ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಸೋಲು

 : ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರ ವಿರುದ್ಧ ಬುಧವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದ್ದು, ಇದರಿಂದಾಗಿ ಜಿ.ಪಂ. ಅಧ್ಯಕ್ಷರಾಗಿ ಜ್ಯೋತಿ ಬಿಲ್ಗಾರ್ ಅವರೇ ಮುಂದುವರಿಯಲಿದ್ದಾರೆ.
  ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ನಾಗರಾಜ್ ಬಿಲ್ಗಾರ್ ಅವರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆ ಕುರಿತ ಜಿಲ್ಲಾ ಪಂಚಾಯತಿ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಫೆ. ೨೨ ರಂದು ಬುಧವಾರ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ ವಿಶೇಷ ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಒಟ್ಟು ೧೧ ಸದಸ್ಯರು ಭಾಗವಹಿಸಿದ್ದರು.  ಪಂಚಾಯತ್ ರಾಜ್ ನಿಯಮ ೧೮೦ ರ ಅನ್ವಯ ಸಭೆ ಜರುಗಿಸಲು ಒಟ್ಟು ಸದಸ್ಯ ಬಲದ ಮೂರನೇ ಒಂದು ಭಾಗದಷ್ಟು (೧/೩) ಅಂದರೆ ೨೭ ಸದಸ್ಯ ಬಲದಲ್ಲಿ ಒಟ್ಟು ೯ ಸದಸ್ಯರ ಉಪಸ್ಥಿತಿ ಅಗತ್ಯವಿತ್ತು.  ಅದರಂತೆ ಸಭೆಯಲ್ಲಿ ೧೧ ಸದಸ್ಯರು ಹಾಜರಾಗಿದ್ದರಿಂದ ಸಭೆ ನಡೆಸಲು ಅಡ್ಡಿ ಇರಲಿಲ್ಲ.  ಸಭೆಯಲ್ಲಿ ಜಿ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗೈರು ಹಾಜರಿದ್ದರಿಂದ, ಪಂಚಾಯತಿ ರಾಜ್ ನಿಯಮ ೧೮೦ (ಇ) ಅನ್ವಯ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರ ಪೈಕಿ ಒಬ್ಬರು ಸಭೆಯ ಅಧ್ಯಕ್ಷತೆ ವಹಿಸಲು ಅವಕಾಶ ಕಲ್ಪಿಸಲಾಯಿತು.  ಇದರನ್ವಯ ಅಮರೇಶಪ್ಪ ಕುಳಗಿ ಅವರು ಸಭೆಯ ಅಧ್ಯಕ್ಷತೆ ವಹಿಸಿದರು.  ನಂತರ ಸಭೆಯಲ್ಲಿ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಯ ಪರವಾಗಿ ಒಟ್ಟು ೧೧ ಸದಸ್ಯರು ತಮ್ಮ ಸಮ್ಮತಿ ವ್ಯಕ್ತಪಡಿಸಿದರು.  ನಿಯಮ ೧೭೯ ರ ಅನ್ವಯ ಅವಿಶ್ವಾಸ ಗೊತ್ತುವಳಿ ಅಂಗೀಕಾರಕ್ಕೆ ಬಹುಮತ ಅಂದರೆ ಒಟ್ಟು ಸದಸ್ಯ ಬಲ ಹೊಂದಿರುವ ೨೭ ಸದಸ್ಯರ ಪೈಕಿ ಕನಿಷ್ಟ ೧೪ ಸದಸ್ಯರ ಸಮ್ಮತಿ ಅಗತ್ಯವಾಗಿದೆ.  ಆದರೆ ಕೇವಲ ೧೧ ಸದಸ್ಯರು ಮಾತ್ರ ಅವಿಶ್ವಾಸ ಪರವಾಗಿ ಕೈ ಎತ್ತಿ ಸಮ್ಮತಿ ಸೂಚಿಸಿದ್ದರಿಂದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಯಿತು.   ಸಭೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರುಗಳಾದ ವಿದ್ಯಾಶ್ರೀ ಈರಣ್ಣ ಗಜೇಂದ್ರಗಡ, ಬಿ. ಲಕ್ಷ್ಮೀದೇವಿ ಹಳ್ಳೂರು, ಹನುಮಕ್ಕ ಚೌಡ್ಕಿ, ಪರಸಪ್ಪ ಕತ್ತಿ, ಅನ್ನಪೂರ್ಣ ಕಂದಕೂರಪ್ಪ, ವಿನಯಕುಮಾರ್ ಮೇಲಿನಮನಿ, ಪಿಲ್ಲಿ ವೆಂಕಟರಾವ್ ಕೊಂಡಯ್ಯ, ಹೇಮಾವತಿ ಲಂಕೇಶ್, ಅಮರೇಶ್ ಕುಳಗಿ, ಚೆನ್ನಮ್ಮ ವಿರುಪಾಕ್ಷಗೌಡ ಹೇರೂರು ಮತ್ತು ಉಮಾ ಶಿವಪ್ಪ ಮುತ್ತಾಳ ಅವರು ಭಾಗವಹಿಸಿದ್ದರು.  ಉಳಿದಂತೆ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ೧೪ ಸದಸ್ಯರು ವಿಶೇಷ ಸಭೆಗೆ ಗೈರಾಗಿದ್ದರು.  ಇಬ್ಬರು ಸದಸ್ಯರ ನಿಧನದಿಂದ ಎರಡು   ಸ್ಥಾನಗಳು ತೆರವಾಗಿವೆ.
  ಜಿ.ಪಂ. ಅಧ್ಯಕ್ಷರ ವಿರುದ್ಧ ವಿಶೇಷ ಸಭೆಯಲ್ಲಿ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದ್ದು, ಜ್ಯೋತಿ ಬಿಲ್ಗಾರ್ ಅವರೇ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಜಿ.ಪಂ. ಪ್ರಬಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಅವರು ಅಂತಿಮವಾಗಿ ಘೋಷಿಸಿದರು.
Please follow and like us:
error