ಚುನಾವಣಾ ಕರ್ತವ್ಯಗಳನ್ನು ದಕ್ಷತೆಯಿಂದ ಪಾಲಿಸಿ ಎಂ.ಕನಗವಲ್ಲಿ.

ಕೊಪ್ಪಳ, ಡಿ.೨೧ (ಕ ವಾ) ಚುನಾವಣೆಗಳನ್ನು ಮುಕ್ತ ಹಾಗೂ ಶಾಂತ ರೀತಿಯಿಂದ ಕೈಗೊಳ್ಳುವ ನಿಟ್ಟಿನಲ್ಲಿ ಮತಗಟ್ಟೆ ಹಾಗೂ ಮತದಾನ ಅಧಿಕಾರಿಗಳು ಚುನಾವಣಾ ಕರ್ತವ್ಯಗಳನ್ನು ದಕ್ಷತೆಯಿಂದ ಪಾಲಿಸುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದರು.
          ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆ ಕುರಿತು ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗಂಗಾವತಿ ಹಾಗೂ ಕುಷ್ಟಗಿ ತಾಲೂಕುಗಳ ಚುನಾವಣೆಯ ಮತಗಟ್ಟೆ ಹಾಗೂ ಮತದಾನ ಅಧಿಕಾರಿಗಳ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.
           ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಡಿ.೨೭ ರಂದು ಮತದಾನ ನಡೆಯಲಿದೆ.  ಮತದಾನವು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಚುನಾವಣೆಯ ಮತಗಟ್ಟೆ ಹಾಗೂ ಮತದಾನ ಅಧಿಕಾರಿಗಳು ಮತದಾರರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಿ. ಚುನಾವಣಾ ಕರ್ತವ್ಯಗಳನ್ನು ನಿರ್ಲಕ್ಷಿಸಿದಲ್ಲಿ ಅಥವಾ ಯಾವುದೇ ಲೋಪದೋಷಗಳು ಉಂಟಾದಲ್ಲಿ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಚುನಾವಣೆಯ ಪಿ.ಆರ್.ಓ ಗಳು, ೧ನೇ ಹಾಗೂ ೨ನೇ ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಲ್ಲಿ ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಚುನಾವಣೆಗಳನ್ನು ಯಶಸ್ವಿಗೊಳಿಸಬೇಕು. ಚುನಾವಣೆಯ ಮತಗಟ್ಟೆ ಹಾಗೂ ಮತದಾನ ಅಧಿಕಾರಿಗಳ ಏನೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಸದಾ ಸ್ಪಂದಿಸಲಿದ್ದು, ಅಧಿಕಾರಿಗಳು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕರೆ ನೀಡಿದರು.
            ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ|| ಜಿ.ಎಲ್.ಪ್ರವೀಣಕುಮಾರ್ ಅವರು ತರಬೇತಿಯಲ್ಲಿ ಭಾಗವಹಿಸಿದ್ದ ಚುನಾವಣೆಯ ಮತಗಟ್ಟೆ ಹಾಗೂ ಮತದಾನ ಅಧಿಕಾರಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿದರು. ಮತದಾನಕ್ಕೆ ಸಂಬಂಧಪಟ್ಟಂತೆ ಏನೇ ಸಮಸ್ಯೆಗಳಿದ್ದರೂ ಆಯಾ ತಾಲೂಕಿನ ತಹಶೀಲ್ದಾರರನ್ನು ಅಥವಾ ಜಿಲ್ಲಾಡಳಿವನ್ನು ಸಂಪರ್ಕಿಸಬಹುದಾಗಿದೆ. ಚುನಾಯಿತ ಪ್ರತಿನಿಧಿಗಳು ತಮ್ಮ ಎಲೆಕ್ಟೆಡ್ ಸರ್ಟಿಫಿಕೇಟ್‌ನ್ನೇ ಮತದಾನದ ಗುರುತಿನ ಚೀಟಿಯಾಗಿ ತರುವ ಅವಶ್ಯಕತೆ ಇಲ್ಲ. ಅದರ ಬದಲಾಗಿ ಚುನಾವಣಾ ಆಯೋಗ ನಿಗದಿಪಡಿಸಿರುವ ಯಾವುದಾದರೊಂದು ದಾಖಲೆಯನ್ನು   ಕೂಡಾ ಮತದಾನ ಮಾಡಲು ತರಬಹುದಾಗಿದೆ. ಮತದಾರರು ಒಂದು ವೇಳೆ ಅನಕ್ಷರಸ್ಥ, ಕುರುಡ ಹಾಗೂ ದುರ್ಬಲನಾಗಿದ್ದರೆ ಚುನಾವಣೆ ನಡೆಸುವ ನಿಯಮಗಳು ೧೯೬೧ ರ ನಿಯಮ ೪೦(ಎ) ಅನ್ವಯ ಇಂತಹ ವ್ಯಕ್ತಿಗಳು ಸಹಾಯಕ್ಕಾಗಿ ಒಬ್ಬ ಸಂಗಡಿಗನನ್ನು ಮತಗಟ್ಟೆಗೆ ಕರೆದುಕೊಂಡು ಹೋಗಬಹುದಾಗಿದೆ. ಆದರೆ ಸಂಗಡಿಗನು ೧೮ ವರ್ಷ ವಯಸ್ಸಿನ ಒಳಗಿನವನಾಗಿರಬಾರದು ಮತ್ತು ಆತನು ಓದಲು ಹಾಗೂ ಮತದಾರನ ಇಚ್ಛೆಯಂತೆ ಮತದಾರನ ಪರವಾಗಿ ಮತಪತ್ರದ ಮೇಲೆ ಮತ ದಾಖಲಿಸಲು ಶಕ್ತನಾಗಿರಬೇಕು. ಒಬ್ಬ ಸಂಗಡಿಗನು ಒಬ್ಬ ಮತದಾರನಿಗಿಂತ ಹೆಚ್ಚಿನ ಮತದಾರರಿಗೆ ಸಂಗಡಿಗನಾಗಲು ಬರುವುದಿಲ್ಲ. ಅಲ್ಲದೆ, ಸಂಗಡಿಗನು ಮತದಾನದ ರಹಸ್ಯ ಗೌಪ್ಯತೆಯನ್ನು ಕಾಪಾಡುವುದಾಗಿ ಮತ್ತು ಇನ್ನೊಬ್ಬ ಮತದಾರನಿಗೆ ಸಂಗಡಿಗನಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಮತದಾನ ಕೇಂದ್ರದ ಅಧಿಕಾರಿಯ ಮುಂದೆ ಘೋಷಣೆ ಮಾಡಿ, ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿಯ ಅನುಮತಿ ಪಡೆಯಬೇಕು. ಮತದಾನ ತಪ್ಪಾದಲ್ಲಿ ಎರಡನೇ ಮತಪತ್ರವನ್ನು ನೀಡುವ ಅವಕಾಶ ಚುನಾವಣೆಯಲ್ಲಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳು ಜಾಗೃತರಾಗಿರುವುದು ಅವಶ್ಯಕವಾಗಿದೆ.
ಮತಗಟ್ಟೆ ಅಧಿಕಾರಿಗಳು ಕೌಂಟರ್ ಫಾಯಿಲ್‌ನ ಮೇಲೆ ಸಹಿ ಮಾಡದೇ, ಕೇವಲ ಬ್ಯಾಲೆಟ್ ಪೇಪರ್‌ನ
ಮೇಲೆ ಮಾತ್ರ ಸಹಿ ಮಾಡಬೇಕು ಎಂದು ಮಾಹಿತಿ ನೀಡಿದರು.
             ತರಬೇತುದಾರರಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ಸಂಗಟಿ ಅವರು ಜಿಲ್ಲೆಯಲ್ಲಿನ ಮತದಾರರು, ಮತದಾನ ಕೇಂದ್ರಗಳು, ಚುನಾವಣಾ ಸಾಮಗ್ರಿಗಳು, ಹಾಜರಾತಿ ಮತಗಟ್ಟೆ ಅಧಿಕಾರಿಗಳ ಹಾಜರಾತಿ, ಮತಗಟ್ಟೆಯಲ್ಲಿನ ವ್ಯವಸ್ಥೆ, ಮತಗಟ್ಟೆ ಪ್ರತಿನಿಧಿಗಳ ನೇಮಕಾತಿ, ಮತಪೆಟ್ಟಿಗೆಯ ಸಿದ್ಧತೆ, ಮತಪತ್ರಗಳ ಕ್ರಮ ಸಂಖ್ಯೆ, ಮತದಾರರ ಗುರುತನ್ನು ಪ್ರಮಾಣಿಸಿ ನೋಡುವುದು, ಗುರುತಿನ ಚೀಟಿಗಳು, ೨ನೇ ಮತಗಟ್ಟೆ ಅಧಿಕಾರಿಯ ಜವಾಬ್ದಾರಿ, ಮತದಾನ ಮಾಡುವ ವಿಧಾನ, ಅಸಿಂಧು ಮತಗಳು, ಮತಪತ್ರವನ್ನು ರದ್ದುಗೊಳಿಸುವುದು. ಮತಪತ್ರಗಳ ಲೆಕ್ಕ, ಶಾಸನಬದ್ಧ ಲಕೋಟೆಗಳು, ಶಾಸನಬದ್ಧವಲ್ಲದ ಲಕೋಟೆಗಳು ಇತ್ಯಾದಿ ವಿಷಯಗಳ ಕುರಿತು ತರಬೇತಾರ್ಥಿಗಳಿಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರುಗಳು, ವಿವಿಧ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಇದ್ದರು.

Please follow and like us:
error