ಮತದಾರರ ಪಟ್ಟಿಗೆ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಜಿ.ಪಂ. ಸಿಇಓ ಸೂಚನೆ

 ಕೊಪ್ಪಳ ಜಿಲ್ಲೆಯ ವಿವಿಧ ಪದವಿ ಕಾಲೇಜು, ಪಾಲಿಟೆಕ್ನಿಕ್, ಬಿ.ಇಡಿ, ಡಿ.ಇಡಿ ಮುಂತಾದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಇದುವರೆಗೂ ಮತದಾರರ ಪಟ್ಟಿಗೆ ಹೆಸರು ನೊಂದಣಿ ಮಾಡಿಸದೇ ಇರುವ ಅರ್ಹರನ್ನು ಕೂಡಲೆ ನೋಂದಣಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಸೂಚನೆ ನೀಡಿದರು.
  ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡಿ

ಸುವ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಲೋಕಸಭಾ ಚುನಾವಣೆ ಸಂಬಂಧ ಮತದಾರರ ನೋಂದಣಿಗೆ ಮಾ. ೧೬ ರವರೆಗೂ ಅವಕಾಶ ಕಲ್ಪಿಸಲಾಗಿದ್ದು, ಇದುವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸದೇ ಇರುವಂತಹ ಅರ್ಹ ಕಾಲೇಜು ವಿದ್ಯಾರ್ಥಿಗಳು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಯಾ ಕಾಲೇಜುಗಳ ಪ್ರಾಚಾರ್ಯರು ಖುದ್ದು ಆಸಕ್ತಿ ವಹಿಸಿ ಕ್ರಮ ಕೈಗೊಳ್ಳಬೇಕು.  ಇದಕ್ಕಾಗಿ ಕಾಲೇಜುಗಳಿಗೆ ನಮೂನೆ -೬ ಅನ್ನು ಪೂರೈಕೆ ಮಾಡಲಾಗುತ್ತಿದೆ.  ೧೮ ವರ್ಷ ಪೂರ್ಣಗೊಂಡಿರುವ ಯಾವುದೇ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಫಲವಾಗಬಾರದು.  ಪ್ರತಿ ಕಾಲೇಜಿನವರು ತಮ್ಮ ಕಾಲೇಜಿನ ಕ್ರಿಯಾಶೀಲ ಮತ್ತು ನಾಯಕತ್ವ ಗುಣವುಳ್ಳ ವಿದ್ಯಾರ್ಥಿಯನ್ನು ಮತದಾರರ ಜಾಗೃತಿ ಕಾರ್ಯಕ್ಕೆ ಕ್ಯಾಂಪಸ್ ರಾಯಭಾರಿಯನ್ನಾಗಿ ನೇಮಿಸಿ, ಅಂತಹ ಪಟ್ಟಿಯನ್ನು ಕೂಡಲೆ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯತಿ ಕಚೇರಿಗೆ ಸಲ್ಲಿಸಬೇಕು.  ಮತದಾರರು ಕಡ್ಡಾಯವಾಗಿ ಮತ ಚಲಾವಣೆ ಮಾಡುವಂತಾಗಲು, ಮುಂದಿನ ದಿನಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಎಲ್ಲ ಕಾಲೇಜುಗಳ ಪ್ರಾಚಾರ್ಯರು ಈ ಜಾಗೃತಿ ಕಾರ್ಯಕ್ರಮಕ್ಕೆ ಪೂರಕವಾಗಿ ಸಹಕರಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ, ಉದಪುಡಿ ಅವರು ಮನವಿ ಮಾಡಿದರು.
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶುಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀಕಾಂತ್ ಬಾಸೂರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಸುಮಾರು ೫೦ ಕಾಲೇಜುಗಳ ಪ್ರಾಚಾರ್ಯರು, ಪ್ರಾಂಶುಪಾಲರುಗಳು ಭಾಗವಹಿಸಿ, ಅಗತ್ಯ ಸಲಹೆಗಳನ್ನು ನೀಡಿದರು.

Leave a Reply