ಜಾತ್ಯತೀತ ಪಕ್ಷಗಳ ಏಕತೆ ಅನಿವಾರ್ಯ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ನಿರೀಕ್ಷಿಸಿದಂತೆಯೇ ಬಂದಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸಿದೆ. ಇದು ಬಿಜೆಪಿ ವಿಜಯ ಎನ್ನುವುದಕ್ಕಿಂತ ನರೇಂದ್ರ ಮೋದಿಯ ವಿಜಯವೆಂದು ವ್ಯಾಖ್ಯಾನಿಸುವುದು ಸೂಕ್ತವಾಗುತ್ತದೆ. 70ರ ದಶಕದಲ್ಲಿ ಇಂತಹದ್ದೇ ವ್ಯಕ್ತಿ ಪ್ರಧಾನ ರಾಜಕೀಯ ನಿರ್ಣಾಯಕವಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಿಂದಲೇ ಅವರ ಪಕ್ಷದ ಆರಿಸಿ ಬರುತಿತ್ತು. ಇಂದಿರಾ ಅಂದರೆ ಇಂಡಿಯಾ ಎಂದು ಹಿರಿಯ ಕಾಂಗ್ರೆಸ್ ನಾಯಕ ದೇವಕಾಂತ್ ಬರುವಾ ಹೇಳಿದ್ದರು. ಈಗ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಮೋದಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆಗ ಅಂದರೆ 60-70ರ ದಶಕ ದಲ್ಲಿ ಕಾಂಗ್ರೆಸ್ ಮತ್ತು ಇಂದಿರಾ ಪ್ರಾಬಲ್ಯದಿಂದ ರೋಸಿ ಹೋಗಿದ್ದ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಕಾಂಗ್ರೆಸ್ ವಿರೋಧಿ ಪಕ್ಷಗಳನ್ನೆಲ್ಲ ಒಂದುಗೂಡಿಸಿ 1967ರ ಚುನಾವಣೆಯಲ್ಲಿ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲುವಂತೆ ಮಾಡಿದರು. ಆಗಿನ ಕಾಂಗ್ರೆಸ್ ವಿರೋಧಿ ರಂಗದಲ್ಲಿ ಅಂದಿನ ಜನಸಂಘ ಮತ್ತು ಕಮ್ಯುನಿಸ್ಟ್ ಪಕ್ಷಗಳು ಜೊತೆಗೂಡಿದ್ದವು. ಅದರ ಪರಿಣಾಮವಾಗಿ ಜನಸಂಘ ಅಂದರೆ ಸಂಘ ಪರಿವಾರ ನಿಧಾನವಾಗಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡು ಈಗ ದೇಶವನ್ನು ಆಳುವ ಸ್ಥಿತಿಗೆ ಬಂದಿದೆ. ಲೋಹಿಯಾ ಇಂದು ಬದುಕಿದ್ದರೆ, ತಮ್ಮ ತಪ್ಪಿಗೆ ಇಂದು ಪಶ್ಚಾತಾಪ ಪಡುತ್ತಿದ್ದರು. ಬಿಜೆಪಿ ಮತ್ತು ಮೋದಿ ವಿರೋಧಿ ಪಕ್ಷಗಳು ಒಂದಾಗಬೇಕು ಎಂದು ಕರೆಕೊಡುತ್ತಿದ್ದರು.
ಅಂತಹದ್ದೇ ಪರಿಸ್ಥಿತಿ ಈಗ ನಿರ್ಮಾಣ ವಾಗಿದೆ. ಮೋದಿ ಅಂದರೆ ಸಂಘ ಪರಿವಾರದ ವಿರೋಧಿ ಶಕ್ತಿಗಳೆಲ್ಲ ಒಂದೇ ವೇದಿಕೆಗೆ ಬರಬೇಕಾಗಿದೆ. ಇಂತಹ ಜಾತ್ಯತೀತ ಏಕತೆಯೊಂದೇ ಬಿಜೆಪಿಯ ಮುನ್ನಡೆಯನ್ನು ತಡೆಯಲು ಸಾಧ್ಯ. 3 ತಿಂಗಳ ಹಿಂದೆ ಬಿಹಾರ ಮತ್ತು ಉತ್ತರಪ್ರದೇಶ ವಿಧಾನಸಭಾ ಉಪಚುನಾವಣೆಗಳು ನಡೆದಾಗ, ಲಾಲೂ ಪ್ರಸಾದ ಯಾದವ್ ಬಿಹಾರದಲ್ಲಿ ನಿತೀಶ್‌ಕುಮಾರ್‌ರ ಸಂಯುಕ್ತ ಜನತಾ ದಳ, ಕಾಂಗ್ರೆಸ್ ಪಕ್ಷಗಳನ್ನು ಜೊತೆಗೆ ಕಟ್ಟಿಕೊಂಡು ಮೋದಿ ನೇತೃತ್ವದ ಬಿಜೆಪಿ ಎದುರಿಸಿದ ಪರಿಣಾಮವಾಗಿ ಆ ರಾಜ್ಯದಲ್ಲಿ ಪರಾಭವಗೊಂಡಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದು ಗೂಡಿ ಬಿಜೆಪಿಯನ್ನು ಎದುರಿಸಿದ್ದರೆ, ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೆ ಈ ಪಕ್ಷಗಳಲ್ಲಿ ಒಮ್ಮತ ಮೂಡಲಿಲ್ಲ. ಅದರ ಪರಿಣಾಮವಾಗಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತ ಗಳಿಸಿರದಿದ್ದರೂ ಶಿವಸೇನೆ ಬೆಂಬಲದಿಂದ ಕೊನೆ ಗಳಿಗೆಯಲ್ಲಿ ಅದು ಸರಕಾರ ರಚಿಸುವುದು ಖಚಿತ. ಕೇಂದ್ರದ ಬಿಜೆಪಿ ಸರಕಾರದ ಬಗ್ಗೆ ಜನರಿಗೆ ಭ್ರಮನಿರಸನ ಉಂಟಾಗಲು ಇನ್ನಷ್ಟು ಕಾಲಾವಕಾಶ ಬೇಕು. ಒಂದೊಮ್ಮೆ ಭ್ರಮನಿರಸನವಾದರೆ, ಮತ್ತೆ ಜನರನ್ನು ಭ್ರಮಾಲೋಕದಲ್ಲಿ ಮುಳುಗಿಸಲು ಆರೆಸ್ಸೆಸ್ ತನ್ನ ಕಾರ್ಯಸೂಚಿಯನ್ನು ಸಿದ್ಧಪಡಿಸಿದೆ. ಹೀಗಾಗಿ ಈ ವಿಷವರ್ತುಲ ದಿಂದ ದೇಶಕ್ಕೆ ಮುಕ್ತಿಯಿಲ್ಲವೇನೋ ಎಂದು ಒಮ್ಮಿಮ್ಮೆ ಆತಂಕ ಉಂಟಾ ಗುತ್ತದೆ. ಕೇಂದ್ರ ನರೇಂದ್ರ ಮೋದಿ ಸರಕಾರ ಯಾರ ಹಿತಾಸಕ್ತಿ ರಕ್ಷಿಸುತ್ತಿದೆಯೆಂದು ಬಟಾಬಯಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತದ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರುತ್ತೇನೆಂದು ಹೇಳಿ ಕೊಂಡಿದ್ದರು. ಈ ಕಪ್ಪುಹಣದಿಂದ ದೇಶದ ಪ್ರತಿಯೊಂದು ಗ್ರಾಮಕ್ಕೆ ಕುಡಿಯುವ ನೀರು ಮತ್ತು ಶೈಕ್ಷಣಿಕ ಸೌಲಭ್ಯ ಒದಗಿಸುವುದಾಗಿ ಯೋಗದ ವ್ಯಾಪಾರಿ ಬಾಬಾ ರಾಮದೇವ್ ಪರಾಕು ಹೇಳಿದ್ದರು. ಆದರೆ ಈಗ ಏನಾಗಿದೆ. ವಿದೇಶಿ ಬ್ಯಾಂಕುಗಳಲ್ಲಿ ಕಾಳಧನದ ಖಾತೆಯನ್ನು ಹೊಂದಿರುವ ವ್ಯಕ್ತಿಗಳ ಹೆಸರು ಬಹಿರಂಗಪಡಿಸುವುದು ಸಾಧ್ಯವಿಲ್ಲ ವೆಂದು ಮೋದಿ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ. ಬೇರೆ ರಾಷ್ಟ್ರಗಳೊಂದಿಗೆ ಭಾರತ ಮಾಡಿ ಕೊಂಡಿರುವ ಒಪ್ಪಂದದ ಅನ್ವಯ ವಿದೇಶಿ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಧನಿಕರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ವೆಂದು ನೆಪ ಹೇಳಿದರು. ಇದರಿಂದ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರುವುದಾಗಿ ಹೇಳಿದ ನರೇಂದ್ರ ಮೋದಿ ಈಗ ಕಾಳಧನ ಹೊಂದಿದವರ ಹೆಸರು ಬಹಿರಂಗಪಡಿಸುವುದಿಲ್ಲ ಎನ್ನುತ್ತಿದ್ದಾರೆ. ಕಪ್ಪು ಹಣ ಹೊಂದಿದವರ ಹೆಸರನ್ನು ಬಹಿರಂಗ ಪಡಿಸುವುದು ಬಿಜೆಪಿ, ಆರೆಸ್ಸೆಸ್‌ಗೂ ಬೇಕಾಗಿಲ್ಲ. ಸಂಘ ಪರಿವಾರಕ್ಕೆ ವಿದೇಶದಿಂದ ಹರಿದು ಬರುತ್ತಿರುವ ದೇಣಿಗೆಯಲ್ಲಿ ಈ ಕಪ್ಪುಹಣವೂ ಸೇರಿದೆ. ಕಪ್ಪು ಹಣ ವಿದೇಶದಲ್ಲಿ ಮಾತ್ರವಿಲ್ಲ. ಈ ದೇಶದ ಪ್ರತಿಯೊಬ್ಬ ಮಠಾಧೀಶರಲ್ಲಿ ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣವಿದೆ. ಹಿಂದಿನ ರಾಜಕಾರಣಿಗಳಂತೆ ಈಗಿನ ರಾಜಕಾರಣಿಗಳು ವಿದೇಶಿ ಬ್ಯಾಂಕು ಗಳಲ್ಲಿ ಕಪ್ಪು ಹಣ ಇಡುವುದಿಲ್ಲ. ಅದಕ್ಕಿಂತ ಸುರಕ್ಷಿತವಾದ ಮಠಾಧೀಶರ ಬಳಿ ತಮ್ಮ ಕಪ್ಪು ಹಣ ಇಡುತ್ತಾರೆ. ಕರ್ನಾಟಕದ ಹಿರಿಯ ರಾಜಕಾರಣಿಯೊಬ್ಬರು ಮಠಾಧೀಶವೊಬ್ಬರ ಬಳಿ ಕೋಟ್ಯಂತರ ರೂಪಾಯಿ ಇಟ್ಟು ಹಣೆಗೆ ತಿರುಪತಿ ನಾಮ ಬಳಿಸಿ ಕೊಂಡಿದ್ದರು. ಸರ್ವಸಂಘ ಪರಿತ್ಯಾಗಿ ಗಳೆಂದೇ ಹೇಳಿಕೊಳ್ಳುವ ಈ ಸನ್ಯಾಸಿಗಳು ರಾಜಕಾರಣಿಗಳ, ಕಾರ್ಪೊರೇಟ್ ಧಣಿಕರ ಕಪ್ಪು ಹಣವನ್ನು ಜೋಪಾನ ಮಾಡುವ ದೇಶಿ ಸ್ವಿಸ್ ಬ್ಯಾಂಕ್ ಆಗಿದ್ದಾರೆ. ಹೀಗೆ ಜನದ್ರೋಹದ ದಾರಿಯಲ್ಲಿ ಸಾಗಿ ಜನರಲ್ಲಿ ಹುಸಿ ನಂಬಿಕೆ ಸೃಷ್ಟಿಸುತ್ತಿರುವ ಮೋದಿ ಸರಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಬಡ ಕಾರ್ಮಿಕರ ಮೇಲೆ ಚಪ್ಪಡಿಕಲ್ಲು ಎಳೆಯಲು ಮುಂದಾಗಿದೆ. ಬರಲಿ ರುವ ದಿನಗಳಲ್ಲಿ ಜನಸಾಮಾನ್ಯರ ಬದುಕನ್ನು ಸರ್ವನಾಶ ಮಾಡುವ, ಕಾಡಿನಲ್ಲಿ ನೆಮ್ಮದಿ ಯಾಗಿರುವ ಆದಿವಾಸಿಗಳನ್ನು ಬೀದಿಪಾಲು ಮಾಡುವ ಮತ್ತು ಈ ದೇಶದ ಸಕಲ ಸಂಪತ್ತನ್ನ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಬಂಡವಾಳಗಾರರ ಮಡಿಲಿಗೆ ಹಾಕುವ ನಿಟ್ಟಿನಲ್ಲಿ ಮೋದಿ ಸರಕಾರ ಹೆಜ್ಜೆಯಿಡಲಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಹಾಗೂ ಇತರ ಜಾತ್ಯತೀತ ಪಕ್ಷಗಳು ಒಂದುಗೂಡಿ ಮೋದಿ ನೇತೃತ್ವದ ಫ್ಯಾಸಿಸ್ಟ್ ಅಪಾಯವನ್ನು ಎದುರಿಸಬೇಕಾ ಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನ ಜಾಗತೀಕರಣ ಪರವಾದ ನೀತಿಯನ್ನು ಕೈ ಬಿಟ್ಟು ಗಾಂಧಿ, ನೆಹರೂ ತೋರಿಸಿದ ದಾರಿ ಯಲ್ಲಿ ಸಾಗಬೇಕು. ಎಡಪಕ್ಷಗಳು ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ವಿದಾಯ ಹೇಳಬೇಕು. ಶರದ್‌ಯಾದವ್ ಹೇಳಿದಂತೆ ರಾಷ್ಟ್ರಕ್ಕೆ ಗಂಡಾಂತರ ಎದುರಾ ದಾಗ, ಸಮಾನ ಮನಸ್ಕ ಸಮಾಜವಾದಿಗಳು ಒಂದೇ ವೇದಿಕೆಗೆ ಬರಬೇಕಾಗಿದೆ. ಅದೊಂದೇ ಉಳಿದ ದಾರಿ.
-varthabaharati
Please follow and like us:
error