You are here
Home > Koppal News > ‘ನಿಮ್ಮೊಂದಿಗೆ ನಾವು’- ಏ. ೨೩ ರಂದು ಗಂಗಾವತಿಯಲ್ಲಿ ಅಭಯ ಪಥಸಂಚಲನ

‘ನಿಮ್ಮೊಂದಿಗೆ ನಾವು’- ಏ. ೨೩ ರಂದು ಗಂಗಾವತಿಯಲ್ಲಿ ಅಭಯ ಪಥಸಂಚಲನ

 ಮತದಾರರು ನಿಭೀತಿಯಿಂದ ಮತದಾನ ಮಾಡುವಂತೆ, ಅವರಲ್ಲಿ ಭದ್ರತೆಯ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೊಪ್ಪಳಕ್ಕೆ ಆಗಮಿಸಿರುವ ಪ್ಯಾರಾ ಮಿಲಿಟರಿ ಪಡೆಯಿಂದ ಏ. ೨೩ ರಂದು ಗಂಗಾವತಿಯ ವಿವಿಧ ಪ್ರದೇಶಗಳಲ್ಲಿ ಪಥಸಂಚಲನ ನಡೆಸಲಿದ್ದಾರೆ.
  ವಿಧಾನಸಭೆ ಚುನಾವಣೆ ಇದೀಗ ಮಹತ್ವದ ಘಟ್ಟ ತಲುಪಿದ್ದು, ವಿವಿಧ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಜಿಲ್ಲೆಯಲ್ಲಿ ನಗರ, ಗ್ರಾಮೀಣ ಹೀಗೆ ಮತದಾರರಿರುವ ಎಲ್ಲ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.  ತೀವ್ರ ಬಿಸಿಲು ಒಂದೆಡೆ ಸಾರ್ವಜನಿಕರ ಮೈಯಲ್ಲಿ ಕಾವೇರುವಂತೆ ಮಾಡಿದರೆ, ಚುನಾವಣಾ ಪ್ರಚಾರ ಇನ್ನಷ್ಟು ಸಾರ್ವಜನಿಕರಲ್ಲಿ ಇನ್ನಷ್ಟು ಬಿಸಿ ಏರುವಂತೆ ಮಾಡಿದೆ. ಮತದಾರರನ್ನು ತಮ್ಮತ್ತ ಸೆಳೆಯಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನೇಕ ತಂತ್ರಗಾರಿಕೆಯನ್ನು ನಡೆಸುವುದು ಸಹಜ, ಆದರೆ ಮತದಾರರಿಗೆ ಬೆದರಿಕೆ ಒಡ್ಡುವುದು ಕಾನೂನು ರೀತ್ಯ ಅಪರಾಧ.  ಇಂತಹ ಬೆದರಿಕೆ ತಂತ್ರಗಳಿಗೆ ಸಾರ್ವಜನಿಕರು, ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ.  ಏಕೆಂದರೆ ಇದೀಗ ಸಾರ್ವಜನಿಕರ ರಕ್ಷಣೆಗೆಂದೇ, ಜಿಲ್ಲೆಗೆ ಪ್ಯಾರಾ ಮಿಲಿಟರಿ ಪಡೆಯ ಸುಮಾರು ೧೦ ತುಕಡಿಗಳು ಬಂದಿಳಿದಿವೆ.  ಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ   ಜಿಲ್ಲೆಯ ವಿವಿಧೆಡೆ ಪಥ ಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸ ತುಂಬಲಿದ್ದಾರೆ.  ಸಾಮಾನ್ಯವಾಗಿ ಎನ್.ಸಿ.ಸಿ. ಮುಂತಾದ ಪಥ ಸಂಚಲನಗಳೇ ಆಕರ್ಷಕವಾಗಿರುತ್ತವೆ.  ಇನ್ನು ಪ್ಯಾರಾ ಮಿಲಿಟರಿ ಪಡೆಗಳ ಪಥ ಸಂಚಲನವೆಂದರೆ, ನೋಡುಗರಲ್ಲೂ ಸಂಚಲನ ಉಂಟುಮಾಡುತ್ತದೆ.  
  ಈ ನಿಟ್ಟಿನಲ್ಲಿ  ಏ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ಗಂಗಾವತಿ ನಗರದಲ್ಲಿ ಪ್ಯಾರಾ ಮಿಲಿಟರಿ ಪಡೆಯಿಂದ ‘ನಿಮ್ಮೊಂದಿಗೆ ನಾವು’- ಅಭಯ ಪಥಸಂಚಲನ ನಡೆಯಲಿದೆ ಎನ್ನುತ್ತಾರೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು.

Leave a Reply

Top