ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮಕ್ಕೆ ಸಜ್ಜಾದ ಕೊಪ್ಪಳ (ಫೆಬ್ರುವರಿ ೦೪ ರಂದು)

 ಜಾಗತೀಕರಣದಿಂದ ದೇಶಿಯ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಕಣ್ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಅವುಗಳನ್ನು ಉಳಿಸಿ ಬೆಳೆಸಲು ಅನುಕೂಲವಾಗುವಂತೆ ವಾರ್ತಾ ಇಲಾಖೆಯು ಬುಡಕಟ್ಟು ಕಲಾವಿದರ ಜನಪದ ಕಲೆಗಳನ್ನು ಪ್ರದರ್ಶಿಸಲು ಜಾನಪದ ಸಂಭ್ರಮ ವನ್ನು ಕೊಪ್ಪಳದಲ್ಲಿ ಆಯೋಜಿಸಿದೆ. 
ಇದೇ ಮಂಗಳsವಾರ ಫೆಬ್ರುವರಿ ೦೪ ರಂದು ಸಾಯಂಕಾಲ ೬ ಗಂಟೆಗೆ ನಗರದ ಅಶೋಕ ಸರ್ಕಲ್‌ನಲ್ಲಿರುವ ಸಾಹಿತ್ಯ ಭವನದಲ್ಲಿ ಬುಡಕಟ್ಟು ಕಲಾವಿದರ ಜಾನಪದ ಕಲೆಗಳು ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದಲ್ಲಿ ೬ ಬುಡಕಟ್ಟು ಕಲಾವಿದರ ತಂಡಗಳ ೩೫ ಕಲಾವಿದರು ಭಾಗವಹಿಸಿ ಪ್ರದರ್ಶನ ನೀಡಲಿದ್ದಾರೆ. 
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೆಧರೋಜಿ ಗ್ರಾಮದ ರಾಜ್ಯಪ್ರಶಸ್ತಿ ವಿಜೇತ ಬುರ್ರಕಥಾ ಕಲಾವಿದೆ ನಾಡೋಜ ಶ್ರೀಮತಿ ದರೋಜಿ ಈರಮ್ಮ ಫೌಂಡೇಶನಿನ ಶ್ರೀ ವಿ.ರಾಮಾಂಜನೇಯ ನೇತೃತ್ವದ ತಂಡದವರಿಂದ ಹಗಲುವೇಷ, ಬಳ್ಳಾರಿ ಜಿಲ್ಲೆಯ ವಿರಪಾಪೂರದ ಶೃತಿಲಯ ಕಲಾ ಸಂಘದವರಿಂದ  ಮಹಿಳಾ ಡೊಳ್ಳುಕುಣಿತ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸೊನಾರಜೆಡ್ಡಿ ಗ್ರಾಮದ ಸಿದ್ದಿ ಸಮುದಾಯದ ಶ್ರೀಮತಿ ಲಿಲ್ಲಿ ಜಾಕಿ ನೇತೃತ್ವದ ಆಮ್ಚೆ ಮದ್ಲೆ ಕಲಾ ತಂಡದವರಿಂದ ಡಮಾಮಿ ನೃತ್ಯ ಮತ್ತು ಕೊಳಸೊಪುಗಡಿ ನೃತ್ಯ, ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಎಸ್.ಜಾನಕಿ ನೇತೃತ್ವದ ಆದಿವಾಸಿ ಬುಡಕಟ್ಟು ಜನಪದ ನೃತ್ಯ ಕಲಾ ತಂಡದವರಿಂದ ಹಕ್ಕಿ-ಪಿಕ್ಕಿ ಜಾನಪದ ನೃತ್ಯ ಹಾಗೂ ಶ್ರೀ ಮೋಹನ್ ಮುಂದಾಳತ್ವದ ಬಳ್ಳಾರಿಯ ದುರ್ಗಾದೇವಿ ತಾಶಾರಾಮ ಡೋಲ ಜನಪದ ಕಲಾ ತಂಡದವರಿಂದ ತಾಷಾರಾಂಡೋಲ ನೃತ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗೂಳ್ಳಾಪುರ ಗ್ರಾಮದ ಶ್ರೀ ಶೇಖರ ಲಕ್ಷ್ಮಣ ಸಿದ್ದಿ ನೇತೃತ್ವದ ಸಿದ್ಧಿ ನ್ಯಾಸ್ ಡಮಾಮಿ-ಮಂಡಳಿ ಕಲಾ ತಂಡದವರಿಂದ ಡಮಾಮಿ ನೃತ್ಯಗಳು ಈ ಜಾನಪದ ಸಂಭ್ರಮದಲ್ಲಿ ಅನಾವರಣಗೊಳ್ಳಲಿದೆ. ಈ ತಂಡಗಳಿಗೆ ವಾರ್ತಾ ಇಲಾಖೆಯು ಖ್ಯಾತ ನಿರ್ದೇಶಕ ಶ್ರೀ ಅಮರದೇವ ಅವರ ನಿರ್ದೇಶನದಲ್ಲಿ ೫ ದಿನಗಳ ಕಾಲ ತರಬೇತಿ ನೀಡಿ ಜಾನಪದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಿದೆ. 
  ಉತ್ತರ ಕರ್ನಾಟಕದ ಬಯಲು ಸೀಮೆಯ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಹಳೇದರೋಜಿ ಗ್ರಾಮದ ಬುಡಕಟ್ಟು ಸಮುದಾಯದ ಅಲೆಮಾರಿ ಬುಡ್ಗಜಂಗಮ ಜನಾಂಗದ ವಿ.ರಾಮಾಂಜನೇಯ ತಂಡ ಊರೂರು ತಿರಿಗಿ ಪ್ರತಿಯೊಂದು ಮನೆಯ ಮುಂದೆ ತಮ್ಮ ವೇಷ ಭೂಷಣಗಳು ಮತ್ತು ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ರಾಮಾಯಣ ಮತ್ತು ಮಹಭಾರತದಲ್ಲಿ ಬರುವ ಕೆಲವು ಸನ್ನಿವೇಶಗಳಲ್ಲಿ ಹಗಲು ಪ್ರದರ್ಶನ ನೀಡುವರು.   
 ಈ ತಂಡ ಹಂಪಿ, ಮೈಸೂರು, ಆನೆಗುಂದಿ, ಗೋವಾ ಉತ್ಸವಗಳಲ್ಲಿ, ಜಾನಪದ ಜಾತ್ರೆ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದು ಪಕ್ಕದ ಆಂದ್ರ, ತಮಿಳುನಾಡು, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 
ಯಲ್ಲಾಪೂರ ತಾಲೂಕಿನ ಸೋನಾರ ಗ್ರಾಮದ ಆಂಮ್ಚೆ ಮದ್ಲೆ ಕಲಾ ತಂಡ  ಈ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮದಲ್ಲಿ ಡಮಾಮಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ತಮ್ಮ ಆದಿ ದೇವರಾದ ಸಿದ್ಧಿನಾಸೆರವರನ್ನು ನೆನಸಿ ಹಾಗೂ ಸಂತೋಷದ ಸಮಯದಲ್ಲಿ ಡಮಾಮಿ ಬಾರಿಸುತ್ತ ಕಾಲ ಕಳೆಯುತ್ತಿದ್ದರು. ಈ ಸಮುದಾಯದ ವಿಶೇಷ ಸಂದರ್ಭಗಳಲ್ಲಿ ಡಮಾಮಿ, ಕೊಳಸೊಪುಗಡಿ, ಸ್ವರಚಿತ ಹಾಡುಗಳು ಸಮಯಕ್ಕನುಗುಣವಾಗಿ ಘಟನೆಗಳನ್ನು ನೆನೆಸುತ್ತಾ ಹಾಡುಗಳನ್ನು ಹಾಡುವ ಸಂಪ್ರದಾಯ ಇವರದು. ಅದೇ ರೀತಿ ಗೂಳ್ಳಾಪುರದ ಸಿದ್ಧಿ ನ್ಯಾಸ್ ಡಮಾಮಿ- ಮಂಡಳಿ ಆದಿವಾಸಿ ಡಮಾಮಿ ನ್ಯಾಚ್ ಕಾರ್ಯಕ್ರಮ ನೀಡಲಿದ್ದಾರೆ. 
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿರುಪಾಪುರದ ಶ್ರೀಮತಿ ಗಂಗಮ್ಮ ನೇತೃತ್ವದ ಶೃತಿಲಯ ಕಲಾ ಸಂಘದ ಮಹಿಳಾ ತಂಡದವರು ಡೊಳ್ಳು ಕುಣಿತದಲ್ಲಿ ತರಬೇತಿ ಪಡೆದು ಕಳೆದ ೬ ವರ್ಷಗಳಿಂದ  ರಾಜ್ಯ ಹೊರ ರಾಜ್ಯಗಳಲ್ಲಿ ಮಹಿಳಾ ಡೊಳ್ಳು ಕುಣಿತದ ಉತ್ತಮ ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಡೆದಿದ್ದಾರೆ. ಇವರು ಹಂಪಿ ಉತ್ಸವ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ, ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಭಾಗವಹಿಸಿ ಮಹಿಳಾ ಡೊಳ್ಳು ಕುಣಿತದ ಕಾರ್ಯಕ್ರಮ ನೀಡಿದ ಹೆಮ್ಮೆ ಇವರದು. 
ಮೂಲತ: ಗುಜರಾತ್, ರಾಜಸ್ಥಾನ ಮೂಲದವರಾದ ಪಾರ್ದಿ ಬುಡಕಟ್ಟನ್ನು ರಾಜ್ಯದಲ್ಲಿ ನೀಲಶಿಕಾರಿ, ಹರಣಶಿಕಾರಿ, ಪಾಂಶೇಪಾರ್ಥಿ, ಚಿಗರಿ ಬೇಟೆಗಾರ ಹಾಗೂ ಹಕ್ಕಿ-ಪಿಕ್ಕಿ ಹೆಸರುಗಳಿಂದ ಈ  ಬುಡಕಟ್ಟನ್ನು  ಕರೆಯಲಾಗುತ್ತಿದೆ.  ಸಾಂಸ್ಕೃತಿಕವಾಗಿ ತುಂಬಾ ವೈವಿಧ್ಯತೆಯಿಂದ ಕೂಡಿರುವ 
ಇವರು ತಮ್ಮ ಹಬ್ಬ ಹರಿದಿನಗಳಲ್ಲಿ ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತಮ್ಮದೇ ಆದ ವಾದ್ಯಗಳಾದ ಹಲಿಗೆ, ಡೋಲತಾಷ ಹಾಗೂ ಕಂಚಿನ ತಟ್ಟೆಗಳನ್ನು ಉಪಯೋಗಿಸಿ ಹಾಡುಗಳನ್ನು ಹಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯ   ಎಸ್.ಜಾನಕಿ ನೇತೃತ್ವದ ಆದಿವಾಸಿ ಬುಡಕಟ್ಟು ಜಾನಪದ ನೃತ್ಯ ಕಲಾ ತಂಡದವರಿಂದ ನೃತ್ಯ ಹಾಗೂ   ಮೋಹನ್ ನೇತೃತ್ವದ ದುರ್ಗಾದೇವಿ ತಾಶಾರಾಮ ಡೋಲ ಜನಪದ ಕಲಾ ತಂಡ ತಾಷಾರಾಂಡೋಲ ಕುಣಿತ ಹಾಗೂ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ರಂಗಾಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಾರ್ತಾ ಇಲಾಖೆಯ ಗುಲಬರ್ಗಾ ವಿಭಾಗದ ಉಪನಿರ್ದೇಶಕರಾದ ಬಸವರಾಜ ಕಂಬಿಯವರು ಹಾಗೂ ವಾರ್ತಾ ಇಲಾಖೆಯ ಕೊಪ್ಪಳದ ಸಹಾಯಕ ನಿರ್ದೇಶಕ  ತುಕಾರಾಂರಾವ್ ಬಿ.ವಿ. ಅವರು ಕೋರಿದ್ದಾರೆ.  

Leave a Reply