fbpx

ಮಾಧ್ಯಮ: ಮೋದಿ ವೌನವೇಕೆ?

ಸರ್ವಾಧಿಕಾರಿಯಾಗಲು ಹೊರಟ ವ್ಯಕ್ತಿ ಸಮಾನತೆಯನ್ನು ಎಂದೂ ಬಯಸುವುದಿಲ್ಲ. ತಾನು ಉಳಿದವರಿಗಿಂತ ಎತ್ತರದ ಸ್ಥಾನ ದಲ್ಲಿರಲು ಬಯಸುತ್ತಾನೆ. ಪ್ರಶ್ನೆಗಳನ್ನು ಆತ ಇಷ್ಟಪಡುವುದಿಲ್ಲ. ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ. ತನ್ನ ಮಾತನ್ನು ಎಲ್ಲರೂ ಕೇಳಬೇಕೆಂದು ಬಯಸುತ್ತಾನೆ. ಹಿಟ್ಲರ್, ಮುಸಲೋನಿಗಳು ಚರ್ಚೆಗಳನ್ನು ಎಂದೂ ಒಪ್ಪುತ್ತಿರಲಿಲ್ಲ. ತಾವು ಹೇಳಿದ್ದೆಲ್ಲ ಸರಿ, ಉಳಿದವರು ತಮ್ಮ ಆದೇಶ ಪಾಲಿಸಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಶ್ನೆಗಳನ್ನು ಎಂದೂ ಇಷ್ಟಪಡುವುದಿಲ್ಲ. ಅಂತಲೇ ಮಾಧ್ಯಮ ಪ್ರತಿನಿಧಿಗಳನ್ನು ಅವರು ಭೇಟಿ ಯಾಗುವುದಿಲ್ಲ. ಮೋದಿ ಅಧಿಕಾರಕ್ಕೆ ಬಂದು 100 ದಿನ ದಾಟಿದವು. ಈ ಮೂರು ತಿಂಗಳಲ್ಲಿ ಪ್ರಧಾನಿ ಯಾವುದೇ ಪತ್ರಕರ್ತನನ್ನು ಭೇಟಿಯಾಗಿಲ್ಲ. ಒಂದೇ ಒಂದು ಮಾಧ್ಯಮ ಗೋಷ್ಠಿ ಯನ್ನುದ್ದೇಶಿಸಿ ಮಾತಾಡಿಲ್ಲ. ತಮ್ಮ ಸಂಪುಟದ ಸಚಿವರಿಗೂ ಮಾತಾಡಲು ಇಟ್ಟಿಲ್ಲ. ವಿದೇಶ ಪ್ರಯಾಣಕ್ಕೂ ಪತ್ರಕರ್ತರನ್ನು ಕರೆದುಕೊಂಡು ಹೋಗಿಲ್ಲ. ಪಾರ್ಟಿಗಳನ್ನೂ ಕೊಟ್ಟಿಲ್ಲ. ಈ ಎಲ್ಲ ‘ಇಲ್ಲ’ಗಳ ಬಗ್ಗೆ ಮೋದಿಯನ್ನು ಹೊಗಳು ವವರು, ತೆಗಳುವವರು ಸಾಕಷ್ಟಿದ್ದಾರೆ. ಈ ಹೊಗಳಿಕೆ- ತೆಗಳಿಕೆಗೂ ಗಮನ ಕೊಡದೆ ಮೋದಿ ತಮ್ಮ ದಾರಿಯಲ್ಲಿ ಸಾಗಿದ್ದಾರೆ.

 ಹಿಂದಿನ ಪ್ರಧಾನಿಗಳಿಗೆಲ್ಲ ಮಾಧ್ಯಮ ಸಲಹೆಗಾರರಿದ್ದರು. ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸುಧೀಂದ್ರ ಕುಲಕರ್ಣಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಎಲ್ಲ ಕೆಲಸ ಮಾಡುತ್ತಿದ್ದರು. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿ ಸಂಜಯ ಬಾರು ಅವರಿದ್ದರು. (ನಂತರ ಆತ ಪ್ರಧಾನಿ ಮರ್ಯಾದೆ ಕಳೆದದ್ದು ನಿಜ) ಆದರೆ ಈಗ ನರೇಂದ್ರ ಮೋದಿ ಈವರೆಗೆ ತಮ್ಮ ಮಾಧ್ಯಮ ಸಲಹೆಗಾರರನ್ನಾಗಿ ಯಾರನ್ನೋ ನೇಮಿಸಿ ಕೊಂಡಿಲ್ಲ. ಅದರ ಅಗತ್ಯವೂ ಅವರಿಗೆ ಉಂಟಾಗಿಲ್ಲ. ಬರೀ ಆಗಾಗ ತಮಗೆ ಹೇಳಬೇಕೆನಿಸಿದ್ದನ್ನು ಟ್ವೀಟ್ ಮಾಡುತ್ತಾರೆ. ಓದುವುದಷ್ಟೆ ನಮ್ಮ ಕರ್ಮ ಮರು ಪ್ರಶ್ನೆಗೆ ಅವಕಾಶವಿಲ್ಲ.

ದೇಶದ ಗಡಿಯಲ್ಲಿ ಏನು ನಡೆಯುತ್ತಿದೆ? ಆಂತರಿಕ ಪರಿಸ್ಥಿತಿ ಏನಿದೆ? ರಾಷ್ಟ್ರೀಯ ಭದ್ರತೆಗೆ ಉಂಟಾದ ಸವಾಲುಗಳು ಯಾವುವು ಎಂಬುದರ ಬಗ್ಗೆ ಹಿಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಆಗಾಗ ಮಿಡಿಯಾದವರನ್ನು ಕರೆದು ವಿವರಿಸುತ್ತಿದ್ದರು. ಆದರೆ ಈಗಿನ ಅವರ ಉತ್ತರಾಧಿಕಾರಿ ಅಜೀತ್ ಡೊವೆಲ್ ಮಾಧ್ಯಮ ಪ್ರತಿನಿಧಿಗಳನ್ನು ಹತ್ತಿರ ಬಿಟ್ಟು ಕೊಳ್ಳುವುದಿಲ್ಲ. ಅಸಲಿಗೆ ಮಾತಾಡುವುದೇ ಇಲ್ಲ. ಕೇಂದ್ರ ಸಚಿವಾಲಯಗಳ ಯಾವ ಅಧಿಕಾರಿಯೂ ಬಾಯಿ ತೆರೆಯುವುದಿಲ್ಲ. ಮಂತ್ರಿಗಳೂ ಮಾಧ್ಯಮ ಪ್ರತಿನಿಧಿಗಳನ್ನು ಕಾಣುವುದಿಲ್ಲ. ಬರೀ, ಅಧಿಕೃತ ಪತ್ರಿಕಾ ಹೇಳಿಕೆ ನೀಡಿ ಕಾಲು ಕೀಳುತ್ತಾರೆ.
ಗುಜರಾತ್‌ನಲ್ಲೂ ಮೋದಿ ಮುಖ್ಯಮಂತ್ರಿ ಯಾಗಿದ್ದಾಗ ಮಾಧ್ಯಮ ಪ್ರತಿನಿಧಿಗಳನ್ನು ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಪತ್ರಿಕಾಗೋಷ್ಠಿ ನಡೆಸಲಿಲ್ಲ. ಯಾವ ಪತ್ರಿಕೆಗೂ, ಟಿವಿ ವಾಹಿನಿಗೂ ಸಂದರ್ಶನ ನೀಡುತ್ತಿರಲಿಲ್ಲ. ಆಯ್ದ ಕೆಲವರಿಗೆ ಸಂದರ್ಶನ ನೀಡಿದ್ದರು. ಆದರೆ ಆ ಸಂದರ್ಶನಗಳೆಲ್ಲಲ್ಲ- ಮೋದಿ ಯನ್ನು ಹೊಗಳಿ ಅಟ್ಟಕ್ಕೇರಿಸ ಲಾಗಿತ್ತು. ತನ್ನನ್ನು ಅಸಾಮಾನ್ಯ ಪುರುಷ ಎಂದು ವಿಜೃಂಭಿಸುವ ಪತ್ರಿಕೆ ಮತ್ತು ಟಿವಿ ಚಾನೆಲ್‌ಗೆ ಮಾತ್ರ ಮೋದಿ ಹತ್ತಿರ ಬಿಟ್ಟುಕೊಳ್ಳುತ್ತಾರೆ. ಜನಸಂಪರ್ಕಕ್ಕೆ ಅವರದೇ ಅದ ದಾರಿಗಳಿವೆ. ಕಳೆದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಶುಭಾಶಯ ಕೋರಿ ಪ್ರಧಾನಿ ಕಚೇರಿಯಿಂದ ಮೋದಿ ಹೆಸರಿನಲ್ಲಿ ಮೆಸೆಜ್ ಬಂತು. ಇದೇ ರೀತಿ ಸುಮಾರು ಒಂದು ಕೋಟಿ ಜನರಿಗೆ ಸಂದೇಶ ಹೋಗಿದೆ. ಬ್ಯಾಂಕ್ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ, ಸೇನಾ ಪಡೆ ಯೋಧರಿಗೆ ಪ್ರತ್ಯೇಕ ಸಂದೇಶಗಳು ಹೋಗಿವೆ. ಹಿಂದಿನ ಪ್ರಧಾನಿಗಳಂತೆ ಮೋದಿ ಮಾಧ್ಯಮಗಳ ಮೂಲಕ ಯಾವ ಸಂದೇಶಗಳನ್ನು ನೀಡುವುದಿಲ್ಲ. ಇನ್ನು ವಿದೇಶ ಪ್ರವಾಸ. ಪ್ರಧಾನಮಂತ್ರಿ ವಿದೇಶ ಪ್ರವಾಸಕ್ಕೆ ಹೊರಟರೆ ಅವರ ಜೊತೆಗೆ ದಿಲ್ಲಿಯ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಪತ್ರಕರ್ತರ ಹಿಂಡು ಹೋಗುತ್ತಿತ್ತು. ಸುಮಾರು ಐವತ್ತರಷ್ಟಿರುತ್ತಿದ್ದ ಪತ್ರಕರ್ತರಿಗೆ ಪ್ರಧಾನಿಗೆ ಸಿಗುವ ಎಲ್ಲ ಐಷಾರಾಮಿ ಸೌಕರ್ಯಗಳು ಸಿಗುತ್ತಿದ್ದವು. ಅಲ್ಲಿ ಪ್ರಧಾನಿ ಜೊತೆ ಹೋದವರು ಕುಡಿದು ತಿಂದು ಓಲಾಡಿದ ಸಂಗತಿಯನ್ನು ಸ್ವತಃ ಅಲ್ಲಿ ಹೋಗಿ ಕಣ್ಣಾರೆ ಕಂಡವರೇ ಬರೆದಿದ್ದಾರೆ. ಈಗ ಮೋದಿ ಇದಕ್ಕೆ ಕಡಿವಾಣ ಹಾಕಿದ್ದಾರೆ. ತಮ್ಮ ಜೊತೆಗೆ ಬರೀ ಸರಕಾರಿ ಮಾಧ್ಯಮಗಳ (ದೂರದರ್ಶನ-ಆಕಾಶವಾಣಿ) ಪ್ರತಿನಿಧಿ ಗಳನ್ನು ಮಾತ್ರ ಕರೆದೊಯ್ಯುತ್ತಾರೆ.
ಪ್ರಧಾನಿ ಮೋದಿ ಅವರ ಈ ಶೈಲಿ ಅನೇಕರಿಗೆ ಸರಿಯೆನ್ನಿಸಬಹುದು. ಪ್ರಧಾನಿ ಜೊತೆಗಿನ ಪ್ರವಾಸದ ಸೌಕರ್ಯವನ್ನು ಕೆಲವೇ ಪತ್ರಕರ್ತರು ದುರುಪಯೋಗ ಪಡಿಸುತ್ತಿದ್ದಾರೆಂಬುದು ಅನೇಕರ ಅನಿಸಿಕೆ. ಆದರೆ ದಿಲ್ಲಿ ಪತ್ರಕರ್ತರಿಗೆ ಸುದ್ದಿಗಳೇ ಸಿಗುತ್ತಿಲ್ಲ. ಪ್ರಧಾನಿ ಕಚೇರಿ, ಪಾರ್ಲಿಮೆಂಟ್ ಹೀಗೆ ಎಲ್ಲ ಸುತ್ತಾಡಿದರೂ ಯಾವ ಮಂತ್ರಿಯೂ ಬಾಯಿ ಬಿಡುತ್ತಿಲ್ಲ. ಅಧಿಕಾರಿಗಳು ಮಾತಾಡುತ್ತಿಲ್ಲ. ಸರಕಾರದಲ್ಲಿ ಏನು ನಡೆದಿದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಸುದ್ದಿಗಳನ್ನು ಪ್ಲಾಂಟ್ ಮಾಡಲು ಆಗುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲ ರಂಗಗಳಲ್ಲಿ ಕೆಟ್ಟವರಿರುವಂತೆ ಮಾಧ್ಯಮಗಳಲ್ಲೂ ಇರಬಹುದು. ತಮ್ಮ ಸ್ಥಾನಮಾನ ಬಳಸಿ ಕೆಲಸ ಮಾಡಿಸಿಕೊಂಡಿರಬಹುದು. ಹಾಗೆಂದ ಮಾತ್ರಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಅಂದರೆ ಹೇಗೆ? ಮೋದಿ ಸಚಿವ ಸಂಪುಟದ ಸಚಿವರೇನು ಎಲ್ಲರೂ ಸಾಚಾ ಆಗಿದ್ದಾರೆಯೇ? ಅವರ ಸಂಪುಟದಲ್ಲಿ ಎಷ್ಟು ಮಂದಿ ಕ್ರಿಮಿನಲ್‌ಗಳಿಲ್ಲ? ಅದೆಲ್ಲ ಜನರಿಗೆ ಗೊತ್ತಾಗಬೇಡವೇ? ಮಾಧ್ಯಮಗಳಿಗೆ ಮೋದಿ ಯಾಕೆ ಹೆದರುತ್ತಾರೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಪರದಾಡಬೇಕಿಲ್ಲ. ಮಾಧ್ಯಮದವರನ್ನು ಹತ್ತಿರ ಬಿಟ್ಟುಕೊಂಡರೆ ತಮ್ಮ ಗುಟ್ಟುಗಳೆಲ್ಲ ಬಯಲಿಗೆ ಬರುತ್ತವೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಂತ್ರಿಗಳಿಗೆ ಮಾತಾಡಲು ಅವಕಾಶ ನೀಡಿದರೆ ಒಬ್ಬರ ಹಗರಣಗಳನ್ನು ಇನ್ನೊಬ್ಬರು ಬಿಚ್ಚಿಡುತ್ತಾರೆ. ವಿದೇಶಕ್ಕೆ ಕರೆದುಕೊಂಡು ಹೋದರೆ ಅಲ್ಲಿ ನಡೆಯುವ ಅವಾಂತರಗಳನ್ನು ಕುರಿತು ಮಾಧ್ಯಮ ಪ್ರತಿನಿಧಿಗಳು ಕಣ್ಣಾರೆ ಕಂಡದ್ದನ್ನು ಕಂಡಂತೆ ಬರೆಯುತ್ತಾರೆ. ಆದರೆ ಸರಕಾರಿ ನೌಕರಿಯಲ್ಲಿರುವ ಆಕಾಶವಾಣಿ ಹಾಗೂ ದೂರದರ್ಶನ ಪ್ರತಿನಿಧಿಗಳು ಆ ಧೈರ್ಯ ತೋರಿಸುವುದಿಲ್ಲ. ಇನ್ನು ಮೋದಿ ಬಾಯಿ ಬಿಟ್ಟರೆ ಅವರ ಬಂಡವಾಳ ಹೊರಗೆ ಬರುತ್ತದೆ. ಅವರಿಗಿರುವ ಚರಿತ್ರೆಯ ಜ್ಞಾನ, ಭೌಗೋಳಿಕ ತಿಳುವಳಿಕೆ, ಸಂವಿಧಾನ ಪ್ರಜ್ಞೆ ಎಷ್ಟೆಂಬುದು ಎಲ್ಲರಿಗೂ ಗೊತ್ತಿದೆ. ಓದಿಕೊಂಡು ಬರುವ ಪತ್ರಕರ್ತರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯ ತೊಡಗಿದರೆ ಈ ವಿರಾಟ ಪುರುಷ ತಡವರಿ ಸಬೇಕಾಗುತ್ತದೆ. ಅಂತಲೆ ಬಹಿರಂಗ ಸಭೆಗಳಲ್ಲಿ ಹಾರಾಡಿ ಭಾಷಣ ಮಾಡುವ ಮೋದಿ ಪತ್ರಕರ್ತರನ್ನು ಕಾಣಲು ಹಿಂಜರಿಯುತ್ತಾರೆ. ಮೋದಿಯಂತೆ ಅಡಾಲ್ಫ್ ಹಿಟ್ಲರ್ ಕೂಡ ಪ್ರಭಾವಿ ಭಾಷಣಕಾರನಾಗಿದ್ದ. ಆದರೆ ಮಾಧ್ಯಮಗಳನ್ನು ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ತಮ್ಮ ಪಕ್ಷದ ಹಿರಿಯ ನಾಯಕರನ್ನು, ಸಂಸದರನ್ನು ಕೆಳಗೆ ಕೂರಿಸಿ, ತಾನು ಪೋಡಿಯಂ ಮೇಲೆ ಎತ್ತರದ ಕುರ್ಚಿ ಹಾಕಿ ಕೊಂಡು ಪಾಠ ಮಾಡುವ ಮೋದಿಗೆ ‘ಪ್ರಜಾತಂತ್ರದಲ್ಲಿ ನಂಬಿಕೆ ಇಲ್ಲ. ಪ್ರಜಾತಂತ್ರದ ಏಣಿ ಬಳಸಿಕೊಂಡು ಅಧಿಕಾರಕ್ಕೆ ಬಂದದ್ದೇನೋ ನಿಜ. ಆದರೆ ಅದಕ್ಕೆ ನಿಷ್ಠನಾಗಿರಬೇಕೆಂದಿಲ್ಲ. ಹಿಟ್ಲರ್ ಕೂಡ ಚುನಾವಣೆಯಲ್ಲಿ ಗೆದ್ದು ಬಂದು ಜರ್ಮನಿ ಯನ್ನು ಎಂಥ ನರಕ ಕೂಪಕ್ಕೆ ತಳ್ಳಿದ ಎಂಬುದು ಎಲ್ಲರಿಗೂ ಗೊತ್ತಿದೆ. ಮೋದಿಯಲ್ಲೂ ಒಬ್ಬ ಸರ್ವಾಧಿಕಾರಿ ಯಿದ್ದಾನೆ. ಅದರ ಬಿಸಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರಿಗೆ ಈಗಾಗಲೇ ತಟ್ಟಿದೆ. ಪ್ರತಿಪಕ್ಷಗಳು ನೆಲ ಹಿಡಿದಿವೆ. ಪ್ರತಿಭಟನೆಗಳು ಪ್ರಹಸನಗಳಾಗುತ್ತಿವೆ. ಇಂಥ ದೇಶದಲ್ಲಿ ಮೋದಿ, ಫ್ಯಾಸಿಸ್ಟ್ ಸರ್ವಾಧಿಕಾರಿ ಯಾಗುವ ಎಲ್ಲ ಅಪಾಯಗಳು ಇವೆ ಎಂಬುದು ವಾಸ್ತವ ಸಂಗತಿ.

varthabharati

Please follow and like us:
error

Leave a Reply

error: Content is protected !!