ಹೈ.ಕ. ಅರ್ಹತಾ ಪ್ರಮಾಣ ಪತ್ರ ಅನ್ಯಾಯ ಖಂಡಿಸಿ ಪ್ರತಿಭಟನೆ

ಕೊಪ್ಪಳ, ೨೨- ಹೈ..ಕ. ಪ್ರದೇಶ ವಿಭಾಗದ ಅಭ್ಯರ್ಥಿಗಳಿಗೆ ಮೀಸಲಾತಿಗಾಗಿ ನೀಡುವ ಹೈ.ಕ. ಅರ್ಹತಾ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಉಂಟಾಗುತ್ತಿರುವ ಅನೇಕ ಗೊಂದಲಗಳು ಹಾಗೂ ಅಧಿಕಾರಿಗಳ ಮತ್ತು ಏಜೆಂಟರುಗಳಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ಹೈ.ಕ.ಹೋರಾಟ ಸಮಿತಿ ಜಿಲ್ಲಾ ಯುವ ಘಟಕದ ವತಿಯಿಂದ ದಿ.೨೩ ರಂದು  ಬೆಳಿಗ್ಗೆ ೧೦ ಗಂಟೆಗೆ ತಹಸೀಲ್ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.
ಸರ್ಕಾರದ ಆದೇಶದಂತೆ ೩೭೧ (ಜೆ) ಪ್ರಮಾಣ ಪತ್ರ ನೀಡಲು ಕೇವಲ ೨ ದಾಖಲಾತಿಗಳು ಅವಶ್ಯವಿದ್ದರೂ ಕೂಡ ಅದನ್ನು ಸರಿಯಾಗಿ ತಿಳಿದುಕೊಳ್ಳದೇ ಅಭ್ಯರ್ಥಿಗಳಿಗೆ ತಹಶೀಲ್ ಕಛೇರಿಯಲ್ಲಿ ೪-೫ ದಾಖಲೆಗಳನ್ನು ನೀಡುವಂತೆ ಒತ್ತಾಯಿಸುತ್ತಿರುವುದಲ್ಲದೇ,  ನೀಡದಿದ್ದರೆ ನಿಮಗೆ ಪ್ರಮಾಣ ಪತ್ರ ನೀಡುವುದಿಲ್ಲ ಎಂಬ ಭಯವನ್ನು ಹುಟ್ಟಿಸುತ್ತಿರುವುದು ಅಭ್ಯರ್ಥಿಗಳ ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ ಏಜೆಂಟರುಗಳ ಮುಖಾಂತರ ಹೋದರೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ದುಡ್ಡಿನ ಆಸೆಗೆ ಅಂತಹವರಿಗೆ ಅರ್ಹತಾ ಪ್ರಮಾಣ ಪತ್ರ ನೀಡುವ ಮೂಲಕ ಅಧಿಕಾರಿಗಳು ಈ ಭಾಗದ ಅಭ್ಯರ್ಥಿಗಳಿಗೆ ಮೋಸ ಮಾಡುತ್ತಿರುವುದು ಖಂಡನೀಯ.
ಅಲ್ಲದೇ ಪ್ರಮಾಣ ಪತ್ರ ನಿಗದಿಗೆ ೩೦ ದಿನಗಳನ್ನು ನಿಗದಿಪಡಿಸಿದ್ದು, ಅದಾದ ನಂತರ ಬಂದರೂ ಪ್ರಮಾಣ ಪತ್ರಗಳು ಇನ್ನೂ ಸಿದ್ಧವಾಗಿಲ್ಲ ಇನ್ನೂ ಒಂದು ವಾರ ಬಿಟ್ಟು ಬನ್ನಿ, ಎರಡು ದಿನ ಬಿಟ್ಟು ಬನ್ನಿ ಎಂದು ಸಾಗ ಹಾಕುತ್ತಾರೆ. ಅಭ್ಯರ್ಥಿಗಳು ಸ್ವಲ್ಪ ಗಲಾಟೆ ಮಾಡಿದರೆ ನೀವು ಏನೂ ಮಾತನಾಡಬೇಡಿ ತಹಶೀಲ್ದಾರರಿಗೆ ಹೋಗಿ  ಹೇಳಿ ಎಂಬ ದುರಹಂಕಾರದ ಮಾತುಳನ್ನು ಆಡುತ್ತಿರುವುದು ಗಮನಕ್ಕೆ ಬಂದಿದೆ. ಇಷ್ಟೆಲ್ಲಾ ನಡೆದರೂ ಕೂಡ ತಹಶೀಲದಾರರ ಗಮನಕ್ಕೂ ತಂದರೂ ಕೂಡ ಯಾವುದೇ ಬದಲಾವಣೆಯಾಗದೇ ಇರುವುದು ಅಧಿಕಾರಿಗಳ ಹಾಗೂ ಏಜೆಂಟರುಗಳ ನಡುವಿನ ವ್ಯವಹಾರಕ್ಕೆ ಸಾಕ್ಷಿಯಾಗಿದೆ.
ಆದ್ದರಿಂದ  ಈ ಕೂಡಲೇ ೩೭೧ ಜೆ ಅರ್ಹತಾ ಪ್ರಮಾಣ ಪತ್ರ ನೀಡುವದಕ್ಕೆ ಪ್ರತ್ಯೇಕ ವಿಭಾಗ ಹಾಗೂ ಅಧಿಕಾರಿಗಳನ್ನು ನೇಮಿಸಿ ವೃಥಾ ಅಭ್ಯರ್ಥಿಗಳನ್ನು ಅಲೆದಾಡಿಸದೇ ಆದಷ್ಟು ಬೇಗನೇ ಪ್ರಮಾಣ ಪತ್ರ ನೀಡುವಲ್ಲಿ ವಿಶೇಷ ಗಮನ ಹರಿಸಬೇಕು. ಅಲ್ಲದೇ ಕೆಲ ಅಧಿಕಾರಿಗಳು ಅರ್ಹತಾ ಪ್ರಮಾಣ ಪತ್ರ ನೀಡುವಾಗ ಹಳ್ಳಿಗಳಿಂದ ಹಾಗೂ ನಗರ ಪ್ರದೇಶದ ಅಭ್ಯರ್ಥಿಗಳಿಂದ ರೂ. ೫೦ ರಿಂದ ೧೦೦, ೨೦೦ ರಂತೆ ದುಡ್ಡು ಪಡೆಯುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಇಂದು ಪ್ರತಿಭಟನೆ ಮೂಲಕ ಮನವಿ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ೩೭೧ ಜೆ ಫಲಾನುಭಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು  ರಮೇಶ ತುಪ್ಪದ, ಮಂಜುನಾಥ ಅಂಗಡಿ,   ಶಿವಕುಮಾರ ಕುಕನೂರು, ಸಂತೋಷ ದೇಶಪಾಂಡೆ ವಿನಂತಿಸಿಕೊಂಡಿದ್ದಾರೆ
ವಿನಂತಿ.

Leave a Reply