ಡಿಸೆಂಬರ್‌ನಲ್ಲಿ ನೂತನ ಪಕ್ಷ: ಬಿಎಸ್‌ವೈ

ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ
 
ಆನೇಕಲ್, ಅ.10: ಕಳೆದ ನಲವತ್ತು ವರ್ಷ ಕಟ್ಟಿ ಬೆಳೆಸಿದ ಪಕ್ಷ ಮತ್ತು ನಾಯಕರಿಗೆ ತನ್ನ ಅಗತ್ಯವಿಲ್ಲ ದಿರುವ ಸಂದರ್ಭದಲ್ಲಿ ಗೌರವ ಘನತೆ ಇಲ್ಲದ ಪಕ್ಷದ ಅಧ್ಯಕ್ಷ ಅಥವಾ ಮುಖ್ಯಮಂತ್ರಿಯಾಗು ವುದು ತರವಲ್ಲ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಬಿಜೆಪಿಯಿಂದ ನಿರ್ಗಮಿಸುವುದು ಅಚಲ. ರೈತ ಪರವಾದ ನೂತನ ಪಕ್ಷ ಕಟ್ಟುವುದು ಶತ:ಸಿದ್ಧ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಘೋಷಿಸಿದ್ದಾರೆ. ಜಿಗಣಿಯ ವಡೇರಮಂಚನಹಳ್ಳಿ ಬಳಿಯಿಂದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಮಹಾವಿದ್ಯಾಲಯ ಮಾರ್ಗದ ಜೋಡಿ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿನ ಉಸಿರು ಕಟ್ಟುವ ವಾತಾವರಣ ತನ್ನನ್ನು ಹೈರಾಣಾಗಿಸಿದೆ.
ಜನತೆಯ ಆಶೋತ್ತರಗಳು ಮುಖ್ಯ, ಪಕ್ಷವಲ್ಲ ಹಾಗಾಗಿ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಕಾವೇರಿ ನೀರು ಹಂಚಿಕೆಯಲ್ಲಿ ಪ್ರಧಾನಮಂತ್ರಿ ಅಕ್ಷಮ್ಯ ಅಪರಾಧವೆಸಗಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಅಧಿಕಾರ ಬೇಕಾದರೂ ಬಿಡುತ್ತೇವೆ, ಕಾವೇರಿ ನೀರನ್ನು ಬಿಡುವುದಿಲ್ಲ. ಈಗಾಗಲೇ ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವವಿದೆ. ಬೆಳೆದು ನಿಂತಿರುವ 17ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡು ಸರಕಾರ ರಾಜ್ಯದ ಮೇಲೆ ದಾವೆ ಹೂಡುವ ಮೂಲಕ ಕನ್ನಡ ಮತ್ತು ತಮಿಳು ಭಾಷಿಗರ ನಡುವೆ ಕಲಹ ಉಂಟು ಮಾಡುವುದು ಸರಿಯಲ್ಲ ಎಂದರು.
ವಿಶ್ವದ ನಾನಾ ದೇಶಗಳ ಪ್ರಮುಖರು ಯೋಗ ಕಲಿಕೆ ಮತ್ತು ವಿಶ್ರಾಂತಿಗಾಗಿ ಸ್ವಾಮಿ ವಿವೇಕಾನಂದ ಪ್ರಶಾಂತಿ ಕುಟೀರಕ್ಕೆ ಆಗಮಿಸು ತ್ತಾರೆ. ಇಲ್ಲಿನ ಹದಗೆಟ್ಟ ರಸ್ತೆಯನ್ನು ಕಂಡು ನಮ್ಮ ರಾಜ್ಯದ ಪ್ರಗತಿಯ ಬಗ್ಗೆ ತಪ್ಪು ಪರಿಕಲ್ಪನೆ ಮೂಡಬಾರದು ಎಂದು ಮೂರುವರೆ ಕೋಟಿ ರೂ. ವೆಚ್ಚದಲ್ಲಿ ಈ ಜೋಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಿರುವುದಾಗಿ ತಿಳಿಸಿದರು. ನಂತರ ಬೆಂಗಳೂರು ದಕ್ಷಿಣ ತಾಲೂಕು ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು. ಅವರ ಕೃಪಾಕಟಾಕ್ಷದಿಂದ ಇಂದು ನಾವು ಶಾಸಕರಾಗಿದ್ದೇವೆ. ಇವರು ಸಿಎಂ ಆಗಿದ್ದ ವೇಳೆ ಯಾವುದೇ ಕೇತ್ರಕ್ಕೆ ತಾರತಮ್ಯ ಮಾಡಲಿಲ್ಲ. ನನ್ನ ಕ್ಷೇತ್ರಕ್ಕೆ 350 ಕೋ. ರೂ. ಅನುದಾನವನ್ನು ಬಿಡುಗಡೆ ಮಾಡಿ ಈ ಭಾಗದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಪ್ರಶಾಂತಿ ಕುಟೀರದ ಸುಬ್ರಮಣ್ಯಂ, ನಾಗೇಂದ್ರ, ಸುಧೀರ್ ದೇಶಪಾಂಡೆ, ಜಿ.ಪಂ. ಸದಸ್ಯೆ ಗಿರಿಜಾ ಪ್ರಶಾಂತ್, ತಾ.ಪಂ.ಸದಸ್ಯೆ ಶೋಭಾ ಕೃಷ್ಣಪ್ಪ, ತಾ.ಪಂ.ಸದಸ್ಯ ರಮೇಶ್, ಕಲ್ಲುಬಾಳು ಗ್ರಾ.ಪಂ.ಅಧ್ಯಕ್ಷ ಪಿಲ್ಲಪ್ಪ, ನಾಮ ನಿರ್ದೇಶಿತ ಕಾರ್ಪೊರೇಟರ್ ರಮೇಶ್, ಇಓ ಡಾ.ವೀರಭದ್ರಪ್ಪ, ರಾಮಚಂದ್ರಪ್ಪ, ಗ್ರಾ.ಪಂ. ಸದಸ್ಯರಾದ ಜಿಗಣಿ ಆನಂದ್, ಮಿಲ್ಟ್ರಿ ನಾರಾಯಣಪ್ಪ, ಗೋಪಾಲಕೃಷ್ಣ, ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.

Leave a Reply