fbpx

ಬಸವಣ್ಣ ಪಂಕ್ತಿಭೇದ ಮಾಡಿದ್ದರೆ ?

ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸಾಮೀಜಿ ಹೇಳಿದ್ದೆನ್ನಲಾದ ವಾರ್ತೆಯೊಂದು ಇದೇ ಜೂ.೧೨ ರ ಸಂಚಿಕೆಯಲ್ಲಿ ಪ್ರಕಟವಾಗಿದ್ದನ್ನು ಓದಿದಾಗ ಇಂಥವರೂ ಹೀಗೆ ಹೇಳಬಹುದೇ ಎನ್ನುವ ಅನುಮಾನ ನನ್ನನ್ನು ಕಾಡತೊಡಗಿತು.
      ಆ ಸುದ್ದಿಯ ಶೀರ್ಷಿಕೆಯೆ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಪೇಜಾವರ ಶ್ರೀ ಸಮರ್ಥನೆ ಎಂದಿದ್ದರೆ, ಅವರು ಹೇಳಿದ್ದರ ಮಾತಿನ ಸಾರಾಂಶ ಕೃಷ್ಣ ಮಠದಲ್ಲಿ ಸಾರ್ವಜನಿಕ ಸಹ ಪಂಕ್ತಿಯ ಭೋಜನವಿದ್ದರೂ  ಸಸ್ಯಾಹಾರ ಮತ್ತು ಮಾಂಸಹಾರದ ಆಧಾರದ ಮೇಲೆ ಬ್ರಾಹ್ಮಣರಿಗೆ ಪ್ರತೇಕ ಊಟದ ವ್ಯವ್ಯಸ್ಥೆ ಮಾಡಲಾಗುತ್ತಿದೆ, ಮಾಂಸಹಾರಿಗಳ ಜೊತೆ ಕುಳಿತು ಊಟ ಮಾಡಿದರೆ ಮಹಾ ನರಕ ಎಂದು ಬಸವಣ್ಣನವರೇ ಹೇಳಿದ್ದಾರೆ ಎಂದಿದೆ.
      ಈ ರೀತಿ ಒಬ್ಬ ಸಾಮಾನ್ಯ ವ್ಯಕ್ತಿ ಹೇಳಿದರೂ ಅವನನ್ನಿ ಅವಿವೇಕಿ ಹಾಗೇ ಹೇಳುವುದು ಮಹಾ ಪಾಪ ಸುಮ್ಮನಿರು ಎಂದಿ ನಮ್ಮಲ್ಲಿ ಗದುರಿಸುತ್ತಾರೆ, ಇನ್ನು ಒಂದು ದೊಡ್ಡ ಮಠದ ಪೀಠಾಧಿಪತಿಯಾಗಿ ರಾಷ್ಟ್ರದಲ್ಲಿಯೇ ಹೆಸರು ಮಾಡಿದ ವಯೋವೃದ್ದ ಸ್ವಾಮೀಗಳಾದ ಪ್ರಭಾವಿ ವ್ಯಕ್ತಿ ಪೀಜಾವರ ಶ್ರೀ ಹೀಗೆ ಹೇಳಿದ್ದಾರೆ ಎನ್ನುವುದುನ್ನು  ನಂಬುವುದೇ ಕಷ್ಟ.
      ಆದರೆ ಮಾಮುಲಿನಂತೆ ಒಂದೆರಡು ದಿನಗಳಲ್ಲಿ ನಾನು ಹಾಗೇ ಹೇಳಿಲ್ಲಹೀಗೆ ಹೇಳಿದ್ದೇನೆ  ಎಂದೆಲ್ಲ ತಿಪ್ಪೆಸಾರಿಸುವ ಪ್ರತಿಕ್ರಿಯೆ ಬರಬಹುದೆನ್ನುವುದು ಸುಳ್ಳಾಗಿದ್ದರಿಂದ ಅದನ್ನು ಪೇಜಾವರರು ಒಪ್ಪಿಕೊಂಡು ಹೇಳಿದ್ದೆಂದು ಭಾವಿಸಬೇಕಾಗುತ್ತದೆ. ಹಾಗಾದರೆ  ಆ ಮಾತಿನ ವಿಚಾರ ಕುರಿತಂತೆ ಚರ್ಚೆಗೆ ತೊಡಗಿದರೆ ಅದು ಎಷ್ಟೋಂದು ಅವಿವೇಕತನದಿಂದ ಕೂಡಿದೆ ಮತ್ತು ಖಂಡನೆಗೆ ಅರ್ಹರವಾಗಿದೆ ಎನ್ನುವುದು ಗೊತ್ತಾಗುತ್ತದೆ.
      ತಮ್ಮ ಮಾತಿನ ಸಮರ್ಥನೆಗೆ ಮಹಾನ್ ಕ್ರಾಂತಿ ಪುರುಷ, ವಿಶ್ವಮಾನವತ್ವದ ತತ್ವ ಪ್ರತಿಪಾದಿಸಿದ ಬಸವಣ್ಣನವರನ್ನು ಎಳೆದುಕೊಂಡು  ದೊಡ್ಡ  ತಪ್ಪು ಮಾಡಿದ್ದಾರೆ. ಹಾಗೇ ಬಸವಣ್ಣ ” ಮಾಂಸಹಾರಿಗಳ ಜೊತೆ ಕುಳಿತು ಊಟ ಮಾಡುವುದು ಮಹಾ ನರಕ ಎಂದಿರುವ ಅಭಿಪ್ರಾಯ ಬರುವ ಮಾತುಗಳನ್ನೂ ಎಲ್ಲಿಯಾದರೂ ಹೇಳಿದ್ದರೆ ಆ ಸಾಲುಗಳನ್ನು ಉದಾಹರಿಸಬೇಕಿತ್ತು. ಆದರೆ ಅವರು ಹಾಗೆ ಎಲ್ಲಿಯೂ ಹೇಳಿರದೆ ಅದಕ್ಕೆ ವಿರುದ್ದವಾಗಿ
       ಎಡದ ಕೈಯಲ್ಲಿ ಕತ್ತಿ ಬಲದ ಕೈಯಲ್ಲಿ ಮಾಂಸ
       ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲೂ
       ಅವರನ್ನು ಲಿಂಗನೆಂಬ, ಸಂಗನೆಂಬ
       ಕೂಡಲಸಂಗಮದೇವಾ ಅವರ ಮುಖಲಿಂಗಗಳೆಂಬನು
ಎಂದಿರುವ ವಚನವನ್ನು ಪೇಜಾವರ ಶ್ರೀ ಗಮನಿಸಿದ್ದರೆ ಅಪ್ಪಿ ತಪ್ಪಿಯೂ ಬಸವಣ್ಣನವರನ್ನು ಎತ್ತಿಕೊಳ್ಳುತ್ತಿರಲಿಲ್ಲ.
     ಬಸವಣ್ಣನವರ ಮಾತಿರಲಿ  ಪೇಜಾವರರು ಪ್ರತಿಪಾದಿಸುವ ಹಿಂದೂ ಧರ್ಮವೇ ಪಂಕ್ತಿಭೇದವನ್ನು ಖಂಡಿಸುತ್ತದೆ  ಅದನ್ನು ಮಹಾ ಪಾಪಾ ಎಂದು ಕರೆಯುತ್ತದೆ ಎನ್ನುವುದನ್ನು ಅವರಿಗೆ ತಿಳಿಸಬೇಕಾದ ಅಗತ್ಯವಿಲ್ಲ   ಅಲ್ಲದೇ  ಬ್ರಾಹ್ಮಣರಷ್ಟೆ ಸಸ್ಯಹಾರಿಗಳೇ ? ಜೈನರು. ವೀರಶೈವರು ಕೂಡ ಶುದ್ದ ಸಸ್ಯಾಹಾರಿಗಳಾಗಿದ್ದಾರೆ, ಆ ಪಂಕ್ತಿಭೆದದಲ್ಲಿ ಅವರನ್ನು ಸಹ ಮಾಂಸಹಾರಿಗಳಾಗಿ ಪರಿಗಣಿಸಿದಂತಾಗುವುದಿಲ್ಲವೇ ?  ಈ ಪಂಕ್ತಿಭೇದ ಎನ್ನುವುದೇ ಮನುಷ್ಯರಲ್ಲಿ ಒಡಕು ಹುಟ್ಟಿಸುವುದಾಗಿದೆ, ಶ್ರೇಷ್ಠ ಕನಿಷ್ಟತೆಯನ್ನು ಎತ್ತಿತೋರಿಸುತ್ತ ಒಂದು ವರ್ಗವನ್ನು ಅವಮಾನಿಸುವ ಮೂಲಕ ಸಮಾಜದ ಅಶಾಂತಿಗೆ ಕಾರಣವಾಗುವುದಾಗಿರುತ್ತದೆ, ಇದನ್ನು ಉಪನಿಷತ್ ಕಾಲದಲ್ಲಿ ತೆಗೆದು ಹಾಕಲು ಸಹನಾವವತು ಸಹನೌಭುನಕ್ತು ಎನ್ನುವ ಮಂತ್ರ ಹುಟ್ಟಿಕೊಂಡಿತ್ತು, ಸಹನೌಭುನಕ್ತು ಎಂದರೆ  ಎಲ್ಲರೂ ಒಟ್ಟಿಗೆ ಊಟ ಮಾಡುವುದೆಂದಲ್ಲವೇ ಇದನ್ನು ಪೇಜಾವರ ಶ್ರೀ ಹೀಗೆ ಅರ್ಥೈಸುತ್ತಾರೆ, ಅಥವಾ ಆ ಉಪನಿಷತ್ ವಾಕ್ಯವನ್ನೆ ತಪ್ಪೆನ್ನುತ್ತಾರಯೇ ? ಅದನ್ನು ಲಕ್ಷ್ಯಾರ್ಥದಲ್ಲಿ ತೆಗೆದುಕೊಳ್ಳಬೇಕೆಂದರೂ ಭೇದ ಮಾಡಬಾರದು ಎನ್ನುವುದೇ ಅದರ ತಾತ್ಪರ್ಯವಲ್ಲವೇ ?
   ಇದೇ ಕಾರಣಕ್ಕಾಗಿಯೇ  ಪುರಂದರದಾಸರು ಹೊಲೆಯ ಹೊರಗಿಹನೆ ಊರೊಳಗಿಲ್ಲವೇ ಎಂದು ಹಾಡಿದರು ಬರೀ ಮಾಂಸತಿಂದ ಮಾತ್ರಕ್ಕೆ  ಅವನು ಕನಿಷ್ಟನಾಗುವುದಿಲ್ಲ  ಅದಕ್ಕಿಂತ ಕೀಳಾದ ಕುಕೃತ್ಯ ಮಾಡುವ್ರು ಎಷ್ಟು ಜನ ಸಸ್ಯಹಾರಿಗಳಿಲ್ಲ ಈ ಕುರಿತಂತೆ   ಮಹಾಭಾರತದಲ್ಲಿ ಬರುವ  ಧರ್ಮವ್ಯಾಧನ ಕಥೆಗೆ  ಪೇಜಾವರ ಏನು ಉತ್ತರ ಕೊಡುತ್ತಾರೆ, ಅವನೊಬ್ಬ  ಮಾಂಸ ಮಾರುವ ಕಟುಕನಾದರೂ  ಧರ್ಮ ಪಾಲನೆಯ ಮೂಲಕ  ಎಲ್ಲರಿಗಿಂತಲೂ ಶ್ರೇಷ್ಢನೆನಿಸಿ ವ್ಯಾಧಗೀತೆಯನ್ನು ರಚಿಸಿದ್ದನ್ನು ಆ ಮಹಾಭಾರತದಿಂದ ತೆಗೆದು ಹಾಕುವರೇ ಈ ಪಂಕ್ತಿ ಭೇದ ಮಾಡುವುದಕ್ಕೆ ಪೇಜಾವವರೆ ಪ್ರತಿಪಾದಿಸುವ ಯಾವ ಧರ್ಮ ಶಾಸ್ತ್ರದಲ್ಲಿ  ಅಥವಾ ಶೃತಿ ಸ್ಮೃತಿಗಳಲ್ಲಿ ಆಧಾರವಿದೆ ಹೇಲಲಿ ಅದಕ್ಕೆ ಕೆಟ್ಟದಾದ ಮನುಸ್ಮೃತಿಯೊಂದನ್ನು ಹೊರತು ಪಡಿಸಿದರೆ  ಬೇರೆಲ್ಲಿಯೂ ಆಧಾರ ದೊರೆಯಲಾರದು.
    ಅಲ್ಲದೆ ಅವರು ಪೂಜಿಸುವ ಆರಾಧ್ಯ ದೈವ  ಶ್ರೀ ಕೃಷ್ಣನೇ ಮಾಂಸಹಾರಿಯಾಗಿದ್ದನೆನ್ನುವುದನ್ನು ಶ್ರೀ ವಿವೇಕಾನಂದರ ಕೃತಿ ಶ್ರೇಣಿಯಲ್ಲಿ ಆದಾರ ಸಹಿತವಾಗಿ ವಿವರಿಸಿದ್ದನ್ನು ಗಮನಿಸಬಹುದು,
   ಜ್ಞಾನಿಯಾದವನು ಪಂಡಿತನಾದವನು ಸರ್ವರಲ್ಲಿಯೂ ಸಮಾನ ದೃಷ್ಟಿ ಹೊಂದಿರಬೇಕೆಂದು ಭಗವದ್ಗೀತೆಯ ಐದನೇ  ಅಧ್ಯಾಯನದ ೧೮ ನೇ  ಶ್ಲೋಕದಲ್ಲಿ ವಿದ್ಯೆ ವಿನಯ ಸಂಪನ್ನೆ ಬ್ರಾಹ್ಮಣೇ ಗವಿ ಹಸ್ತಿನಿ
 ಶುನಿ  ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ಎನ್ನುತ್ತದೆ.
   ಅಂದರೆ ವಿದ್ಯಾ ವಿನಯ ಸಂಪನ್ನು  ಬ್ರಾಹ್ಮಣ ಆಕಳು, ಆನೆ, ನಾಯಿ, ಚಂಡಾಲ ಈ ಎಲ್ಲರಲ್ಲಿಯೂ ಪಂಡಿತನಾದವನು ಸಮದರ್ಶಿಯಾಗಬೇಕೆಂದು ಹೇಳಿದೆ ಅಂದಮಾತ್ರಕ್ಕೆ  ಎಲ್ಲರನ್ನೂ ಒಂದೆಡೆ ಕೂಡಿಸಬೇಕೆಂದೆನೂ ಹೇಳಿಲ್ಲ ಇದರ ಪ್ರಕಾರ ಪೇಜಾವರರನ್ನು  ಪಂಡಿತರಲ್ಲವೆಂದು ಹೇಳಬೇಕೆ ?
    ಬ್ರಾಹ್ಮಣರಲ್ಲಯೇ  ಎಷ್ಟು ಜನ ಮಾಂಸಹಾರಿಗಳಿದ್ದಾರೆ ಎನ್ನುವುದಾದರೂ ಪೆಜಾವರರಿಗೆ ತಿಳಿದಿದೇಯೇ ಅವರನ್ನೆಲ್ಲ ಹೇಗೆ ಗುರಿತಿಸುತ್ತಾg ಅಂಥವರನ್ನು ಅಲ್ಲಯೇ ಹೊರಗಡೆ ಕೂಡಿಸುತ್ತಾರೆಯೇ ? ಆಹಾರವೆನ್ನುವುದು ವ್ಯಕ್ತಿಗತವಾದದ್ದು ಎಷ್ಟು ಜನ ಮಾಂಸ ಹಾರಿಗಳ ಮನೆಯಲ್ಲಿ ಸಸ್ಯಹಾರಿಗಳಿದ್ದಾರೆ ಅಂದಾಗ ಅವರನ್ನು ಬೇರ್ಪಡಿಸಲಾದಿತೇ ? ಪಾಶ್ಚಾತ್ಯರಲ್ಲಿಯೂ ಮ್ಯಾಕ್ಸಮುಲ್ಲರರಂಥವರು ಸಸ್ಯಹಾರಿಗಳಾಗಿದ್ದು ಕಾಣುತ್ತೆವೆ ಈ ರೀತಿ ಅನೇಕ ಜನರಿದ್ದಾರೆ ಅದ್ದರಿಂದ ಆಹಾರದ ಆದಾರದ ಮೇಲೆ ಮನುಷ್ಯರನ್ನು ಒಡೆಯುವುದು ಅಮಾನವೀಯ.
   ಮೊದಲಿಗೆ ನಮ್ಮ ಗ್ರಾಮದಲ್ಲಯೇ ಹಿಂದುಳಿದ ವರ್ಗದವರಲ್ಲಿಯೇ ಎರಡು ಪಂಗಡಗಳಿದ್ದವು ಅದರಲ್ಲಿ ಮಾಂಸಹಾರಿಗಳನ್ನು ಕಪ್ಪು ಜನರೆಂದು ಕರೆಯುತ್ತಿದ್ದರು, ನಾಲ್ವತ್ತು ವರ್ಷಗಳ ಹಿಂದೆ  ಯಾರದರೂ ಮನೆಯಲ್ಲಿ ಕಾರ್ಯಕ್ರಮ ನಡೆದರೆ ಸಾಮೂಹಿಕ ಊಟ ಏರ್ಪಡಿಸಿದಾಗ ಸಸ್ಯಹಾರಿಗಳಿಗೆ ಮೊದಲು ಊಟಕ್ಕೆ ನೀಡಿ  ಅವರು ಉಂಡು ಹೋದ ಬಳಿಕ ಈ ಕಪ್ಪು ಜನರೆಂದು ಕರೆಯುವವರಿಗೆ ಊಟಕ್ಕೆ ಕರೆಯುತ್ತಿದ್ದರು.
     ಈ  ಸಾಮೂಹಿಕ ಅವಮಾನದಿಂದ ಕೆಲವರು ರೊಚ್ಚಿಗೆದ್ದು ಜಗಳವಾಡಿದ ಬಳಿಕ ಅ ಪದ್ದತಿ ನಿಂತು ಹೊಗಿ ಈಗ ಎಲ್ಲರೂ ಒಂದೇ ಪಂಕ್ತಿಯಲ್ಲಿ ಊಟ ಮಾಡುವ ಪದ್ದತಿ ಬಂದಿದೆ. ಸಾಮಾನ್ಯರಲ್ಲಿಯೇ ಇಷ್ಟೋಂದು ಬದಲಾವಣಿ ಬಂದಿರುವಾಗ ಪೇಜಾವರರಂತಹ ದೊಡ್ಡ ಸ್ವಾಮೀಜಿಗಳು ಇನ್ನೂ ಅಸಮಾನತೆಯನ್ನು ಪೋಷಿಸುವ ಮಾತನಾಡುತ್ತಿರುವುದು ದುರಂತವೇ ಸರಿ . ದೊಡ್ಡವರಾದವರು ದೊಡ್ಡ ಮನಸ್ಸಿನಿಂದ ಆಲೋಚಿಸಿದರೆ ಭೂಷಣ ಇಲ್ಲವಾದರೆ ಅದು ಅವರ ಸಣ್ಣತನ ಪ್ರದಶನ ಮಾಡಿಕೊಂಡತಾಗುತ್ತದೆ. ಕೇವಲ ಆಹಾರದಿಂದಲೇ ಮನುಷ್ಯ ಕೀಳಾಗುವುದಿಲ್ಲ   ಮಾನಸಿಕವಾಗಿಯೇ ಒಬ್ಬ ಒಬ್ಬ ವ್ಯಕ್ತಿ ಎಷ್ಟು ಕೊಳಕಾಗಿರುತ್ತಾನೆ ಎನ್ನುವುದನ್ನು ಜೈನ ಗುರು ಉನ್ಮುಕ್ತ ಚಿಂತಕ ಆಚಾರ್ಯ ತುಳಸಿ ಅವರು ತಮ್ಮ ‘ಖುಲೆ ಆಕಾಶಮೇ’ ಎನ್ನುವ ಕೃತಿಯಲ್ಲಿ  ತುಂಬಾ ಅರ್ಥಗರ್ಭೀತವಾಗಿ ಹೇಳಿದ್ದಾರೆ, ಅದನ್ನು ಕನ್ನಡಕ್ಕೆ ‘ಬಯಲು ಬಾನಿನಲ್ಲಿ’ ಎನ್ನುವ ಹೆಸರಿನಲ್ಲಿ ಅನುವಾದಿಸಿ ಪ್ರಕಟಿಸಿರುವ ಹಿರಿಯ ಕವಿ ಪಂಚಾಕ್ಷರಿ  ಹಿರೇಮಠ ರಚನೆಯಲ್ಲಿ ಹೀಗೆ ಹೇಳುತ್ತಾರೆ.
    ಧರ್ಮದ ಅತೀ ಸಮೀಪದಲ್ಲಿ 
    ಇರುವವರ ಜಿವನ ನೋಡಿದರೆ
    ಅವರ ಮನದಿಂದ ಪಾಪಾದ ಹೆದರಿಕೆ
    ಹೊರಟು ಹೋಗಿದೆಯೇನೂ ಎಂದೆನ್ನಿಸುತ್ತದೆ
ಎಂದು ಒಂದೆಡೆ ಹೇಳಿ ಮತ್ತೋಂದೆಡೆ 
    ಮನದಲ್ಲಿ ಕೊಳ್ಳೆ ಒಡೆಯುವ ಯೋಜನೆ ಗತ್ತುಗಾರಿಕೆ
  ಕೈಯಲ್ಲಿ ಮಾತ್ರ ಆಗಮ, ಕುರಾನ, ಗೀತೆ ಸಹಾಯಕೆ
ಜೀವ ದಯೆ ತೋರಲೆಂದು ನೀರು ಸೋಸಿ ಸೋಸಿ ಕುಡಿಯುವ ಇಂದಿನ ಧi ಪುರುಷ ನಿರಪರಾಧಿ ಜನರ ರಕ್ತವನ್ನು ಸೋಸದೆಯೇ
ಕುಡಿಯುತ್ತಾನಲ್ಲ ಇದು ಎಂತಹ ಅಚ್ಚರಿ ?
   ಬಹುಶ ಇಷ್ಟೇಲ್ಲ ವಿವೇಚನೆ ಇದ್ದಿದ್ದರೆ ಪೆಜಾವರರಿಂದ ಆ ಮಾತು ಬರಲಿಕ್ಕೆ ಸಾದ್ಯವಾಗುತ್ತಿರಲಿಲ್ಲ ಅದು ಹೋಗಲಿ ಅವರ ವೈಯಕ್ತಿಕ ವಿಚಾರ ಎಂತಾದರು ಇರಲಿ ತಮ್ಮ ಸಮರ್ಥನೆಗೆ  ಬಸವಣ್ಣನವರಂಥ ಮಹಾನ್ ಪುರುಷನನ್ನು ತಪ್ಪಾಗಿ ಬಳಸಿಕೊಂಡು  ಇಡೀ ಧರ್ಮದ ದಾರಿಯನ್ನೆ ತಪ್ಪಿಸಲು ಹೊರಟಿರುವುದು ಸರಿಯಲ್ಲಿ ಈ ಕುರಿತು ದೊಡ್ಡ ಚರ್ಚೆಯೇ ನಡೆಯಬೇಕಿತ್ತು ಆದರೆ ಯಾಕೋ ಏನೋ ಡಾ.ಮೀನಾಕ್ಷಿ ಬಾಳೆಯವರಂತಹ ಪ್ರತಿಕ್ರೀಯೆಯೊಂದನ್ನು ಬಿಟ್ಟು ಬೇರೆ ಬಂದಿಲ್ಲ  ಇದನ್ನು ಮಾನವೀಯ ಹೃದಯದ ಸಮಾನತೆಯ ತುಡಿತದ ಎಲ್ಲರೂ ವಿಚಾರಿಸಬೇಕಾಗಿದೆ, ಬಿನ್ನವಾದ ಪ್ರತಿಕ್ರಿಯೆಗೂ ಇಲ್ಲಿ ಸ್ವಾಗತವಿದೆ, ಚರ್ಚೆ ನಡೆದು ಸತ್ಯವೊಂದೆ ಉಳಿಯಬೇಕಾಗಿದೆ.
                                                    
                                                                                                ವಿಠ್ಠಪ್ಪ ಗೋರಂಟ್ಲಿ
                                                                                              ಭಾಗ್ಯನಗರ-ಕೊಪ್ಪಳ
       
Please follow and like us:
error

Leave a Reply

error: Content is protected !!