ಕನ್ನಡದ ಮಕ್ಕಳು ಕನ್ನಡದ ಎದೆಹಾಲು ಕುಡಿದು ಬೆಳೆಯಲಿ

ಎದೆಯಲ್ಲಿ ಹಾಲು ತುಂಬಿ ತುಳುಕುತ್ತಿದ್ದರೂ, ಹೆತ್ತ ತಾಯಿಯೇ ತನ್ನ ಮಗುವಿಗೆ ಡಬ್ಬದ ಹಾಲನ್ನು ಕುಡಿಸಲು ನಿರ್ಧರಿಸಿದರೆ? ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಸರಕಾರದ ಆದೇಶ,ಇದಕ್ಕಿಂತ ಭಿನ್ನವಾಗಿಲ್ಲ.ಈ ನಾಡಿನ ವಿದ್ಯಾರ್ಥಿಗಳ ತುಟಿಗೆ ಕನ್ನಡದ ಮೊಲೆಹಾಲಿನ ಬದಲಿಗೆ ಡಬ್ಬದ ಪುಡಿಯ ಹಾಲನ್ನು ನೀಡುವುದಕ್ಕೆ ಸರಕಾರವೇ ಅತ್ಯುತ್ಸಾಹಿತವಾಗಿದೆ.ಬಹುಶಃ ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ ನಡೆಸಲು ಸರಕಾರವೂ ಆಂಗ್ಲ ಮಾಧ್ಯಮಗಳ ಶಾಲೆಗಳನ್ನು ನಡೆಸುವುದೇ ಪರಿಹಾರ ಎಂಬ ಮೂರ್ಖ ನಿರ್ಧಾರಕ್ಕೆ ಬಂದಿದೆ.ಸರಕಾರಿ ಶಾಲೆಗಳ ಮಹತ್ವ, ಅದರ ಉದ್ದೇಶ, ಗುರಿ ಇತ್ಯಾದಿಗಳ ಕುರಿತಂತೆ ಅರಿವಿಲ್ಲದ ಸರಕಾರ ಮಾತ್ರ ಇಂತಹದೊಂದು ನಿರ್ಧಾರವನ್ನು ತೆಗೆದು ಕೊಳ್ಳಲು ಸಾಧ್ಯ.ಈ ಹಿಂದೆ, ಇಂಗ್ಲಿಷ್ ಪಠ್ಯವನ್ನು ಸೇರಿಸುವ ಕುರಿತಂತೆ ಭಾರೀ ಗದ್ದಲಗಳು, ಚರ್ಚೆಗಳು ಶಿಕ್ಷಣ ತಜ್ಞರ ನಡುವೆ ಎದ್ದಿದ್ದವು. ಒಂದನೆ ತರಗತಿಯಿಂದ ಇಂಗ್ಲಿಷ್ ಪಠ್ಯವನ್ನು ಸೇರಿಸುವುದರಿಂದ ಕನ್ನಡ ಸರ್ವನಾಶವಾಗುತ್ತದೆ ಎಂಬಂತಹ ಮಾತುಗಳನ್ನು ಕೆಲವರು ಆಡಿದ್ದರು. ಆದರೆ ಇಂದಿನ ಸಂದರ್ಭದಲ್ಲಿ ಇಂಗ್ಲಿಷ್‌ನ ಅಗತ್ಯದ ಕುರಿತಂತೆ ಅರಿವುಳ್ಳವರು ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್‌ನ್ನು ಕಲಿಸುವ ಕುರಿತಂತೆ ಒತ್ತಾಯವನ್ನು ಹೇರಿದ್ದರು.
ಖಾಸಗಿ ಶಾಲೆಗಳ ಜೊತೆಗೆ ಸ್ಪರ್ಧಿಸುವುದಕ್ಕೆ ಇದೊಂದು ಉತ್ತಮ ಮಾರ್ಗವಾಗಿತ್ತು. ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್ ಕಲಿಯುವುದರಿಂದ, ಮಾತೃಭಾಷೆ ಯಲ್ಲಿ ಹಿಡಿತ ಹಾಗೆಯೇ ಇಂಗ್ಲಿಷ್ ಭಾಷೆಯಲ್ಲೂ ಪ್ರಾವಿಣ್ಯ, ಇವೆರಡೂ ನಮ್ಮ ಮಕ್ಕಳದಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದನೆ ತರಗತಿಯಿಂದ ಇಂಗ್ಲಿಷ್ ಪಠ್ಯವನ್ನು ಸೇರಿಸುವ ಪ್ರಯತ್ನ ಮಾಡಿತಾದರೂ, ಅದಿನ್ನೂ ತನ್ನ ಉದ್ದೇಶವನ್ನು ಈಡೇರಿಸಿಕೊಂಡಿಲ್ಲ. ಉತ್ತಮ ಇಂಗ್ಲಿಷ್ ಶಿಕ್ಷಕರು, ಪಠ್ಯಗಳು ಇತ್ಯಾದಿ ಇತ್ಯಾದಿಗಳ ಕೊರತೆಯಿಂದಾಗಿ,ಹೆಸರಿಗಷ್ಟೇ ಇಂಗ್ಲಿಷ್ ಪಠ್ಯವನ್ನು ಸೇರಿಸಿಕೊಂಡಂತಾಗಿದೆ. ಮಕ್ಕಳಿಗೆ ವಿಶೇಷ ಪ್ರಯೋಜನವಾಗಿಲ್ಲ. ಆದರೆ ಇದೀಗ ಸರಕಾರ ಹೊರಡಿಸಿರುವ ಹೊಸ ಆದೇಶ ಕನ್ನಡದ ಕತ್ತನ್ನು ಹಿಸುಕುವಂತಹದ್ದು.
ಆರನೆ ತರಗತಿಯಿಂದ ಆಂಗ್ಲ ಮಾಧ್ಯಮದ ಮೂಲಕ ಪಠ್ಯಗಳನ್ನು ಕಲಿಸುವ, ಇಂಗ್ಲಿಷ್‌ನ್ನು ಬಡವರ್ಗಗಳಿಗೂ ತಲುಪಿಸುವ ಉದ್ದೇಶ ಸರಕಾರದ್ದಾಗಿರ ಬಹುದು. ಆದರೆ ಇದರಲ್ಲೊಂದು ಸಮಸ್ಯೆಯಿದೆ. ನಾಳೆ, ಐದನೆ ತರಗತಿಯ ಬಳಿಕ ಎಲ್ಲರೂ ಆಂಗ್ಲ ಮಾಧ್ಯಮಗಳಿಗೇ ಸೇರಲು ಇಚ್ಛೆ ಪಟ್ಟರೆ ಕನ್ನಡ ಸರ್ವನಾಶವಾಗುವುದರಲ್ಲಿ ಸಂಶಯವಿಲ್ಲ. ಆರನೆ ತರಗತಿಯವರೆಗಿನ ಕನ್ನಡ ತೀರಾ ಪ್ರಾಥಮಿಕವಾದುದು. ಕನಿಷ್ಠ ಎಸೆಸೆಲ್ಸಿಯವರೆಗಾದರೂ ಕನ್ನಡ ಮಾಧ್ಯಮ ದಲ್ಲಿ ಕಲಿಯದೆ ಇದ್ದರೆ, ನಮ್ಮ ವಿದ್ಯಾರ್ಥಿಗಳು ಕನ್ನಡವನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಂದು ಇಂಗ್ಲಿಷ್ ಬೇಡವೆಂದಲ್ಲ. ಕನ್ನಡ ಇಂಗ್ಲಿಷ್‌ನ್ನು ಜೊತೆ ಜೊತೆಯಾಗಿ ಕಲಿಸುವ ಕಡೆಗೆ ಸರಕಾರ ಗಮನ ನೀಡಬೇಕು.
ಕನ್ನಡ ಮಾಧ್ಯಮದಲ್ಲಿ ಕಲಿಸುತ್ತಲೇ, ಒಂದನೆ ತರಗತಿಯಿಂದಲೇ ಮಕ್ಕಳಿಗೆ ಇಂಗ್ಲಿಷ್‌ನ್ನು ಭಾಷೆಯಾಗಿ ಕಲಿಸುವ ಕೆಲಸ ನಡೆಯಬೇಕು. ಇದರ ಜೊತೆ ಜೊತೆಗೆ ಸರಕಾರಿ ಶಾಲೆಗಳನ್ನು ಅತ್ಯಾಧುನಿಕಗೊಳಿಸಿ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಮಾಡುವ ಹೊಣೆಗಾರಿಕೆಯೂ ಸರಕಾರದ್ದಾಗಿದೆ.ಒಂದು ವೇಳೆ, ಆರನೆ ತರಗತಿಯಿಂದ ಆಂಗ್ಲ ಮಾಧ್ಯಮವನ್ನು ಆರಂಭಿಸಿದರೆ ಸರಕಾರವೇ ಕನ್ನಡದ ಕುತ್ತಿಗೆ ಹಿಚುಕಿದಂತಾದೀತು. ಮುಂದಿನ ದಿನಗಳಲ್ಲಿ ಕನ್ನಡ ಬರೆಯುವುದಕ್ಕೆ, ಮಾತನಾಡುವುದಕ್ಕೆ ತಡಕಾಡುವ ಯುವ ಪೀಳಿಗೆಯ ಸೃಷ್ಟಿಗೆ ಸರಕಾರವೇ ಕಾರಣವಾದೀತು.
ಇಂತಹ ಬೇಜವಾಬ್ದಾರಿ ಆದೇಶವನ್ನು ತಕ್ಷಣ ಹಿಂದೆಗೆದುಕೊಂಡು, ಇರುವ ಸರಕಾರಿ ಶಾಲೆಗಳನ್ನು ಉದ್ಧರಿಸುವತ್ತ ಮನಸನ್ನು ಕೊಡಲಿ. ಮಠಗಳಿಗೆ ಚೆಲ್ಲುವ ಅನುದಾನವನ್ನು ಈ ಶಾಲೆಗಳಿಗೆ ನೀಡಲಿ. ಹಿಂದೆ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮಗಳಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂಗ್ಲಿಷ್ ಪ್ರೊಫೆಸರಾಗಿ, ಅಂತಾರಾಷ್ಟ್ರೀಯ ಮಟ್ಟದ ಚಿಂತಕರಾಗಿ ಬೆಳೆದ ಉದಾಹರಣೆ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ನ್ನು ಕಲಿಸಬೇಕೇ ಹೊರತು, ಆಂಗ್ಲ ಮಾಧ್ಯಮದ ಜೊತೆಗೆ ಕನ್ನಡವನ್ನು ಕಲಿಸುವುದಲ್ಲ.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿಯವರು ತೆಗೆದುಕೊಂಡ ನಿರ್ಧಾರ ಶ್ಲಾಘನೀಯವಾಗಿದೆ.ಸರಕಾರ ತನ್ನ ಆದೇಶ ಹಿಂದೆಗೆದುಕೊಳ್ಳದೇ ಇದ್ದರೆ,ಕನ್ನಡದ ಎಲ್ಲ ಸಂಘಟನೆಗಳು ಒಂದಾಗಿ ಪ್ರತಿಭಟನೆಗೆ ಇಳಿಯಬೇಕಾಗಿದೆ.ಹಾಲಂಬಿಯವರ ಬೆನ್ನಿಗೆ ನಿಲ್ಲಬೇಕಾಗಿದೆ.ನಿಜಕ್ಕೂ ಕನ್ನಡದ ಅಳಿವು ಉಳಿವಿನ ಸಂದರ್ಭವಿದು.ಮುಂದಿನ ತಲೆಮಾರು ಯಾವ ಕಾರಣಕ್ಕೂ ಕನ್ನಡ ತಾಯಿಯ ಎದೆಹಾಲಿನಿಂದ ವಂಚಿತವಾಗಿ ಬೆಳೆಯ ಬಾರದು. ಈ ನಿಟ್ಟಿನಲ್ಲಿ ಕನ್ನಡದ ಹಿರಿಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಸಂದರ್ಭ ಬಂದಿದೆ. -ವಾರ್ತಾಭಾರತಿ ಸಂಪಾದಕೀಯ
Please follow and like us:
error