You are here
Home > Koppal News > ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ಮಠಮಾನ್ಯಗಳ ಕೊಡುಗೆ ಅನನ್ಯ-ಅನ್ಸಾರಿ

ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ಮಠಮಾನ್ಯಗಳ ಕೊಡುಗೆ ಅನನ್ಯ-ಅನ್ಸಾರಿ

ಕೊಪ್ಪಳ, ಸೆ. ೨೩. ಕರ್ನಾಟಕದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಇಲ್ಲಿನ ಮಠ ಮಾನ್ಯಗಳು, ಅದರ ನಿಸ್ವಾರ್ಥ ಶ್ರೀಗಳ ಕೊಡುಗೆ ಅನನ್ಯ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ಇರಕಲ್‌ಗಡಾದ ಶ್ರೀ ಅರಳಿ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ಥಾಪಿಸಲಾದ ೨೪೦ ಸ್ವಸಹಾಯ ಸಂಘಗಳ ಒಟ್ಟು ೬ ಒಕ್ಕೂಟಗಳನ್ನು ಜ್ಯೋತಿ ಬೆಳಗಿಸಿ, ತೆಂಗಿನ ಗಿಡದ ಕಾಯಿಯ ಗೊಂಚಲು ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತ, ಸರಕಾರ ಜೊತೆ ಕೈಜೋಡಿಸಿ ತಮ್ಮದೇ ಶೈಲಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ, ಮೈಸೂರಿನ ಸುತ್ತೂರಮಠ, ಆದಿಚುಂಚಲನಗಿರಿಮಠ, ತುಮಕೂರಿನ ಸಿದ್ದಗಂಗಾ ಮಠಗಳು ಅತ್ಯದ್ಭುತ, ಅನನ್ಯವಾದ ಸೇವೆ ಸಲ್ಲಿಸುತ್ತಿವೆ. ಸಾವಿರಾರು ಶಾಲೆಗಳು, ನೂರಾರು ಉತ್ತಮ ಆಸ್ಪತ್ರೆಗಳು ಮಠಗಳ ಅಡಿಯಲ್ಲಿ ನಡೆಯುತ್ತಿವೆ ಎಂದರು. ಅದರ ಜೊತೆಗೆ ಹೆಗ್ಗಡೆಯವರು ಮಹಿಳಾ ಸಂಘಗಳನ್ನು ಮಾಡಿ ಜನಮುಖಿ ಕಾರ್ಯಮಾಡುತ್ತಿರುವದು ಶ್ಲಾಘನೀಯ, ಮಹಿಳೆ ಎಂದರೆ ಆದಿಶಕ್ತಿ ಜಗನ್ಮಾತೆ ಇದ್ದಹಾಗೆ. ಮಹಿಳೆಯರು ಸಹನಶೀಲರು ಮತ್ತು ಬುದ್ಧಿವಂತರು, ಸ್ತ್ರೀಯಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ ಭಾರತೀಯರಾದ ನಾವು ಜಗತ್ತಿನ ಮುಂದುವರೆದ ದೇಶಕ್ಕೆ ೧೫೦ ವರ್ಷದಷ್ಟು ಹಿಂದಿದ್ದೇವೆ, ಇಲ್ಲಿಯ ಸಂಸ್ಕಾರದಿಂದ ನಾವು ಜಗತ್ತಿನಲ್ಲಿ ಗುರುತಿಸಿಕೊಂಡಿದ್ದೇವೆ. ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿಕೊಂಡು, ಸ್ವಸಹಾಯ ಸಂಘದ ಮುಖೇನ ಪರಿಪೂರ್ಣ ಅಭಿವೃದ್ಧಿಗೆ ಶ್ರಮಿಸಬೇಕು, ಕ್ಷೇತ್ರದ ಜನರಿಗೆ ಸರಕಾರ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಮಾಡಿಕೊಡಲಾಗುವದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾದೇಶಿಕ ಯೋಜನಾಧಿಕಾರಿ ಬಿ. ಸೋಮಪ್ಪ ಪೂಜಾರಿ ಸಂಸ್ಥೆಯ ಕಾರ್ಯದ ಬಗ್ಗೆ, ಸಾಲಸೌಲಭ್ಯದ ಕುರಿತು ವಿವರಿಸಿದರು. ಸಂಸ್ಥೆಯಿಂದ ನೀಡಲಾಗುವ ಶೌಚಾಲಯ ಸಹಾಯಧನ ಮತ್ತು ಎಲ್‌ಐಸಿ ಜೀವನ ಮಧುರ ಪಾಲಿಸಿಗಳನ್ನು ವಿತರಿಸಲಾಯಿತು. ಸ್ವ-ಸಹಾಯ ಸಂಘಗಳ ಸದಸ್ಯರಿಗೆ ನಡೆಸಲಾದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೂ ಬಹುಮಾನ ವಿತರಿಸಿದರು. ೬ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಫಲತಾಂಬೂಲ ನೀಡುವ ಮೂಲಕ ೨ ವರ್ಷದ ಸೇವಾವಧಿಗೆ ಅಧಿಕಾರವನ್ನು ಶಾಸಕರು ನೀಡಿದರು. ತಾಲೂಕ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ಪದಾಧಿಕಾರಿಗಳಿಗೆ ಪರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಕಸ್ತೂರಮ್ಮ ಬಸನಗೌಡ ಪಾಟೀಲ್, ವಿರುಪಾಕ್ಷಪ್ಪ ಪಟ್ಟಣಶೆಟ್ಟಿ, ಮುಖಂಡ ನೂರೇಶ್ ಪವಾರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ, ಸುದೇಶ ಪಟ್ಟಣಶೆಟ್ಟಿ, ಬಸುಕುಮಾರ ಸಂಸ್ಥೆಯ ಅಧಿಕಾರಿಗಳು, ಸ್ವಯಂಸೇವಕರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಜ್ಯೋತಿ ಸಂಗಡಿಗರು ಪ್ರಾರ್ಥಿಸಿದರು, ಎಸ್. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು, ಭಾರತಿ ಶೆಟ್ಟರ ಸ್ವಾಗತಿಸಿದರು ಕೊನೆಯಲಲಿ ಕಲಾವತಿ ವಂದಿಸಿದರು.

Leave a Reply

Top