨೦೧೪-೧೫ ನೇ ಸಾಲಿನಲ್ಲಿ ಕೊರೆಯಿಸಲಾದ ಬೋರ್‌ವೆಲ್‌ಗಳಿಗೆ ಇದುವ

ರೆಗೂ ಮೋಟಾರುಗಳನ್ನು ವಿತರಣೆ ಮಾಡಿಲ್ಲ.  ಇದರಿಂದಾಗಿ ಬೊರ್‌ವೆಲ್‌ಗಳು ವಿಫಲವಾಗುವ ಸಾಧ್ಯತೆಗಳಿದ್ದು, ಸರ್ಕಾರದ ಯೋಜನೆಯ ಉದ್ದೇಶ ವಿಫಲವಾಗುತ್ತಿದೆ ಎಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿರೇಶ್ ಸಾಲೋಣಿ ಅವರು ಅಸಮಾಧಾನ ವ್ಯಕ್ತಪಡಿಸಿದರು.  ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ವಹಿಸಿ, ಮಾಹಿತಿ ಒದಗಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಸಂಬಂಧಪಟ್ಟ ನಿಗಮಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಅಲ್ಲದೆ ಸಭೆಯಲ್ಲಿ ಗೈರು ಹಾಜರಾಗಿದ್ದ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹಾಗೂ ಉಗ್ರಾಣ ನಿಗಮದ ಅಧಿಕಾರಿಗಳಿಗೆ ಶೋಕಾಸ್ ನೊಟೀಸ್ ನೀಡಲು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಮುಖ್ಯ ಲೆಕ್ಕಾಧಿಕಾರಿ ಸೋಮಶೇಖರ ಹರ್ತಿ, ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply