ಕೊಪಳ-ಬಳ್ಳಾರಿ ಜಿಲ್ಲೆಗಳು ಧಾರವಾಡ ಪೀಠದಲ್ಲಿಯೇ ಮುಂದುವರೆಯಲಿ

: ಸಂಸದ ಶಿವರಾಮಗೌಡ
  : ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಧಾರವಾಡ ಸಂಚಾರಿ ಪೀಠದ ವ್ಯಾಪ್ತಿಯಲ್ಲಿರುವುದರಿಂದ ವಕೀಲರು ಮತ್ತು ಕಕ್ಷಿದಾರರು ಧಾರವಾಡಕ್ಕೆ ಸುಲಭವಾಗಿ ಹೋಗಿಬರಲು ಅವಕಾಶವಾಗುತ್ತದೆ. ಈ ಹಿನ್ನಲೆಯಲ್ಲಿ ವ್ಯಾಜ್ಯಗಳು ಧಾರವಾಡ ಪೀಠದಲ್ಲಿಯೇ ಮುಂದುವರೆಯಬೇಕಿದೆ ಎಂದು ಸಂಸದ ಶಿವರಾಮಗೌಡ ಅವರು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಮುಖ್ಯಮಂತ್ರಿಗಳು ಹಾಗೂ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರುಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
  ಕಕ್ಷಿದಾರರಿಗೆ ಮತ್ತು ವಕೀಲರಿಗೆ ತ್ವರಿತ ವಿಲೇವಾರಿ, ನ್ಯಾಯಾಲಯ ಹತ್ತಿರ ಮತ್ತು ಅನುಕೂಲ ಕಲ್ಪಿಸುವ ದೃಷ್ಟಿಯ ಸಾರ್ಥಕತೆಯ ಉದ್ದೇಶದಿಂದ ಗುಲಬರ್ಗಾ ಮತ್ತು ಧಾರವಾಡದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲಾಗಿದೆ.  ಕೊಪ್ಪಳ ಜಿಲ್ಲೆಯು ಭೌಗೋಳಿಕವಾಗಿ ಧಾರವಾಡಕ್ಕೆ ಹತ್ತಿರವಾಗಿದ್ದು, ರಸ್ತೆ ಮತ್ತು ರೈಲು ಸಂಪರ್ಕ ಅನುಕೂಲವಾಗಿರುವುದರಿಂದ ಒಮ್ಮತದ ನಿರ್ಣಯದೊಂದಿಗೆ ಧಾರವಾಡ ಹೈಕೋರ್ಟ್ ಸಂಚಾರಿ ಪೀಠಕ್ಕೆ ಸೇರಿಸಲಾಗಿದೆ.  ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಧಾರವಾಡ ಪೀಠದ ವ್ಯಾಪ್ತಿಯಲ್ಲಿರುವುದರಿಂದ ವಕೀಲರು ಮತ್ತು ಕಕ್ಷಿದಾರರು ಧಾರವಾಡಕ್ಕೆ ಸುಲಭವಾಗಿ ಹೋಗಿ, ಅದೇ ದಿನ ಮರಳಲು ಅನುಕೂಲವಿದೆ. ಒಂದು ವೇಳೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಗುಲ್ಬರ್ಗಾದ ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸಿದರೆ, ವಕೀಲರು ಮತ್ತು ಕಕ್ಷಿದಾರರು ಗುಲ್ಬರ್ಗಾ ತಲುಪಲು ಒಂದು ದಿನ, ಕಲಾಪಕ್ಕೆ ಒಂದು ದಿನ ಹಾಗೂ ಊರಿಗೆ ಮರಳಲು ಒಂದು ದಿನ ಹೀಗೆ ಮೂರು ದಿನಗಳು ವ್ಯರ್ಥವಾಗುತ್ತವೆ ಹಾಗೂ ಸಾರಿಗೆ ಸೌಕರ್ಯವು ಅನುಕೂಲವಾಗಿರುವುದಿಲ್ಲ.  ಇದರಿಂದ ಕಕ್ಷಿದಾರರು ಮತ್ತು ವಕೀಲರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಈ ಹಿಂದೆಯೂ ಸಹ ಈ ಎರಡು ಜಿಲ್ಲೆಯ ವಕೀಲರ ಹೋರಾಟದಲ್ಲಿ ಭಾಗಿಯಾಗಿ ದೆಹಲಿಯಲ್ಲಿ ಸುಪ್ರೀಂಕೋರ್ಟ ನ್ಯಾಯಾಧೀಶರನ್ನು ಭೇಟಿ ಮಾಡಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಯಥಾವತ್ತಾಗಿ ಮುಂದುವರೆಸುವುದರ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ವಿವರಣೆಗಳನ್ನು ನೀಡಿದ್ದರಿಂದ, ಅಂದು ಉದ್ಭವಿಸಿದ್ದ ಸಮಸ್ಯೆಯನ್ನು ಅಲ್ಲಿಗೇ ಕೈಬಿಡಲಾಗಿತ್ತು. ಈಗ ಅದೇ ವಿಷಯವನ್ನು ಮುಂದಿಟ್ಟುಕೊಂಡು ಪುನಃ ಹೋರಾಟ ಪ್ರಾರಂಭಿಸಿರುವುದು ಸರಿಯಲ್ಲ.
ಸಂಚಾರಿ ಪೀಠದ ಸ್ಥಾಪನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಿರಲಿ ಎನ್ನುವ ದೃಷ್ಟಿಯಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಈಗ ಇರುವಂತೆ ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಲ್ಲಿಯೇ ಮುಂದುವರೆಸುವಂತೆ ಸಂಸದ ಶಿವರಾಮಗೌಡ ಅವರು ಕರ್ನಾಟಕ ಹೈಕೋರ್ಟನ ಮುಖ್ಯ ನ್ಯಾಯಾಧೀಶರಾದ ವಿಕ್ರಂಜಿತ್ ಸೇನ್‌ರವರು, ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವರಾದ ಎಸ್. ಸುರೇಶ ಕುಮಾರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ

Please follow and like us:
error