ಸರಕಾರದಿಂದ ಪ್ರಜಾಪ್ರಭುತ್ವದ ಕೊಲೆ : ಪ್ರಧಾನಮಂತ್ರಿಗೆ ಹಝಾರೆ ಪತ್ರ


ಹೊಸದಿಲ್ಲಿ, ಆ.13: ತಾನು ಬಯಸಿದ್ದ ಸ್ಥಳದಲ್ಲಿ ಆ.16ರಿಂದ ನಡೆಸಲಿರುವ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸಲು ಅನುಮತಿಯನ್ನು ನಿರಾಕರಿಸಿರು ವುದರಿಂದ ನೊಂದಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ, ಇಂದು ಪ್ರಧಾನಿ ಮನಮೋಹನ ಸಿಂಗ್‌ರಿಗೆ ಪತ್ರವೊಂದನ್ನು ಬರೆದಿದ್ದು, ಸರಕಾರವು ಜನರ ಮೂಲಭೂತ ಹಕ್ಕುಗಳನ್ನು ‘ದಮನಿಸುತ್ತಿದೆ’ ಯೆಂದು ಆರೋಪಿಸಿದ್ದಾರೆ. ಹಿಂದಿಯಲ್ಲಿ ಬರೆದಿರುವ ಕಠಿಣ ಪತ್ರವೊಂದರಲ್ಲಿ ಹಝಾರೆ, ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದವರನ್ನು ಸರಕಾರ ಮಟ್ಟ ಹಾಕಲು ಯತ್ನಿಸುತ್ತಿದೆಯೆಂದು ಆಪಾದಿಸಿದ್ದಾರೆ.
ತಮ್ಮ ಸರಕಾರವು ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದವರನ್ನು ದಮನಿಸಲು ಯತ್ನಿಸುತ್ತಿದೆ. ಇದು ತಮ್ಮ ಆಡಳಿತದಲ್ಲಿ ಆಗಾಗ ನಡೆಯುತ್ತಿದೆ ಯೆಂದು ಅವರು ಪತ್ರದಲ್ಲಿ ದೂರಿದ್ದಾರೆ. ತಾನು ಬಯಸಿದ ಸ್ಥಳದಲ್ಲಿ ಉಪವಾಸ ಮುಷ್ಕರ ನಡೆಸಲು ಯಾವುದೇ ಕಾರಣ ನೀಡದೆ ಅವಕಾಶ ನಿರಾಕರಿಸಲಾಗಿದೆಯೆಂಬುದನ್ನು ಬೆಟ್ಟು ಮಾಡಿ ರುವ ಹಝಾರೆ, ಇದೆಲ್ಲವೂ ಸರ್ವಾಧಿಕಾರದ ಭಾವನೆಯನ್ನು ಮೂಡಿಸಲಾರದೇ ಎಂದು ಪ್ರಶ್ನಿಸಿದ್ದಾರೆ. ಪ್ರಜಾಸತ್ತೆಯನ್ನು ಕೊಲೆ ಮಾಡಿ ಹಾಗೂ ಸಂವಿಧಾನವನ್ನು ಉಲ್ಲಂಘಿಸಿ ಜನರ ಮೂಲಭೂತ ಹಕ್ಕುಗಳನ್ನು ದಮನಿಸುವುದು ತಮಗೆ ಸರಿಕಾಣುತ್ತಿದೆಯೇ? ಸ್ವಾತಂತ್ರಾ ನಂತರದ ಸರಕಾರಗಳಲ್ಲಿ ತಮ್ಮದೇ ಅತ್ಯಂತ ಭ್ರಷ್ಟ ಸರಕಾರವೆಂದು ಜನರು ಹೇಳುತ್ತಿದ್ದಾರೆ. ಂದರ ಬಳಿಕದ ಒಂದು ಸರಕಾರ ಹೆಚ್ಚು ಹೆಚ್ಚು ಭ್ರಷ್ಟವಾಗುತ್ತಾ ಬಂದಿದೆಯೆಂಬುದು ತನ್ನ ಅಭಿಪ್ರಾಯವಾಗಿದೆಯೆಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಖಾರವಾಗಿ ನುಡಿದಿದ್ದಾರೆ.
ತನಗೆ ಕೇವಲ ಮೂರು ದಿನಗಳಷ್ಟೇ ನಿರಶನ ನಡೆಸಲು ಪೊಲೀಸ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿರುವ ಹಝಾರೆ, ಇದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ ಎಂದಿದ್ದಾರೆ. ತನ್ನ ಪ್ರಸ್ತಾಪಿತ ಅನಿರ್ದಿಷ್ಟಾವಧಿ ನಿರಶನಕ್ಕೆ ಅನುಮತಿ ನಿರಾಕರಿಸಲು ಸರಕಾರ ನೆಪಗಳನ್ನು ಹುಡುಕುತ್ತಿದೆಯೆಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಉದಾಹರಣೆಯನ್ನು ನೀಡಿರುವ ಅವರು, ಮೊದಲು ತಾವು ಇಡೀ ಪ್ರದೇಶವನ್ನು ಆಕ್ರಮಿಸಬಹುದೆಂಬ ಕಾರಣ ನೀಡಿ ಜಂತರ್ ಮಂತರ್‌ನಲ್ಲಿ ಮುಷ್ಕರಕ್ಕೆ ಅವಕಾಶ ನಿರಾಕರಿಸಲಾಯಿತು ಎಂದಿದ್ದಾರೆ

Leave a Reply