fbpx

ವಂಚಕರ ರಕ್ಷಾಕವಚ ಮೋದಿ

 -ಸನತ್ ಕುಮಾರ ಬೆಳಗಲಿ
ಈ ದೇಶ ಸ್ವಾತಂತ್ರದ ಅರವತ್ತು ವರ್ಷಗಳಲ್ಲಿ ಇಂಥ ಚುನಾವಣೆಯನ್ನು ಎಂದೂ ಎದುರಿಸಿರಲಿಲ್ಲ. ಸಂಸದೀಯ ಜನತಂತ್ರದ ಸತ್ಸಂಪ್ರದಾಯವನ್ನೇ ಕಡೆಗಣಿಸಿ ನರಹಂತಕ ಎಂಬ ಕುಖ್ಯಾತಿ ಪಡೆದ ವ್ಯಕ್ತಿಯೊಬ್ಬನನ್ನು ಪ್ರಧಾನಿಯನ್ನಾಗಿ ಬಿಂಬಿಸುವ ಹುನ್ನಾರ ಎಂದೂ ನಡೆದಿರಲಿಲ್ಲ. ಜನನಾಯಕರಾಗಿದ್ದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಕಾಲಾವಧಿಯಲ್ಲೂ ಜನತಂತ್ರಕ್ಕೆ ಇಂಥ ಅಪಚಾರ ನಡೆದಿರಲಿಲ್ಲ. ರಾಷ್ಟ್ರೀಯ ಪಕ್ಷವೊಂದು ವ್ಯಕ್ತಿಕೇಂದ್ರಿತ ಚುನಾವಣಾ ಪ್ರಚಾರವನ್ನು ಇದೇ ಮೊದಲ ಬಾರಿ ಹಮ್ಮಿಕೊಂಡಿದೆ. ಇದು ಅಮೆರಿಕನ್ ಮಾದರಿಯ ಅಧ್ಯಕ್ಷ ಮಾದರಿ ಆಡಳಿತ ಪದ್ಧತಿಯನ್ನು ದೇಶದ ಮೇಲೆ ಹೇರುವ ಕಾರ್ಪೊರೇಟ್ ಕುತಂತ್ರವಲ್ಲದೆ ಬೇರೇನೂ ಅಲ್ಲ.
ಬಂಡವಾಳಶಾಹಿ ವ್ಯವಸ್ಥೆ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗಲೆಲ್ಲ ಇಂಥ ಮಸಲತ್ತುಗ

ಳು ನಡೆಯುತ್ತವೆ. 1930ರಲ್ಲಿ ಜಾಗತಿಕ ಬಂಡವಾಳಶಾಹಿಯ ಬಿಕ್ಕಟ್ಟು ಜರ್ಮನಿಯ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನನ್ನು ಸೃಷ್ಟಿಸಿತು. ಆಗ ಪ್ರಭುತ್ವವನ್ನು ಬಂಡವಾಳಶಾಹಿ ಪಾದಸೇವೆಗೆ ಮೀಸಲಾಗಿಟ್ಟ ಹಿಟ್ಲರ್ ಹುಸಿ ರಾಷ್ಟ್ರೀಯವಾದದ ಹೀರೋ ಆಗಿ ಮಿಂಚಿದ ಇಟಲಿಯ ಫ್ಯಾಶಿಸ್ಟ್ ಪಾರ್ಟಿಯ ಮುಸಲೋನಿ ಅದೇ ಕಾಲಘಟ್ಟದಲ್ಲಿ ವೃಣದಂತೆ ಹುಟ್ಟಿಕೊಂಡ ಚಿಲಿಯಲ್ಲಿ ಫಿನೋಶೆ, ಇಂಡೊನೇಶ್ಯದಲ್ಲಿ ಸುಹಾತೊ ಅದೇ ಪಾದಗಾಣಿಕೆಯನ್ನು ಬಂಡವಾಳಶಾಹಿಗೆ ಸ
ಲ್ಲಿಸಿದರು.

ನವ ಉದಾರೀಕರಣದ ಈ ದಿನಗಳಲ್ಲಿ ಆರೆಸ್ಸೆಸ್ ಮತ್ತು ಕಾರ್ಪೊರೇಟ್ ಬಂಡವಾಳಶಾಹಿಯ ಅನೈತಿಕ ಸಂಬಂಧದ ಪರಿಣಾಮವಾಗಿ ನರೇಂದ್ರ ಮೋದಿ ಹುಟ್ಟಿಕೊಂಡಿ ದ್ದಾರೆ. ‘‘ಭಾರತವನ್ನು ಗೆಲ್ಲಿಸಲು ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು’’ ಎಂಬ ಅತ್ಯಂತ ವ್ಯವಸ್ಥಿತ ಪ್ರಚಾರವೊಂದು ದೇಶದಲ್ಲಿ ನಡೆದಿದೆ. ನರೇಂದ್ರ ಮೋದಿಯ ಜೀವನ ಚರಿತ್ರೆಯ ನೂರಾರು ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ.
ದೇಶದ ಯಾವುದೇ ಹಳ್ಳಿಗೆ ಹೋದರೂ ನಮೊ ಬ್ರಿಗೇಡ್ ಬೋರ್ಡುಗಳು ಕಾಣಿಸುತ್ತಿವೆ. ಆರು ತಿಂಗಳ ಹಿಂದೆ ಮಂಗಳೂರಿನಿಂದ ತೀರ್ಥಹಳ್ಳಿಗೆ ಹೋಗುವಾಗ ದಾರಿಯುದ್ದಕ್ಕೂ ಇಂಥ ಫಲಕಗಳನ್ನು ನೋಡಿ ಅಚ್ಚರಿ ಆಯಿತು. ಇದು ಕಾರ್ಪೊರೇಟ್ ಕಂಪೆನಿಗಳ ಪಾಪದ ಹಣದಿಂದ ಆರೆಸ್ಸೆಸ್ ರೂಪಿಸಿದ ಪ್ರಚಾರ ತಂತ್ರ. ಈಗಂತೂ ಲಂಚಕೋರರು, ಕಡುಭ್ರಷ್ಟರು, ನೀತಿಗೆಟ್ಟವರು ಭಾರತದ ಉದ್ಧಾರಕ್ಕಾಗಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ತಾವು ಬಿಜೆಪಿ ಸೇರುತ್ತಿರುವುದಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡು ಓಡಾಡು ತ್ತಿದ್ದಾರೆ.
ಕರ್ನಾಟಕದಲ್ಲಂತೂ ಬಿಜೆಪಿಯಿಂದ ಸ್ಪರ್ಧಿಸಿದ ಯಾರಿಗೂ ಜನರ ಬಳಿ ಹೋಗಲು ಮುಖವಿಲ್ಲ. ಐದು ವರ್ಷಗಳ ಕರಾಳ ಆಡಳಿತದ ಕೆಸರು ಅವರನ್ನು ಮೆತ್ತಿಕೊಂಡಿದೆ. ಅಂತಲೇ ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳದ ಇವರು ಸದಾ ಮೋದಿ ಜಪ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಗೆಗೂ ಯಾರೂ ಮಾತಾಡುತ್ತಿಲ್ಲ. ‘ಮೋದಿ ಪ್ರಧಾನಿಯಾದರೆ ದೇಶದ ಅಭಿವೃದ್ಧಿ’ ಎಂಬ ಏಕೈಕ ಜಪಮಂತ್ರದೊಂದಿಗೆ ಇವರು ಕಣಕ್ಕಿಳಿದಿದ್ದಾರೆ. ಕರ್ನಾಟಕದಲ್ಲಿ ಕೇವಲ ಹದಿನೆಂಟು ತಿಂಗಳ ಹಿಂದೆ ಬಿಜೆಪಿ ಸರಕಾರವಿತ್ತು.
ಆ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಭ್ರಷ್ಟಾಚಾರ ಹಗರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದರು. ನಂತರ ಕುರ್ಚಿ ಕಳೆದುಕೊಂಡ ಈ ವ್ಯಕ್ತಿ ತನ್ನದೇ ಪ್ರಾದೇಶಿಕ ಪಕ್ಷ ಕಟ್ಟಿದರು. ಅದು ದುಸ್ಸಾಹಸ ಎಂದು ಗೊತ್ತಾದಾಗ ತನ್ನ ಅನುಯಾಯಿಗಳನ್ನು ನಡುನೀರಿನಲ್ಲಿ ಕೈಬಿಟ್ಟು ಶೋಬಾ ಕರಂದ್ಲಾಜೆ ಜೊತೆಗೆ ಬಿಜೆಪಿ ಸೇರಿದರು. ಈಗ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ರಾಷ್ಟ್ರದ ಅಭಿವೃದ್ಧಿಗಾಗಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಸ್ಪರ್ಧಿಸುತ್ತಿರುವುದಾಗಿ ಹೇಳು ತ್ತಿದ್ದಾರೆ.
ಇನ್ನು ಬಳ್ಳಾರಿಯ ಗಣಿ ಲೂಟಿಕೋರರ ಗ್ಯಾಂಗಿನ ಆಪ್ತ ಶ್ರೀರಾಮುಲುಗೂ ಕೂಡ ದೇಶದ ಕಾಳಜಿ. ಅಂತಲೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಅವರೂ ಸ್ಪರ್ಧಿಸುತ್ತಿದ್ದಾರೆ. ಯಡಿಯೂರಪ್ಪ ಅನುಯಾಯಿಗಳನ್ನೇ ಬಿಟ್ಟು ಬಿಜೆಪಿ ಸೇರಿದರೆ, ಶ್ರೀರಾಮುಲು ತಾನು ಕಟ್ಟಿದ ಪಕ್ಷವನ್ನೇ ತಬ್ಬಲಿ ಮಾಡಿ ಸಂಘ ಪರಿವಾರಕ್ಕೆ ಶರಣಾಗತ ರಾಗಿದ್ದಾರೆ. ಈತನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ದತ್ತು ತಾಯಿ ಸುಶ್ಮಾ ಸ್ವರಾಜ್ ವಿರೋಧಿಸಿದರೂ ಪಕ್ಷದಲ್ಲಿ ಅವರ ಮಾತು ನಡೆಯಲಿಲ್ಲ. ಆರೆಸ್ಸೆಸ್ ಕಣ್ಸನ್ನೆಗೆ ನಲುಗಿ ಅವರು ತೆಪ್ಪಗಾದರು.
ಮೋದಿ ಪ್ರಧಾನಿಯಾಗುವುದು ಅಂಬಾನಿಗೆ ಮಾತ್ರವಲ್ಲ, ದೇಶದ ತುಂಬ ನಾಯಿಕೊಡೆ ಗಳಂತೆ ಹುಟ್ಟಿಕೊಂಡಿರುವ ಇಂಥ ಪರಮ ಭ್ರಷ್ಟರಿಗೂ ಮೋದಿ ಬೇಕು. ಕರ್ನಾಟಕದಲ್ಲಿ ನೋಟು ಏಣಿಸುವ ಯಂತ್ರವನ್ನು ಮನೆಯಲ್ಲಿಟ್ಟುಕೊಂಡಿದ್ದ ಮಾಜಿ ಮಂತ್ರಿಗೂ ಮೋದಿ ಬೇಕು. ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ ಮೂವರು ಮಾಜಿಗಳಿಗೂ ಮೋದಿ ಪ್ರಧಾನಿಯಾಗಬೇಕು. ರಿಯಲ್ ಎಸ್ಟೇಟ್ ದಂಧೆಯ ಖದೀಮರು, ಜೈಲಿಗೆ ಹೋಗಿ ಬಂದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಹರತಾಳ ಹಾಲಪ್ಪ, ನರ್ಸ್ ರೇಣುಕಾಚಾರ್ಯ ಇವರಿಗೆಲ್ಲ ಮೋದಿ ಪ್ರಧಾನಿಯಾಗಬೇಕಾಗಿದೆ.
ಇಂಥವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಕೇಂದ್ರದ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಅಂಬಾನಿಗಳು, ಅದಾನಿಗಳು ಕೋಟ್ಯಂತರ ರೂಪಾಯಿಗಳನ್ನು ನೀರಿನಂತೆ ಚೆಲ್ಲುತ್ತಿದ್ದಾರೆ. ಈ ದಗಾಕೋರರಿಗಷ್ಟೇ ಅಲ್ಲ ರವಿಶಂಕರ್, ಬಾಬಾ ರಾಮದೇವ್, ಅಸಾರಾಮ್ ಬಾಪು ಅಂಥ ಧಾರ್ಮಿಕ ದಂಧೆಕೋರರಿಗೂ ಮೋದಿ ಪ್ರಧಾನಿಯಾಗಬೇಕಾಗಿದೆ.
ಮೂಢನಂಬಿಕೆ, ಜ್ಯೋತಿಷ್ಯ, ತಾಯತ, ವಾಸ್ತುಶಾಸ್ತ್ರ ಹೆಸರಿನಲ್ಲಿ ಅಮಾಯಕ ಜನರನ್ನು ವಂಚಿಸುತ್ತಿರುವ ಪಾತಕಿಗಳಿಗೆ ಮೋದಿ ಎಂಬ ರಕ್ಷಾಕವಚ ಬೇಕಾಗಿದೆ. ಅಸಾರಾಮ್ ಬಾಪುನಂತಹ ಅತ್ಯಾಚಾರ ಆರೋಪಿಯನ್ನು ರಕ್ಷಿಸಿದ ಮೋದಿ ಪ್ರಧಾನಿಯಾದರೆ ತಮ್ಮ ದಂಧೆಯೂ ಹುಲುಸಾಗಿ ನಡೆಯಬಹುದು ಎಂಬುದು ಇವರ ಸುಪ್ತ ಬಯಕೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಗಪುರದಲ್ಲಿ ಹುತ್ತ ಕಟ್ಟಿಕೊಂಡಿರುವ ಜರ್ಮನಿಯ ನಾಝಿ ಪಾರ್ಟಿಯ ಭಾರತೀಯ ಶಾಖೆಯಾದ ಆರೆಸ್ಸೆಸ್‌ಗೂ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡುವ ಆತುರ.
ಗುಜರಾತ್‌ನಲ್ಲಿ 2002ರಲ್ಲಿ ಸಾವಿರಾರು ಮುಸಲ್ಮಾನರ ಹತ್ಯಾಕಾಂಡದ ನಂತರವೂ ವಿಷಾದ ವ್ಯಕ್ತಪಡಿಸದ, ಕ್ಷಮೆಯಾಚಿಸದ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿದರೆ ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನ ವನ್ನು ಸಮಾಧಿ ಮಾಡಿ ತನ್ನ ಕಲ್ಪನೆಯ ಮನುವಾದದ ಆಧಾರಿತ ಹಿಂದೂರಾಷ್ಟ್ರ ಸ್ಥಾಪನೆಗೆ ದಾರಿ ಸುಗಮವಾಗುವುದು ಎಂದು ಅದರ ಲೆಕ್ಕಾಚಾರ.
ಅಟಲ್ ಬಿಹಾರಿ ವಾಜಪೇಯಿ ಕೂಡ ಆರೆಸ್ಸೆಸ್ ಸ್ವಯಂ ಸೇವಕನಾಗಿದ್ದರೂ ಮಿತ್ರ ಪಕ್ಷಗಳ ಬೆಂಬಲದಿಂದ ಪ್ರಧಾನಿಯಾದ ಅವರಿಗೆ ಆರೆಸ್ಸೆಸ್ ಅಜೆಂಡಾವನ್ನು ಸಂಪೂರ್ಣ ವಾಗಿ ಜಾರಿಗೆ ತರಲು ಸಾಧ್ಯವಾಗಿ ರಲಿಲ್ಲ. ಆ ಕಾರಣಕ್ಕಾಗಿ ನಾಗಪುರ ಗುರುಗಳು ಅವರ ಮೇಲೆ ಮುನಿಸಿ ಕೊಂಡಿದ್ದರು. ಆದರೆ ಮೋದಿ ಹಾಗಲ್ಲ ಆತನ ವ್ಯಕ್ತಿತ್ವವನ್ನೇ ಹಿಟ್ಲರ್ ಮಾದರಿಯ ಸರ್ವಾಧಿಕಾರಿ ವ್ಯಕ್ತಿತ.
ಅಂತಲೆ ದಲಿತ, ಪ್ರಗತಿಪರ ದನಿಗಳನ್ನು ಹತ್ತಿಕ್ಕಿ ಹಿಂದೂರಾಷ್ಟ್ರ ನಿರ್ಮಿಸಲು ಮೋದಿ ಪ್ರಧಾನಿಯಾಗುವುದು ಆರೆಸ್ಸೆಸ್‌ಗೆ ಬೇಕಾಗಿದೆ. ಮೋದಿ ಪ್ರಧಾನಿಯಾದರೆ ಈ ದೇಶದ ಅಮೂಲ್ಯ ಅರಣ್ಯ ಸಂಪತ್ತನ್ನು, ಭೂಮಿಯನ್ನು, ನೀರನ್ನು ತಮಗೆ ಧಾರೆ ಎರೆದುಕೊಡುತ್ತಾರೆ ಎಂಬುದು ಕಾರ್ಪೊರೇಟ್ ಬಂಡವಾಳಶಾಹಿಗಳ ನಿರೀಕ್ಷೆಯಾಗಿದೆ. ಗುಜರಾತ್‌ನ ಸೂರತ್‌ನಲ್ಲಿ ಎಲ್ ಅಂಡ್ ಟಿ ಕಂಪೆನಿಗೆ 8 ಲಕ್ಷ ಚದರ ಮೀಟರ್‌ನಷ್ಟು ಬೆಲೆ ಬಾಳುವ ಭೂಮಿಯನ್ನು ಕೇವಲ ಒಂದು ರೂಪಾಯಿಗೆ ಒಂದು ಚದರ ಮೀಟರಿನಂತೆ ನೀಡಲಾಗಿದೆ.
ಇದರ ಮಾರುಕಟ್ಟೆ ದರ ಚದರು ಮೀಟರಿಗೆ 950 ರೂ. ಆಗಿದೆ. ಟಾಟಾಗಳ ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ 1100 ಎಕರೆ ಭೂಮಿಯನ್ನು ಅತ್ಯಂತ ಅಗ್ಗ ದರದಲ್ಲಿ ನೀಡಲಾಗಿದೆ. ಇದೆಲ್ಲದರ ಪರಿಣಾಮವಾಗಿ ಗುಜರಾತ್ ಸರಕಾರ 33 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಇದು ಮೋದಿ ಸಾಧನೆ. ಕಾರ್ಪೊರೇಟ್ ಬಂಡವಾಳಶಾಹಿಗಳು ಸಂಘ ಪರಿವಾರದ ಮನುವಾದಿಗಳು ಮತ್ತು ನೆಲಗಳ್ಳ ಭ್ರಷ್ಟ ರಾಜಕಾರಣಿಗಳು ತಮ್ಮ ಹಿತಾಸಕ್ತಿಯನ್ನು ರಕ್ಷಿಸಲು ನರೇಂದ್ರ ಮೋದಿ ಪ್ರಧಾನಿ ಯಾಗಬೇಕೆಂದು ಹಾತೊರೆಯುತ್ತಿದ್ದಾರೆ. ಅದನ್ನು ವಿಫಲಗೊಳಿಸಿದರೆ ಭಾರತವನ್ನು ಉಳಿಸಲು ಸಾಧ್ಯವಾಗುತ್ತದೆ.  
                                                                                                  – ವಾರ್ತಾಭಾರತಿ ಅಂಕಣ
                                                                                                     Photos: Internet
Please follow and like us:
error

Leave a Reply

error: Content is protected !!