ಕೋರ್ಸ್‌ಗಳನ್ನು ಪುನರಾರಂಭಿಸಲು ಸಂಸದ ಶಿವರಾಮಗೌಡ ಒತ್ತಾಯ

  ಶಿವರಾಮಗೌಡ  ಲೋಕಸಭಾ ಸದಸ್ಯರು, ಕೊಪ್ಪಳ ಇವರು ದಿನಾಂಕ ೦೩.೦೬.೨೦೧೩ ರಂದು ಆರ್.ವಿ. ದೇಶಪಾಂಡೆ ಯವರು ಮಾನ್ಯ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ ಹಾಗೂ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರಿಗೆ ಪತ್ರ ಬರೆದು, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿರುವ ಶ್ರೀ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುತ್ತಿದ್ದು, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಟ್ಟಿರುತ್ತದೆ. ಸದರಿ ಕಾಲೇಜಿನಲ್ಲಿ ೧೬೦೦ ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ೧೮೦ ವಿದ್ಯಾರ್ಥಿಗಳು ಅಭ್ಯಶಿಸುತ್ತಿದ್ದು, ಕೇವಲ ೨೦ ಜನ ಪೂರ್ಣಾವಧಿ ಹಾಗೂ ೯೪ ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವವಿದ್ಯಾಲಯದ ಸ್ಥಳೀಯ ವಿಚಾರಣಾ ಸಮಿತಿಯು ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿ, ಪ್ರತಿ ವಿಭಾಗಕ್ಕೆ ಕನಿಷ್ಠ ೦೪ ಜನ ಪೂರ್ಣಾವಧಿ ಉಪನ್ಯಾಸಕರ ಅಲಭ್ಯತೆಯಿಂದಾಗಿ ಕಾಲೇಜಿನಲ್ಲಿ ನಡೆಯುತ್ತಿರುವ ಭೌತಶಾಸ್ತ್ರ, ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳ ಸ್ನಾತಕೋತ್ತರ ಸಂಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುತ್ತಾರೆ.
ಕಾರಣ, ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಏಕೈಕ ಆಶಾಕಿರಣದಂತಿರುವ ಸದರಿ ಕಾಲೇಜಿಗೆ, ತಕ್ಷಣ ವಿಭಾಗವಾರು ಕನಿಷ್ಠ ೦೪ ಜನ ಪೂರ್ಣಾವಧಿ ಉಪನ್ಯಾಸಕರ ನೇಮಕ ಮಾಡಲು ಹಾಗೂ ಪೂರ್ಣಾವಧಿ ಉಪನ್ಯಾಸಕರು ಬರುವವರೆಗೆ ಹಾಲಿ ಉಪನ್ಯಾಸಕರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ತರಗತಿಗಳನ್ನು ನಡೆಸಲು ಸಾಧ್ಯವಿದ್ದು, ತಡೆಹಿಡಿದಿರುವ ಕೋರ್ಸ್‌ಗಳನ್ನು ಪುನರಾರಂಭಿಸಲು ಅನುಮತಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮಾನ್ಯ ಲೋಕಸಭಾ ಸದಸ್ಯರು ಕೋರಿರುತ್ತಾರೆ.
Please follow and like us:
error