fbpx

ಶಾಂತಾದೇವಿಯವರೊಂದಿಗೆ ಸಂದರ್ಶನ

ಕೊಪ್ಪಳ ತಾಲೂಕಾ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಶಾಂತಾದೇವಿಯವರೊಂದಿಗೆ ಸಂದರ್ಶನ
(ಫೆಬ್ರುವರಿ ೨೩, ೨೦೧೪ ರಂದು ಕೊಪ್ಪಳ ತಾಲೂಕಿನ ಮುನಿರಾಬಾದನಲ್ಲಿ ನಡೆಯಲಿರುವ ಕೊಪ್ಪಳ ತಾಲೂಕಾ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಶಾಂತಾದೇವಿಯವರೊಂದಿಗೆ ಸಂದರ್ಶನ)
ಸಂದರ್ಶಕ    : ಹನುಮಂತಪ್ಪ ಅಂಡಗಿ ಚಿಲವಾಡಗಿ, 
v ತಮ್ಮನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಮ್ಮ ಅಭಿಪ್ರಾಯವೇನು?
ಮೊದಲು ನನ್ನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕೊಪ್ಪಳ ತಾಲೂಕಿನಲ್ಲಿಯೇ ಮಹಿಳೆಯರಿಗೆ ದೊರೆತ ಮೊದಲ ಸ್ಥಾನವಿದು. ಮಹಿಳೆಯನ್ನು ಆಯ್ಕೆ ಮಾಡಿದ್ದಕ್ಕೆ ಎಲ್ಲ ಮಹಿಳೆಯರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಇನ್ನು ಮುಂದಿನ ದಿನಮಾನಗಳಲ್ಲೂ ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳನ್ನು ಹೊರತರುವುದರ ಮೂಲಕ ನಾನು ಈ ಋಣವನ್ನು ತೀರಿಸುತ್ತೇನೆ.
v ತಮ್ಮ ಹುಟ್ಟು, ಬಾಲ್ಯ ಜೀವನ ಎಲ್ಲಿ ಆಯಿತು? 
ಬಿಜಾಪೂರ ಜಿಲ್ಲೆಯ ಬಬಲೇಶ್ವರ ನನ್ನೂರು. ನನ್ನ ತಂದೆ ನೌಕರಿಯ ಮೇಲೆ ಬಾಗಲಕೋಟೆಗೆ ಬಂದರು. ನನ್ನ ಪ್ರಾಥಮಿಕ ಶಿಕ್ಷಣ ಬಾಗಲಕೋಟೆ, ರಾಯಚೂರು, ಕೊಪ್ಪಳದಲ್ಲಾಯಿತು. 
v ತಾವು ಕೊಪ್ಪಳಕ್ಕೆ ಬರಲು ಕಾರಣವೇನು?
ನನ್ನ  ಪತಿ ಶ್ರೀ ಗುರುಲಿಂಗಯ್ಯನವರಿಗೆ ರಾಯಚೂರಿನಿಂದ ಬಡ್ತಿಹೊಂದಿ ಕಂದಾಯ ಇಲಾಖೆಯ ಇನ್ಸ್‌ಪೆಕ್ಟರ್‌ಆಗಿ ಕೊಪ್ಪಳಕ್ಕೆ ಬಂದರು.  ನಾನು ಶಿಕ್ಷಕಿಯಾಗಿ ರಾಯಚೂರಿನಲ್ಲೆ ಕೆಲಸ ಮಾಡುತ್ತಿದ್ದೆನು. ನನ್ನ ಎರಡು ಮಕ್ಕಳೊಂದಿಗೆ ಕೊಪ್ಪಳಕ್ಕೆ ಬಂದೆನು. 
v ತಮಗೆ ಕೊಪ್ಪಳ ಈ ಮೊದಲು ಪರಿಚಯವಿತ್ತೆ?
ನನ್ನ ಹಿರಿಯಕ್ಕ ಲಕ್ಷ್ಮೀದೇವಿ  ಮುಂಬೈ ಕರ್ನಾಟಕದಿಂದ ರಾಯಚೂರಿನಲ್ಲಿ ಹೆಣ್ಣು ಮಕ್ಕಳ ಪ್ರೌಢಶಾಲೆಗೆ ಶಿಕ್ಷಕಿಯಾಗಿ ಬಂದಳು. ಆಕೆಯ ಜೊತೆಗೆ ನನ್ನನ್ನು ಕಳುಹಿಸಿದರು. ಒಂದು ವರ್ಷದ ನಂತರ ಕೊಪ್ಪಳದ ಈಗಿನ ಜಿ.ಜಿ.ಎಮ್.ಎಸ್.ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಂದರು. ಇಲ್ಲಿ ನಾನು ೬& ೭ ನೇ ತರಗತಿ ಪಾಸಾಗಿ ಮೂರು ವರ್ಷ ಮನೆಯಲ್ಲಿದ್ದೆ . ನಮ್ಮ ಮನೆ ಪಕ್ಕದಲ್ಲಿ ಶ್ರೀ ಶಂಕರಪ್ಪ ಬಂಗಾರ ಶೆಟ್ಟರ ಇವರ ಮನೆ ಇತ್ತು. ಹೀಗೆ ನನಗೆ ಕೊಪ್ಪಳ ತುಂಬಾ ಪರಿಚಯವಾಯಿತು. 
v ಆಗ ಕೊಪ್ಪಳದಲ್ಲಿಯ ಸಾಹಿತ್ಯಿಕ ವಾತಾವರಣ ಹೇಗಿತ್ತು?
ಕೊಪ್ಪಳ ಆಗಲೂ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮುಂಚೂಣಿಯಲ್ಲಿಯೇ ಇತ್ತು. ನಾಡ ಹಬ್ಬ, ರಾಷ್ಟ್ರೀಯ ಹಬ್ಬಗಳು, ನಾಟಕ, ನೃತ್ಯ, ವಚನ ಗಾಯನ, ಭಾಷಣ, ಕೋಲಾಟಗಳು ನಡೆಯುತ್ತಿದ್ದವು. ಈ ಕಾರ್ಯಕ್ರಮಗಳಿಗೆ ನಾಡಿನ ದೊಡ್ಡ ದೊಡ್ಡ ಸಾಹಿತಿಗಳು, ಕಲಾವಿದರು ಬರುತ್ತಿದ್ದರು. ಆ ಸಂದರ್ಭ ಒಂದು ರೀತಿಯಿಂದ ಸಾಹಿತ್ಯಿಕ ಕ್ಷೇತ್ರದ ಸುವರ್ಣಯುಗವಾಗಿತ್ತು. ಸಾಹಿತಿಗಳನ್ನು ನಮ್ಮ ಮನೆಯ ಎದುರಿನ ಮನೆಯಲ್ಲಿಯೇ ಇಳಿಸುತ್ತಿದ್ದರು. ವೀರಭದ್ರಪ್ಪ ಬಳ್ಳೊಳ್ಳಿ ಯವರ ಜೀನಿನಲ್ಲಿ ನಾಡ ಹಬ್ಬ ವೈಭವಯುತವಾಗಿ ನಡೆಯುತ್ತಿದ್ದವು. 
v ನಿಮ್ಮ ಸಾಹಿತ್ಯಕ್ಕೆ ಸ್ಫ್ಪೂರ್ತಿ ಯಾರು?
ಸಾಹಿತಿಗಳ ಒಡನಾಟ, ನಾನು ಸ್ವತಃ ಅಭಿನಯಿಸುತ್ತಿದ್ದ ನಾಟಕಗಳು, ಎನ್ಕೆ, ಬೀಚಿ ಯವರ ಸಾಹಿತ್ಯ, ಮನೆಯಲ್ಲಿ ನನ್ನ ಭಾವನವರಾದ ಶಾಂತರಸರು ಹಾಗೂ ಅವರ ಸಾಹಿತ್ಯ ಬಳಗ, ರಾಯಚೂರಿನಲ್ಲಿ ನಾನು ಓದುತ್ತಿರುವಾಗ ನನ್ನ ಗುರುಗಳಾಗಿದ್ದ ಶೈಲಜಾ ಉಡಚಣ ಅವರ  ಕವನ ಮತ್ತು ಪ್ರಬಂಧ ಬರಹಗಳು ನನ್ನ ಸಾಹಿತ್ಯಕ್ಕೆ ಸ್ಫ್ಪೂರ್ತಿಯಾದವು. ಕೊಪ್ಪಳದ ಹಿರಿಯ ಪತ್ರಕರ್ತರಾಗಿದ್ದ ಶಂಕರಪ್ಪ ಬಂಗಾರ ಶೆಟ್ಟರ ಇವರ ತುಂಗಭದ್ರಾ ಪತ್ರಿಕೆಯಲ್ಲಿ ನನ್ನ ಮೊದಲ ಕವನ ಪ್ರಕಟವಾಯಿತು. ಮುಂದೆ ಸಾಹಿತಿಯಾಗಿದ್ದ ಗುರುಲಿಂಗಯ್ಯನವರೊಂದಿಗೆ ಮದುವೆಯಾಗಿದ್ದರಿಂದ ನಾನು ಸಾಹಿತ್ಯಕ್ಕೆ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. 
v ನಿಮ್ಮ ಕವನಗಳನ್ನು ಪ್ರಕಟಿಸಿದ ಪತ್ರಿಕೆಗಳು ಯಾವುವು?
ಸಾವಧಾನ, ಅಮರವಾಣಿ, ರಾಯಚೂರುವಾಣಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ವಿಜಯಕರ್ನಾಟಕ, ಸುದ್ದಿಮೂಲ, ಪ್ರಜಾ ಪ್ರಪಂಚ, ಪ್ರಪಂಚ, ಸುದ್ದಿ ಸಂಗಾತಿ, ತಳಮಳ, ಕೊಪಣ ಕಿರಣ, ಮಯೂರ, ಹೊಸತು ಮುಂತಾದ ಪತ್ರಿಕೆಗಳು ನನ್ನ  ಕವನಗಳನ್ನು ಪ್ರಕಟಿಸಿವೆ. ಆ ಎಲ್ಲಾ ಪತ್ರಿಕೆಗಳಿಗೆ ನಾನು ಋಣಿಯಾಗಿದ್ದೇನೆ. 
v ನೀವು  ಯಾವ ಯಾವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೀರಿ? 
ರಾಯಚೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಕೊಪ್ಪಳ, ಬೆಳಗಾವಿ, ಬೀದರ, ಬಾಗಲಕೋಟೆ ಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇನೆ. 
v ಈ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರಿಂದ ನಿಮಗಾದ ಲಾಭವೇನು?
ಈ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರಿಂದ ದೊಡ್ಡ ದೊಡ್ಡ ಸಾಹಿತಿಗಳನ್ನು ನೇರವಾಗಿ ನೋಡುವ ಸೌಭಾಗ್ಯ ದೊರೆಯಿತು. ಎಲ್ಲ ಲೇಖಕರ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಯಿತು. ಹಿರಿಯ ಸಾಹಿತಿಗಳ ಭಾಷಣ ಕೇಳಲು ಅನುಕೂಲವಾಯಿತು. 
v ಇಂದಿನ ಸಾಹಿತ್ಯ ಸಮ್ಮೇಳನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ಸಾಹಿತ್ಯ ಸಮ್ಮೇಳನ ವೆಂದರೆ ಜಾತ್ರೆಯ ಆಟದ ಸಾಮಾನುಗಳು, ಬ್ಯಾಗುಗಳು, ಬಟ್ಟೆ ಗಳನ್ನು ಮಾರಾಟ ಮಾಡುವ ಕೇಂದ್ರಗಳಾಗಬಾರದು. ಸಮ್ಮೇಳನದಲ್ಲಿ ರುಚಿ ರುಚಿಯ ಅಡುಗೆ ಸಿದ್ದವಾಗಿದೆಎಂದು ಪತ್ರಿಕೆಗಳಲ್ಲಿ ಪ್ರಚಾರ ಕೊಡುವುದನ್ನು ನಿಲ್ಲಿಸಬೇಕು. ಇಲ್ಲಿ ಕೇವಲ ಪುಸ್ತಕ ಮಳಿಗೆಗಳಿರಬೇಕು. ಅಂದಾಗ ಮಾತ್ರ ಪುಸ್ತಕ ಖರೀದಿಮಾಡಲು ಆಸಕಿ ಇದ್ದವರು ಮಾತ್ರ ಸಮ್ಮೇಳನಗಳಿಗೆ ಬರಲು ಸಾಧ್ಯವಾಗಿತ್ತದೆ.  ಹಿಗಾದಾಗ ಮಾತ್ರ ಪುಸ್ತಕ ಖರೀದಿಯಾಗಿ ಪ್ರಕಾಶಕರು ಬದುಕಲು ಸಾಧ್ಯವಾಗುತ್ತದೆ. ಪುಸ್ತಕೋದ್ಯಮ ಉಳಿಯಲು ಸಾಧ್ಯವಾಗುತ್ತದೆ. 
v ಇಂದಿನ ಯುವ ಕವಿಗಳಿಗೆ ನಿಮ್ಮ ಸಂದೇಶವೇನು? 
ಇಂದಿನ ಯುವಕವಿಗಳು ಹಿಂದಿನ ಮಹಾ ಕವಿಗಳ ಇಂದಿನ ಹೊಸಗನ್ನಡ ಕವಿಗಳ  ಸಾಹಿತ್ಯವನ್ನು ಅಭ್ಯಾಸ ಮಾಡಬೇಕು. ಧಿಡೀರ್ ಪ್ರಸಿದ್ದಿಗಾಗಿ, ಪ್ರಶಸ್ತಿಗಾಗಿ ಸಾಹಿತ್ಯ ರಚಿಸಬಾರದು. ಅಂದರೆ ಗಟ್ಟಿಯಾದ ಸಾಹಿತ್ಯ ರಚನೆಯಾಗಬೇಕು. ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಕೃಷಿ ಮಾಡಲಿ ಆ ಸಾಹಿತ್ಯ ಸರಳ, ಸುಂದರ ಭಾಷೆಯಲ್ಲಿರಬೇಕು.  ಹಿರಿಯರಾದವರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ಯಾರು ಮಹಾಕವಿಗಳಾಗಿ ಹುಟ್ಟುವುದಿಲ್ಲ. ಸತತ ಅಭ್ಯಾಸ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಓದಿ ಮನನ ಮಾಡಿಕೊಂಡರೆ ಎತ್ತರವಾದ ಸ್ಥಾನಕ್ಕೇರಬಹುದು. 
v ಇಂದಿನ ಮಹಿಳೆಯರ ಬಗೆಗೆ ನಿಮ್ಮ ಅಭಿಪ್ರಾಯವೇನು? 
ನಮ್ಮ ಮಹಿಳೆಯರು ಹಿಂದಿಗಿಂತಲೂ ಈಗ  ಎಲ್ಲಾ ರಂಗಗಳಲ್ಲೂ ಬಹಳ ಮುಂದುವರೆದಿದ್ದಾರೆ.  ಪುರುಷ ವರ್ಗವು ಈಗಲೂ ಸ್ತ್ರೀಯರನ್ನು ಕೀಳಾಗಿ ನೋಡುವುದು ಬಿಟ್ಟಿಲ್ಲ. ನಗರಗಳಲ್ಲಿ ಸ್ತ್ರೀಯರು ಪುರುಷರಷ್ಟೆ ಸರಿಸಮಾನವಾಗಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮಾತ್ರ ಇನ್ನೂ ಪುರುಷರು ಸ್ರ್ತೀಯರನ್ನು ತಮ್ಮ ಕಪಿಮುಷ್ಠಿಯಲ್ಲಿಯೇ ಇಟ್ಟುಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಇದು ಖಂಡನಾರ್ಹ. ಸ್ರ್ತೀಯು ಕೂಡಾ ತಮ್ಮಂತೆ ಬಾಳಿ ಬದುಕಬೇಕೆಂದು ತಿಳಿಯಬೇಕು. 
ಎಲ್ಲಿ ನೋಡಿದಲ್ಲಿ ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಹೆಚ್ಚಾಗಿವೆ. ಇದರಲ್ಲಿ ಸುಸಂಸ್ಕೃತರೆನಿಸಿಕೊಂಡ ಪುರುಷರ ಪಾತ್ರವೇ ಹೆಚ್ಚಿದೆ. ಮಹಿಳೆಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಅತ್ತೆ ಸೊಸೆಯರ ನಡುವೆ ಜಗಳ ಹಚ್ಚುವ ಧಾರವಾಹಿಗಳು ಮಹಿಳೆಯರ ದಿಕ್ಕು ತಪ್ಪಿಸತ್ತಿವೆ. ಮಹಿಳೆಯರು ಧಾರವಾಹಿಗಳ ದಾಸರಾಗಬಾರದು. ತಮ್ಮ ಬಿಡುವಿನ ಸಮಯದಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಪುರುಷರು ಮಹಿಳೆಯರನ್ನು ಕೇವಲ ಕಾಮದ ಗೊಂಬೆಗಳನ್ನಾಗಿ ನೋಡದೇ ಆಕೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಅಂದಾಗ ಮಾತ್ರ ದೇಶ ಉದ್ದಾರವಾಗಲು ಸಾಧವಾಗುತ್ತದೆ. 
v ಹೆಣ್ಣಿನ ಶೋಷಣೆ ಬಗ್ಗೆ ನಿಮ್ಮ ಅಭಿಪ್ರಾಯ?
ಹೆಣ್ಣಿನ ಶೋಷಣೆ ಆದಿಕಾಲದಿಂದಲೂ ನಡೆಯತ್ತಲೇ ಬಂದಿದೆ. ಇದಕ್ಕೆ ಕಾರಣ ಹೆಣ್ಣು ಗಂಡು ಎಂಬ ಭೆದಭಾವ. ಗಂಡು ತಪ್ಪು ಮಾಡಿದಾಗ ಕಠಿಣವಾದ ಶಿಕ್ಷೆ ಇಲ್ಲದಿರುವುದು ಇದಕ್ಕೆ  ಕಾರಣ. ಅದಕ್ಕಾಗಿ ಹೆಣ್ಣು ಗಂಡು ಎಂಬ ಭೇದಭಾವ ಮಾಡಬಾರದು. 
v ನಿಮ್ಮ ಸಾಹಿತ್ಯದ ಬಗ್ಗೆ ತೃಪ್ತಿ ಇದೆಯೆ? 
ನಾನು ರಚಿಸಿದ ಸಾಹಿತ್ಯದ ಬಗ್ಗೆ ಅಲ್ಪ ಮಟ್ಟಿಗೆ ತೃಪ್ತಿಇದೆ. ಇನ್ನೂ ಸಂಪೂರ್ಣ ತೃಪ್ತಿ ಇಲ್ಲ. ನನ್ನ ಕುಟುಂಬದವರು, ಕೊಪ್ಪಳದ ಸಾಹಿತ್ಯ ಬಳಗ, ನನ್ನ ಪತಿದೇವರಾಗಿದ್ದ ಗುರುಲಿಂಗಯ್ಯನವರು ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದ್ದರಿಂದಲೇ ಸಾಧ್ಯವಾದಷ್ಟು ಮಟ್ಟಿಗೆ ಸಾಹಿತ್ಯ ರಚಿಸಲು ಸಾಧ್ಯವಾಗಿದೆ. ನಾನು ಇನ್ನೂ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಬೇಕಾಗಿದೆ. 
v ಇಂದಿನ ಮಹಿಳಾ ಸಾಹಿತಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ಇಂದಿನ ಮಹಿಳಾ ಸಾಹಿತಿಗಳ ಬಗ್ಗೆ ತುಂಬಾ ಸಂತೋಷವಿದೆ.  ಆದರೆ ಇಂದಿನ ದಿನಗಳಲ್ಲಿ ಬಹಳಷ್ಟು ಮಹಿಳೆಯರು ಮುಂದೆ ಬರುತ್ತಿಲ್ಲ. ಸಾಕಷ್ಟು ಕವನ, ಕಥೆ, ಲೇಖನಗಳನ್ನು ಬರೆದಿದ್ದಾರೆ. ಆದರೆ ಅದ್ಯಾಕೋ ಪ್ರಕಟಣೆಗೆ ಹಿಂಜರಿಯುತ್ತಿದ್ದಾರೆ. ಕೊಪ್ಪಳದಲ್ಲಿ  ಪ್ರಕಾಶಕರ ಕೊರತೆ ಇದೆ. ಈ ಕೊರತೆಯನ್ನು ನಿವಾರಿಸಲು ಪ್ರಕಾಶಕರು ಮುಂದೆ ಬಂದು ಗ್ರಂಥ ಪ್ರಕಟಣೆಗೆ ಸಹಾಯ ಮಾಡಬೇಕಾದ ಅನಿವಾರ್ಯತೆ  ಇದೆ. ಈಗ ನಾವು ಸದ್ಯ ಬೆಂಗಳೂರಿನ ಪ್ರಕಾಶಕರನ್ನೇ ಅನಿವಾರ್ಯವಾಗಿ ಅವಲಂಬಿಸಿದ್ದೇವೆ. 
v ನಿಮ್ಮ ಕುಟುಂಬದ ಸದಸ್ಯರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆಯೇ? 
ನಮ್ಮ ಪತಿದೇವರಾಗಿದ್ದ ಗುರುಲಿಂಗಯ್ಯನವರು ದೊಡ್ಡಸಾಹಿತಿಯಾಗಿದ್ದರು. ನನ್ನ ಹಿರಿಯ ಮಗನಾದ ಸಿದ್ದರಾಮ ಹಿರೇಮಠ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾನೆ. ಮೊಮ್ಮಕ್ಕಳಾದ ಅಪೂರ್ವ, ಆಕಾಶ, ನಮ್ರತಾ, ನಿಶಾಂತ ಇವರು ಕವನಗಳನ್ನು ರಚಿಸುತ್ತಿದ್ದಾರೆ. ನಮ್ಮ ಮೊಮ್ಮಕ್ಕಳ ಕವನ ಸಂಕಲನ ಮುಂದಿನ ದಿನಮಾನಗಳಲ್ಲಿ ಹೊರಬರಲಿವೆ. 
Please follow and like us:
error

Leave a Reply

error: Content is protected !!