ಭಾವೈಕ್ಯತೆಯೇ ನಮ್ಮ ದೇಶದ ತಾಕತ್ತು- ಗವಿಶ್ರೀ

ಕೊಪ್ಪಳ : ಬದುಕು ನಶ್ವರ ಕ್ಷಣಿಕ ಎನ್ನುವುದನ್ನು ಅರಿತು ಬಾಳಬೇಕು. ಸಾವಿಗಂಜಿ ಬದುಕನ್ನು ಬಿಡಬಾರದು. ನಾವು ಸತ್ತನಂತರ ಜಗವಳಲಿ ಎನ್ನುವಂತೆ ಬಾಳಬೇಕು. ನಾವು ನಡೆದಾಡುವ ರಸ್ತೆ,ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಒಂದೇ ಇರುವಾಗ ನಮ್ಮ ನಮ್ಮ ನಡುವೆ ಭಿನ್ನತೆ ಎಲ್ಲಿಂದ ಬಂತು. ಹಲವಾರು ಜಾತಿ,ಧರ್ಮ, ಭಾಷೆಗಳಿರುವ ನಮ್ಮ ನಾಡಿನ ತಾಕತ್ತೆ ಭಾವೈಕ್ಯತೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು. ಅವರು ಮರ್ದಾನೆ ಗೈಬ್ ( ಮರ್ದಾನ ಅಲಿ ದರ್ಗಾ)ದ  ಉರುಸೇ ಷರೀಪ್‌ನಲ್ಲಿ ಆಶೀರ್ವಚನ ನೀಡಿದರು.
ಎಲ್ಲರೂ ಕೂಡಿ ಬಾಳಬೇಕು. ಇಬ್ಬರೂ ತಮ್ಮ ಹುಡುಗರಿಗೆ ಸಂಭಾಳಿಸಿ ಬುದ್ದಿ ಹೇಳಬೇಕು. ಕೆಟ್ಟವರು ಎಲ್ಲೋ ಒಬ್ಬಿಬ್ಬರು ಇರಬಹುದು. ಹಾಗೆಂದ ಮಾತ್ರಕ್ಕೆ ಇಡೀ ಸಮಾಜವನ್ನೇ ದೂಷಿಸಲಿಕ್ಕಾಗದು.  ಪೊಲೀಸರು ನಮ್ಮ ಊರಿಗೆ ಬಂದೋಬಸ್ತಿಗಾಗಿ ಅಲ್ಲ ಸಂಭ್ರಮ ನೋಡಲು ಬರುವಂತಾಗಲಿ. ಕ್ಷುಲ್ಲಕ ಘಟನೆ ನಡೆಯಬಾರದಿತ್ತು. ಅದು ಜರುಗಲು ಕಾರಣ ಶಿಕ್ಷಣದ ಕೊರತೆ. ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡಿಸಿ ಅಬ್ದುಲ್ ಕಲಾಂನಂತವರು ನಮ್ಮವರಿಗೆ ಆದರ್ಶವಾಗಲಿ. ಎಲ್ಲರಲ್ಲಿ ತಾಳ್ಮೆ ಬೇಕು. ಶಾಂತಿಯ ತೋಟವನ್ನು ಕೆಡಿಸಬೇಡಿ ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ  ಸಂಸದ ಕರಡಿ ಸಂಗಣ್ಣ  ನಮ್ಮ ಊರು ಭಾವೈಕ್ಯತೆ ಸಂಕೇತ. ಗವಿಮಠದ ಪರಂಪರೆ ಮತ್ತು ಮರ್ದಾನ ಅಲಿ ದರ್ಗಾ ನಮ್ಮಲ್ಲಿ ಪರಸ್ಪರ ಸಹೋದರತೆಯ ಭಾವನೆ ಮೂಡಿಸುತ್ತವೆ.ನಾವೆಲ್ಲರೂ ಕೂಡಿ ಬಾಳಬೇಕು. ನಗರದ ಸರ್ವಾಂಗೀಣ ಅಭಿವೃದ್ದಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು. ಮಾಜಿ ಶಾಸಕರ ಬಸವರಾಜ ಹಿಟ್ನಾಳ ಮಾತನಾಡಿ- ಭಿನ್ನ ಭಿನ್ನ ಸಂಸ್ಕೃತಿ ಜಾತಿ, ಧರ್ಮಗಳ ಜನರೆಲ್ಲ ಒಟ್ಟಾಗಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳ ನಾವೆಲ್ಲರೂ ಒಂದು ಎನ್ನುವ ಭಾವನೆಯಿಂದ ಬಾಳಬೇಕು. ಜಾತ್ರೆ,ಉರುಸ್, ಜಯಂತಿಗಳು ಮಹಾನ್ ಸಂತರ ಸ್ಮರಣೆಗೆ ಉತ್ತಮ ಅವಕಾಶ. ನಿಮ್ಮ ನಿಮ್ಮ ಧರ್ಮವನ್ನು ಗೌರವಿಸುವುದರ ಜೊತೆಗೆ ಅನ್ಯರ ಧರ್ಮವನ್ನು ಗೌರವಿಸಬೇಕು. ಕೊಪ್ಪಳದ ಭಾವೈಕ್ಯತೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ನಗರದ ಅಭಿವೃದ್ದಿಯಲ್ಲಿ ಎಲ್ಲರೂ ಪಕ್ಷಬೇದ ಮರೆತು, ರಾಜಕೀಯ ಮರೆತು ಶ್ರಮಿಸೋಣ ಎಂದರು. 
ಧರ್ಮಗುರು ಮೌಲಾನಾ ಮುಪ್ತಿ ನಜೀರ್ ಅಹ್ಮದ ಖಾದ್ರಿ ಮಾತನಾಡಿ ಸಂತರು ಯಾವತ್ತೂ ಶಾಂತಿ,ಪ್ರೇಮದ,ಸಹಭಾಳ್ವೆಯ ಸಂದೇಶವನ್ನು ಜಗತ್ತಿಗೆ ನೀಡುತ್ತಾರೆ. ಯಾರೂ ದ್ವೇಷವನ್ನು ಬಿತ್ತುವ ಕೆಲಸ ಮಾಡುವುದಿಲ್ಲ. ಜಾತ್ರೆ,ದರ್ಗಾಗಳಿಗೆ ಜನತೆ ಜಾತಿ,ಧರ್ಮ ನೋಡಿ ಹೋಗುವುದಿಲ್ಲ. ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಇಬ್ಭಾಗ ಮಾಡಲು ಯತ್ನಿಸುವವರು ಎಂದಿಗೂ ಯಶಸ್ವಿಯಾಗುವುದಿಲ್ಲ. ಎಲ್ಲರೂ ಶಾಂತಿ, ಸಹನೆಯಿಂದ ಬಾಳಬೇಕಿದೆ ಎಂದರು. 
ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದ ಐಜಿಪಿ ಸುನೀಲ್ ಅಗರವಾಲ್ ಮಾತನಾಡಿ ವಿದ್ವಂಸಕ ಶಕ್ತಿಗಳಿಗೆ ನಾವು ಅವಕಾಶ ನೀಡಬಾರದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಜನರ ಸಹಯೋಗವು ಮುಖ್ಯ. ಜನಸಾಮಾನ್ಯರು ದುಷ್ಟ ಶಕ್ತಿಗಳ ಕೆಟ್ಟಕೆಲಸಕ್ಕೆ ಅವಕಾಶ ನೀಡಬಾರದು. ವಿವಿಧತೆಯಲ್ಲಿ ಏಕತೆ ಈ ವೇದಿಕೆಲ್ಲಿಯೇ ಕಾಣುತ್ತಿದೆ. ಎಲ್ಲರೂ ಶಾಂತಿ, ಭಾವೈಕ್ಯತೆಯಿಂದ ಬಾಳಬೇಕು ಎಂದರು.
ವೇದಿಕೆಯ ಮೇಲೆ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್, ನಗರಸಭೆಯ ಕಮೀಷನರ್ ರಮೇಶ ಪಟ್ಟೇದಾರ, ನಗರಸಭಾ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ,ಬಾಳಪ್ಪ ಬಾರಕೇರ,ರಾಮಣ್ಣ ಹದ್ದಿನ್,ಮೀನಾಕ್ಷಮ್ಮ , ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರ, ಮಾಜಿ ನಗರಸಭಾ ಸದಸ್ಯ ಕಾಟನ್ ಪಾಷಾ, ಮಾನ್ವಿ ಪಾಷಾ,ಚಿಕನ್ ಪೀರಾ, ರಾಜು ಬಾಕಳೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ಎ.ಬಿ.ರದ್ದಿವಾಡಗಿ ಹಾಗೂ ನಿರೂಪಣೆಯನ್ನು ಲಾಯಕ್ ಅಲಿಮಾಡಿದರು. ಈ ಸಂದರ್ಭದಲ್ಲಿ ಗವಿಶ್ರೀಗಳನ್ನು ಸೇರಿದಂತೆ ಇತರ ಗಣ್ಯರನ್ನು ಸನ್ಮಾನಿಸಲಾಯಿತು. 
Please follow and like us:
error