ತಂದೆ ಕೊಲೆಗೈದ ಆರೋಪಿ ಮಗನಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣಕ್ಕೆ ತಂದೆಯನ್ನು ಕೊಂದ ಆರೋಪಿ ಕಿನ್ನಾಳದ ನಾಗರಾಜ ಉಪ್ಪಾರ ಎಂಬಾತನಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ ಹಾಗೂ ೧೦ ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

  ಆರೋಪಿ ನಾಗರಾಜ ಉಪ್ಪಾರ ತನ್ನ ತಂದೆ ಯಮನೂರಪ್ಪ ಉಪ್ಪಾರ ಎಂಬುವವರಿಗೆ ಕಳೆದ ೨೦೧೪ ರ ಆಗಸ್ಟ್ ೦೬ ರಂದು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ, ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸ್ ಠಾಣೆಯಲ್ಲಿ  ಭಾ.ದಂ.ಸಂ ಕಲಂ: ೩೦೨, ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್‌ಐ ಪಿ.ಬಿ. ನೀಲಗಾರ ಹಾಗೂ ಸಿಪಿಐ ಸತೀಶ್ ಎಸ್.ಪಾಟೀಲ್ ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ಸಪ್ಪಣ್ಣವರ ಅವರು, ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೩೦೨ ರ ಅಡಿ  ಅಪರಾಧಕ್ಕಾಗಿ ಜೀವಾವಧಿ ಕಠಿಣ ಶಿಕ್ಷೆ ಹಾಗೂ ೧೦ ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿ, ಆದೇಶಿಸಿದ್ದಾರೆ. ಅಭಿಯೋಜನೆ ಪರವಾಗಿ ಕೊಪ್ಪಳದ ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ್ ವಾದ ಮಂಡಿಸಿದ್ದರು.
Please follow and like us:
error