fbpx

ನಾನೇ ಬೇರೆ ನನ್ನ ಸ್ಟೈಲೆ ಬೇರೆ- ರಾಯರಡ್ಡಿ

ಸಚಿವನಾಗದೇ ಇರೋದಕ್ಕೆ ಯಾವುದೇ ಬೇಸರ ಇಲ್ಲ. ಆದರೆ ನಿರಾಸೆ ಇದೆ. ಗೂಟದ ಕಾರಿನಲ್ಲಿ ಮೆರೆದಾಡುವ ಯಾವುದೇ ಆಸೆ ನನಗಿಲ್ಲ. ಆದರೆ ನನ್ನಲ್ಲಿರುವ ಎಕ್ಸಟ್ರಾ ಎನರ್ಜಿಯನ್ನು  ಉಪಯೋಗಿಸಲು ಅವಕಾಶ ಸಿಗುತ್ತೆ ಎಂದುಕೊಂಡಿದ್ದೆ  ಅದಾಗಲಿಲ್ಲ ಎಂದು ಮಾಜಿ ಸಚಿವ ,ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. 
 ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಯರಡ್ಡಿ 371 ಜೆ ಕಲಂ ಜಾರಿ ಇದೇ ವರ್ಷ ಆಗಬೇಕು. ತಾಂತ್ರಿಕವಾಗಿ ಇದು ಸಾಧ್ಯವಾಗಲಿಕ್ಕಿಲ್ಲ. ಆದರೆ ವೃತ್ತಿ ಶಿಕ್ಷಣ  ಪ್ರವೇಶಗಳಲ್ಲಿ 80% ಮೀಸಲಾತಿ ನಮ್ಮ ಭಾಗದ ಮೆಡಿಕಲ್ ಮತ್ತು ಇಂಜಿನಿಯರಿಂಗ ಕಾಲೇಜುಗಳಲ್ಲಿ ಈ ವರ್ಷ ಸರಕಾರ ನೀಡಬೇಕು. ಇದಕ್ಕೆ ನಾವೆಲ್ಲರೂ ಒತ್ತಾಯ ಮಾಡುತ್ತೇವೆ. ಮುಖ್ಯಮಂತ್ರಿ , ಶಿಕ್ಷಣ ಮಂತ್ರಿಗಳ ಜೊತೆ ಚರ್ಚೆ ಮಾಡಿರುವುದಾಗಿ ಹೇಳಿದರು.
 ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಯಾರನ್ನೂ ಕೇಳಿಲ್ಲ. ನನ್ನ ರಾಜಕೀಯ ಆನುಭವ ಆಧರಿಸಿ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಇರಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ನನಗೆ ಅಸಮಾಧಾನ ಇಲ್ಲ, ನಿರಾಸೆಯಾಗಿದೆಯಷ್ಟೇ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕನಾಗಿದ್ದುಕೊಂಡೇ ಜಿಲ್ಲೆಯ ಅಭಿವೃದ್ಧ ಕೆಲಸಗಳನ್ನು ಹೇಗೆ ಮಾಡ್ತಿನಿ ಎಂಬುದನ್ನು ನೋಡ್ತಾ ಇರಿ ಎಂದರು.
        ಗೂಟದ ಕಾರಿನಲ್ಲಿ ಓಡಾಡುತ್ತಾ ಮಜಾ ಮಾಡುವ ಆಸೆ ನನಗಿಲ್ಲ. ಅರ್ಹತೆ ಪರಿಗಣಿಸಿದ್ದರೆ ಖಂಡಿತವಾಗಿ ನನಗೆ ಸಚಿವ ಸ್ಥಾನ ಸಿಗುತ್ತಿತ್ತು. ಆದರೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಪಕ್ಷದ ವರಿಷ್ಠರು ಮಂತ್ರಿ ಸ್ಥಾನಗಳನ್ನು ಹಂಚಿಕೆ ಮಾಡಿದ್ದರಿಂದ ಸಚಿವ ಸ್ಥಾನ ನನಗೆ ಕೈ ತಪ್ಪಿದೆ. ಅದಕ್ಕೆ ನನಗೇನೂ ಬೇಜಾರಿಲ್ಲ. ಆದರೆ ನನ್ನ ಬೆಂಬಲಿಗರಿಗೆ ನೋವಾಗಿರುವುದು ನಿಜ. ಭಾವೋದ್ವೇಗಕ್ಕೆ ಒಳಗಾಗಿ ರಾಜಿನಾಮೆ ನೀಡುವುದಾಗಿ ಬೆಂಬಲಿಗರು ತಿಳಿಸಿದ್ದಾರಷ್ಟೇ ಅದಕ್ಕೆ ಅಷ್ಟು ಪ್ರಾಮುಖ್ಯತೆಯ ಅಗತ್ಯವಿಲ್ಲ ಎಂದು ಹೇಳಿದರು.
         ಈಗ ರಾಜ್ಯದಲ್ಲಿ ಭೋವಿ ಸಮಾಜದ ಶಾಸಕರು ಶಿವರಾಜ ತಂಗಡಗಿಯವರೊಬ್ಬರೇ ಇದ್ದರು. ಭೋವಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಮುಂದೆ ಅರ್ಹತೆ ಪರಿಗಣಿಸಿದರೆ ನಾನು ಮಂತ್ರಿಯಾಗಲೂಬಹುದು. ಇವತ್ತಿನ ರಾಜಕೀಯದಲ್ಲಿ ಯಾರಾದರೂ ಮಂತರಿಯಾಗಬಹುದು, ಇಂದು ಶಿವರಾಜ ತಂಗಡಗಿ ಸಚಿವರಾಗಿದ್ದಾರೆ. ನಾಳೆ ಅವರ ಕಾರು ಚಾಲಕನೂ ಮಂತ್ರಿಯಾಗಬಹುದು. ನನ್ನ ಕಾರು ಚಾಲಕ ಕೂಡಾ ಸಚಿವನಾಗಬಹುದು ಎಂದು ಸಚಿವ ಸ್ಥಾನದ ಬಗ್ಗೆ ತಮಗಾಗಿರುವ ನಿರಾಸೆಯನ್ನು ಬಸವರಾಜ ರಾಯರಡ್ಡಿ ಹೊರಹಾಕಿದರು.
       
ದೇವೇಗೌಡರಷ್ಟು ನನ್ನನ್ನು ಯಾರೂ ಪ್ರೀತಿಸುವುದಿಲ್ಲ. :
          ನನಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ೧೯೯೧ರ ಲೋಕಸಭಾ ಚುನಾವಣೆ ಕಾರಣ ಎನ್ನುವುದು ಸುಳ್ಳು. ನಾನು ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನಡುವೆ ಉತ್ತಮ ಬಾಂಧವ್ಯ ಇದೆ. ನನ್ನ ಏಳಿಗೆ ಸಹಿಸದ ಕೆಲವರು ಸುಮ್ಮನೆ ಇಂಥ ಸುದ್ದಿಗಳನ್ನು ಹರಿಬಿಡುತ್ತಾರೆ. ರಾಜಕೀಯದಲ್ಲಿ ನಾನು ಯಾರನ್ನೂ ದ್ವೇಷಿಸುವುದಿಲ್ಲ. ಜಿಲ್ಲೆಯ ಎಲ್ಲ ಪಕ್ಷಗಳ ಪರಾಭವಗೊಂಡಿರುವ ಅಭ್ಯರ್ಥಿಗಳ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದೇನೆ. ಇದಕ್ಕೆ ಮತ್ತೊಂದು ಬಣ್ಣ ಕಟ್ಟಬೇಕಿಲ್ಲ. ಈಗಲೂ ದೇವೇಗೌಡರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಷ್ಟು ನನ್ನನ್ನು ಯಾರೂ ಪ್ರೀತಿಸುವುದಿಲ್ಲ. ನಾನೂ ಕೂಡಾ ಅವರನ್ನು ಗೌರವಿಸುತ್ತೇನೆ. ಅವರು ಒಬ್ಬ ಮೇಧಾವಿ ರಾಜಕಾರಣಿ ಎಂದು ದೇವೇಗೌಡರನ್ನು ಶ್ಲಾಘಿಸಿದರು.

೩೭೧(ಜೆ) ನೇ ತಿದ್ದುಪಡಿ ಜಾರಿಗೆ ಆಗಷ್ಟ ೧೫ ಡೆಡ್‌ಲೈನ್ :
          ಈಗ ತಾನೇ ನಮ್ಮ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಮೇ ೨೯ರ ನಂತರ ಆಯ್ಕೆಯಾಗಿರುವ ಶಾಸಕರು ಅಽಕೃತವಾಗಿ ಆಡಳಿತ ನಡೆಸಬಹುದು. ಅಲ್ಲಿಯವರೆಗೂ ನಾವು ಆಯ್ಕೆಯಾಗಿರುವ ಶಾಸಕರಷ್ಟೇ. ಹಾಗಾಗಿ ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿಯ ಪ್ರಯೋಜನ ಪಡೆದುಕೊಳ್ಳಲಾಗುತ್ತಿಲ್ಲ. ಆದರೂ ಹೈ.ಕ ಭಾಗಕ್ಕೆ ಶೇಕಡಾ ೮೦ ರಷ್ಟು ಮೀಸಲಾತಿ ನೀಡುವಂತೆ ಸರಕಾರಕ್ಕೆ ಒತ್ತಾಯಿಸುತ್ತೇನೆ. ತಿದ್ದುಪಡಿ ಜಾರಿಗೆ ತರಲು ಮೇ ೨೯ರ ನಂತರ ಸರಕಾರ ಹೈ.ಕ. ಭಾಗದ ಎಲ್ಲ ಶಾಸಕರನ್ನು ಆಹ್ವಾನಿಸಿ ಸಭೆ ಕರೆಯಬೇಕು. ತಿದ್ದುಪಡಿ ಜಾರಿಗೆ ತರಲು ನೀತಿ ನಿಯಮಗಳನ್ನು ರೂಪಿಸಬೇಕು. ಆಗಷ್ಟ ೧೫ ರೊಳಗೆ ಈ ಭಾಗದ ಜನರಿಗೆ ೩೭೧ (ಜೆ) ಕಲಂ ತಿದ್ದುಪಡಿಯ ಪ್ರಯೋಜನ ಸಿಗುವಂತಾಗಬೇಕು ಎಂದು ಅವರು ತಿಳಿಸಿದರು.
          ೨೦೧೩ರ ಜನೇವರಿ ೧ ರಂದು ರಾಷ್ಟ್ರಪತಿಗಳು ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿಯ ವಿಷಯವನ್ನು ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಿದರು. ಶಿಕ್ಷಣ, ಉದ್ಯೋಗ ಮೀಸಲಾತಿ ಹಾಗೂ ಈ ಭಾಗದ ಅಭಿವೃದ್ಧಿಗೆ ವಿಶೇಷ ಅನುದಾನದ ಸೌಲಭ್ಯ ಕಲ್ಪಿಸುವ ಈ ತಿದ್ದುಪಡಿಯ ಪ್ರಯೋಜನ ಸಿಗುವುದಕ್ಕೆ ರಾಜ್ಯ ಸರಕಾರ ಮನಸ್ಸು ಮಾಡಬೇಕು. ಆಗ ಅಸ್ತಿತ್ವದಲ್ಲಿದ್ದ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರ ಮೂರು ತಿಂಗಳು ಕಳೆದರೂ ತಿದ್ದುಪಡಿ ಜಾರಿಗೆ ನಿರ್ಲಕ್ಷ್ಯ ತೋರಿತು. ಹಾಗಾಗಿ ಈ ಸಲೊದ ಸಿಇಟಿಯಲ್ಲಿ ಈ ಭಾಗದ ಜನರಿಗೆ ಮೀಸಲಾತಿ ಸಿಗದಂತಾಯಿತು ಎಂದು ಅವರು ವಿಶ್ಲೇಷಿಸಿದರು.
         ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಮಹೇಶ ಹಳ್ಳಿ, ಸುರೇಶ ದೇಸಾಯಿ, ಜಾಕೀರಹುಸೇನ್ ಕಿಲ್ಲೆದಾರ, ಪ್ರಸನ್ನ ಗಡಾದ ಮತ್ತಿತರರು ಇದ್ದರು.

Please follow and like us:
error

Leave a Reply

error: Content is protected !!