ನಿಷ್ಪಕ್ಷಪಾತ ಚುನಾವಣೆ ನಡೆಸಬೇಕು- ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ

ಕೊಪ್ಪಳ ಸೆ.  : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್. ಸುರಂಜನ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಉಪಚುನಾವಣೆ ನಡೆಸುವ ಸಂಬಂಧದ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯನ್ನು ನಿಸ್ಪಕ್ಷಪಾತ ಹಾಗೂ ಮುಕ್ತವಾಗಿ ಶಾಂತಿಯಿಂದ ಜರುಗಿಸಲು ಅಗತ್ಯ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಸದ್ಯ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ನೇಮಕ ಮಾಡಲಾಗಿರುವ ವಿಡಿಯೋ ಸರ್ವೆಲನ್ಸ್ ತಂಡದ ಸಂಖ್ಯೆಯನ್ನು ೫ ರಿಂದ ೮ ಕ್ಕೆ ಹೆಚ್ಚಿಸಬೇಕು.  ಯಾವುದೇ ಕಾರಣಕ್ಕೂ ಮದ್ಯ ಹಾಗೂ ಹಣ ಹಂಚಿಕೆ ಪ್ರಕರಣಗಳು ನಡೆಯದಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಜಿಲ್ಲೆಯ ಗಡಿ ಭಾಗಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಹಣ, ಮದ್ಯ ಹಾಗೂ ಇತರೆ ಸಾಮಗ್ರಿಗಳು ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು.  ಗ್ರಾಮೀಣ ಭಾಗಗಳಲ್ಲಿ ಮದ್ಯ ಹಾಗೂ ಹಣ ಹಂಚಿಕೆ ಪ್ರಕರಣಗಳು ಹೆಚ್ಚಾಗಿ ನಡೆಯುವ ಸಂಭವವಿದ್ದು, ಸಂಚಾರಿ ನಿಗಾ ತಂಡಗಳು ಎಚ್ಚರಿಕೆಯಿಂದ ಪರಿಶೀಲನೆ ಕೈಗೊಳ್ಳಬೇಕು.  ರಾಜಕೀಯ ಪಕ್ಷಗಳು ಹಣ ಹಾಗೂ ಮದ್ಯ ಹಂಚಿಕೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದು, ಇದನ್ನು ಪರಿಶೀಲಿಸಿ ಅಕ್ರಮವನ್ನು ತಡೆಗಟ್ಟುವಂತಾಗಬೇಕು.  ಅಬಕಾರಿ ಇಲಾಖೆಯವರು ಮದ್ಯ ಸಾಗಾಣಿಕೆಯನ್ನು ಪತ್ತೆ ಹಚ್ಚಲು ಸದ್ಯ ಕೈಗೊಳ್ಳುತ್ತಿರುವ ಕ್ರಮ ಸಾಲದು, ಇನ್ನೂ ಹೆಚ್ಚಿನ ನಿಗಾ ವಹಿಸಿ, ಅಕ್ರಮ ಮದ್ಯ ಹಂಚಿಕೆಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.  ಕೆಲವು ಸರ್ಕಾರಿ ಅಧಿಕಾರಿಗಳು, ನೌಕರರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವುದರ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ರೀತಿಯ ಚಟುವಟಿಕೆಯಲ್ಲಿ ನಿರತರಾದ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕೈಗೊಂಡ ಕಟ್ಟು ನಿಟ್ಟಿನ ಕ್ರಮಗಳ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು, ಮಾದರಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್. ಸುರಂಜನ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಚುನಾವಣಾ ಆಯೋಗದ ವಿಶೇಷಾಧಿಕಾರಿ ಮನೋಜ್ ಅವರು ಮಾತನಾಡಿ, ಚುನಾವಣಾ ಸಿಬ್ಬಂದಿಗೆ ಈಗಾಗಲೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದ್ದು, ಮೂರನೆ ಹಂತದ ತರಬೇತಿಯನ್ನು ಸಮರ್ಪಕವಾಗಿ ನೀಡುವ ಜವಾಬ್ದಾರಿ ಚುನಾವಣಾ ಅಧಿಕಾರಿಗಳ ಮೇಲಿದೆ.  ಎಲ್ಲಾ ಮತಯಂತ್ರಗಳ ಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು.  ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು.  ಮತಗಟ್ಟೆ ಕೇಂದ್ರದ ಒಳಗೆ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು.  ಶಾಲೆ ಅಥವಾ ಇತರೆ ಕಟ್ಟಡಗಳಲ್ಲಿನ ಮತಗಟ್ಟೆಗಳಲ್ಲಿ ಯಾವುದೇ ಚಿಹ್ನೆಗಳು ಕಾಣದ ರೀತಿಯಲ್ಲಿ ಅದನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು.  ಅಂಗವಿಕಲರು/ ಅಂಧ ಮತದಾರರಿಗೆ ಯಾವುದೇ ಒಬ್ಬ ವ್ಯಕ್ತಿ ಸಹಾಯ ಒದಗಿಸಲು ಅವಕಾಶ ಕಲ್ಪಿಸಬೇಕು.  ಒಬ್ಬ ವ್ಯಕ್ತಿ ಒಬ್ಬರಿಗಿಂತ ಹೆಚ್ಚು ಅಂಗವಿಕಲರು/ ಅಂಧ ಮತದಾರರಿಗೆ ಸಹಾಯ ಒದಗಿಸಲು ಅವಕಾಶವಿಲ್ಲ.  ಮತಗಟ್ಟೆಯ ಒಳಗಡೆ ಮಾಧ್ಯಮದವರಿಗೆ ಚಿತ್ರೀಕರಣಕ್ಕೆ ಅವಕಾಶ ನೀಡಬಾರದು.  ಪ್ರಮುಖ ರಾಜಕೀಯ ವ್ಯಕ್ತಿಗಳು ಮತದಾನಕ್ಕೆ ಬಂದಲ್ಲಿ ಮತಗಟ್ಟೆ ಅಧಿಕಾರಿಗಳು ಅವರಿಗೆ ಯಾವುದೇ ವಿಶೇಷ ಸೌಲಭ್ಯ ಒದಗಿಸುವಂತಿಲ್ಲ.  ಮತ ಚಲಾಯಿಸಿದ ವ್ಯಕ್ತಿಗೆ ಸಮರ್ಪಕವಾಗಿ ಚುನಾವಣಾ ಆಯೋಗ ಸೂಚಿಸಿದ ಬೆರಳಿಗೆ ಗುರುತಿನ ಶಾಯಿ ಹಚ್ಚಬೇಕು.  ಮತಗಟ್ಟೆಯ ಭದ್ರತಾ ಸಿಬ್ಬಂದಿ, ಮತ ಚಲಾಯಿಸಿದ ವ್ಯಕ್ತಿಯ ಬೆರಳಿಗೆ ಹಾಕಿದ ಶಾಯಿ ಡ್ರೈ ಆಗಿರುವುದನ್ನು ಖಚಿತಪಡಿಸಿಕೊಂಡು ಆ ವ್ಯಕ್ತಿಯನ್ನು ಹೊರಗೆ ಕಳುಹಿಸಬೇಕು.  ಮತದಾರರ ಭಾವಚಿತ್ರವಿರುವ ಗುರುತಿನ ಕಾರ್ಡ್ ಇರದ ಮತದಾರರಿಗೆ ಪರ್ಯಾಯ ದಾಖಲೆಯಾಗಿ ೨೧ ದಾಖಲೆಗಳ ಪಟ್ಟಿಯನ್ನು ಚುನಾವಣಾ ಆಯೋಗ ಸೂಚಿಸಿದ್ದು, ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ, ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು.  ಚುನಾವಣಾ ಏಜಂಟರಿಗೆ ಮತಯಂತ್ರದ ಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ಮನವರಿಕೆ ಮಾಡಿಕೊಡಬೇಕು.  ಮತ ಎಣಿಕೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಸಲು ಕ್ರಮ ಕೈಗೊಳ್ಳಬೇಕು ಮತ ಎಣಿಕೆಗೆ ಒಟ್ಟು ೧೪ ಟೇಬಲ್ ನಿಗದಿಪಡಿಸಲಾಗಿದ್ದು, ಪ್ರತಿಯೊಂದು ಟೇಬಲ್‌ಗೂ ಸಹ ವಿಡಿಯೋ ಕ್ಯಾಮರಾ ಅಳವಡಿಸಬೇಕು.  ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.  ಒಟ್ಟಾರೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಶಾಂತಿ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿಶೇಷಧಿಕಾರಿ ಮನೋಜ್ ಅವರು ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಚುನಾವಣಾ ವೀಕ್ಷಕ (ಸಾಮಾನ್ಯ) ಎಸ್. ಕಿಶೋರ್, ಇನ್ನೋರ್ವ ಚುನಾವಣಾ ವೀಕ್ಷಕ (ವೆಚ್ಚ) ರಾಜೀವ್ ಅಗರವಾಲ್, ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಶರಣಬಸಪ್ಪ ಎಂ.ಸಿ.ಸಿ. ತಂಡದ ಮುಖ್ಯಸ್ಥರಾಗಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಎ. ಆನಂದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್, ಸಹಾಯಕ ಚುನಾವಣಾ ವೀಕ್ಷಕ ಶಾಂತಕುಮಾರ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error