ಕೊಪ್ಪಳ ಜಿಲ್ಲೆಯ ಪ್ರಾಚೀನ ಸ್ಮಾರಕಗಳ ರಕ್ಷಣೆ

: ಸಂಸದರಿಂದ ಲೋಕಸಭೆಯಲ್ಲಿ ಚರ್ಚೆ
ಕೊಪ್ಪಳ  : ಕೊಪ್ಪಳ ಜಿಲ್ಲೆಯಲ್ಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕುರಿತಂತೆ ಸಂಸದ ಶಿವರಾಮಗೌಡ ಅವರು ಲೋಕಸಭೆಯ ಅಧಿವೇಶನದಲ್ಲಿ ಪ್ರಶ್ನಿಸುವ ಮೂಲಕ ಈ ಭಾಗದ ಸ್ಮಾರಕಗಳ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಿದ್ದಾರೆ.
  ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಸಂಸದ ಶಿವರಾಮಗೌಡ ಅವರು ಪ್ರಶ್ನೆ ಸಲ್ಲಿಸಿ, ಕೊಪ್ಪಳ ಜಿಲ್ಲೆಯಲ್ಲಿ ಪುರಾತತ್ವ ಸ್ಮಾರಕಗಳು ಹಾಗೂ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯಿಂದ ಸ್ಮಾರಕಗಳ ರಕ್ಷಣೆಗೆ ಕೈಗೊಂಡ ಕ್ರಮಗಳು ಹಾಗೂ ಬಿಡುಗಡೆ ಮಾಡಿರುವ ಅನುದಾನ ಕುರಿತು ವಿವರಣೆ ನೀಡುವಂತೆ ಕೋರಿದ್ದರು.  ಇದಕ್ಕೆ ವಿವರಣೆ ನೀಡಿರುವ ಕೇಂದ್ರ ಸಂಸ್ಕೃತಿ ಖಾತೆ ಸಚಿವೆ ಕುಮಾರಿ ಸೆಲ್ಜಾ ಅವರು ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳದ ಗವಿಮಠ ಬಳಿಯಿರುವ ಅಶೋಕನ ಶಿಲಾಶಾಸನ, ಪಾಲ್ಕಿ ಗುಂಡು, ಇಟಗಿಯ ಮಹಾದೇವ ದೇವಾಲಯ, ಕೊಪ್ಪಳ ಕೋಟೆ, ಹಿರೇಬೆಣಕಲ್‌ನ ಪ್ರಾಚೀನ ಸ್ಮಾರಕಗಳನ್ನು ಕೇಂದ್ರ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯಿಂದ ಸಂರಕ್ಷಿಸಲಾಗಿದ್ದು, ಅಶೋಕನ ಶಿಲಾಶಾಸನ, ಪಾಲ್ಕಿ ಗುಂಡು ಸ್ಮಾರಕಗಳ ರಕ್ಷಣೆ ಹಾಗೂ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ೨೦೦೯-೧೦ ರಲ್ಲಿ ರೂ. ೬೮೬೬೩, ೨೦೧೦-೧೧ ರಲ್ಲಿ ರೂ. ೬೯೫೯೯೬ ಹಾಗೂ ೨೦೧೧-೧೨ ರಲ್ಲಿ ೨೩೭೫೭೮ ರೂ.ಗಳ ಅನುದಾನ ಬಿಡುಗಡೆ ಮಾಡಿದೆ.  ಅದೇ ರೀತಿ ಇಟಗಿಯ ಮಹಾದೇವ ದೇವಾಲಯ ಸಂರಕ್ಷಣೆ ಹಾಗೂ ನಿರ್ವಹಣೆಗೆ ೨೦೦೮-೦೯ ರಲ್ಲಿ ರೂ. ೯೩೭೭೮೭, ೦೯-೧೦ ರಲ್ಲಿ ೪೭೨೯೪೫, ೧೦-೧೧ ರಲ್ಲಿ ೩೪೩೨೫೬ ಹಾಗೂ ೨೦೧೧-೧೨ ರಲ್ಲಿ ೪೪೧೭೬೮ ರೂ. ಅನುದಾನ ವೆಚ್ಚ ಮಾಡಲಾಗಿದೆ.  ಹಿರೇಬೆಣಕಲ್‌ನ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ೨೦೦೯-೧೦ ರಲ್ಲಿ ೬೭೨೮೯, ೨೦೧೦-೧೧ ರಲ್ಲಿ ರೂ. ೭೬೯೨೮೪ ಮತ್ತು ೨೦೧೧-೧೨ ರಲ್ಲಿ ೧೮೩೨೨೬ ರೂ.ಗಳ ಅನುದಾನ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಮಂತ್ರಾಲಯ ಉತ್ತರಿಸಿದೆ.
  ನವದೆಹಲಿಯಿಂದ ದೂರವಾಣಿ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಂಸದ ಶಿವರಾಮಗೌಡ ಅವರು ಕೊಪ್ಪಳ ಜಿಲ್ಲೆಯಲ್ಲಿರುವ ಪ್ರಾಚೀನ ಮತ್ತು ಪುರಾತತ್ವ ಸ್ಮಾರಕಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಕೇಂದ್ರ ಸರ್ಕಾರ ಮಾಡಿರುವ ವೆಚ್ಚಗಳ ಕುರಿತು, ಶೀಘ್ರದಲ್ಲೆ ಪರಿಶೀಲನೆ ಕೈಗೊಳ್ಳಲಾಗುವುದು.  ಜಿಲ್ಲೆಯಲ್ಲಿರುವ ಸ್ಮಾರಕಗಳ ರಕ್ಷಣಾ ಕಾರ್ಯಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಅನುದಾನದ ಸದ್ಬಳಕೆಯಾಗಿರುವ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
Please follow and like us:
error