ಸುದ್ದಿವಾಹಿನಿ ಪ್ರತಿನಿಧಿಗಳ ಬಂಧನ: ಬಿಡುಗಡೆ

ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಮಾ.2ರಂದು ನಡೆದಿದ್ದ ವಕೀಲರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸುದ್ದಿ ವಾಹಿನಿಗಳ ಆರು ಮಂದಿ ಪ್ರತಿನಿಧಿಗಳನ್ನು ನಗರ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಸುದ್ದಿ ವಾಹಿನಿ ಪ್ರತಿನಿಧಿಗಳಾದ ಕೆ.ಎಂ.ಮಂಜುನಾಥ್, ಮಧುನಾಯಕ್, ಎನ್.ಸಿ.ಚಿಂತನ್, ಎಂ.ಎಸ್.ನಾಗೇಶ್‌ಗೌಡ, ಲಕ್ಷ್ಮಣ್ ಹೂಗಾರ್ ಮತ್ತು ಕಿರಣ್ ಅವರನ್ನು ಬಂಧಿಸಲಾಗಿತ್ತು. ಸುಳ್ಳು ಸುದ್ದಿ ಪ್ರಸಾರ ಮಾಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ ಮತ್ತು ಅನುಚಿತ ವರ್ತನೆ ಆರೋಪದ ಮೇಲೆ ಅವರನ್ನು ಬಂಧಿಸಿ ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಾಯಾಂಗ ಬಂಧನ: ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ (ಮಾ.27) ಹಲಸೂರುಗೇಟ್ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಮತ್ತು ಕಾನ್‌ಸ್ಟೇಬಲ್ ರೂಪಾ ಅವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ವಕೀಲ ಮಂಜುನಾಥ್ ಅವರನ್ನು ಏ.11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರೋಪಿ ಮಂಜುನಾಥ್ ಅವರನ್ನು ನಗರದ ಆರನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಯಿತು. 
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.  – ಪ್ರಜಾವಾಣಿ

Leave a Reply