ಅತ್ತ ಸಾಮೂಹಿಕ ರಾಜಿನಾಮೆ ಇತ್ತ `ಸೂಪರ್ ಸೀಡ್’ ಮಾಡುವ ಚಿ೦ತನೆ

ಬೆಂಗಳೂರು: ಅತ್ತ ಬೆಳಗಾವಿಯಲ್ಲಿ ಕನ್ನಡ ಪರ ಪಾಲಿಕೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದರೆ ಇತ್ತ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು `ಸೂಪರ್‌ಸೀಡ್` ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ.
ರಾಜ್ಯೋತ್ಸವ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ `ಕರಾಳ ದಿನ` ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗವಹಿಸುವ ಮೂಲಕ ರಾಜ್ಯದ ಆಶಯಗಳಿಗೆ ವಿರುದ್ಧ ವಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಬೆಳಗಾವಿ ಮೇಯರ್ ಮಂದಾ ಬಾಳೇಕುಂದ್ರಿ ಮತ್ತು ಉಪ ಮೇಯರ್ ರೇಣು ಕಿಲ್ಲೇಕರ ಅವರ ಸದಸ್ಯತ್ವ ರದ್ದು ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಕಾನೂನು ಇಲಾಖೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ನೀಡಿ, ಸದಸ್ಯತ್ವ ರದ್ದು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಇಷ್ಟೇ ಅಲ್ಲದೆ, ಅಗೌರವ ಸೂಚಿಸಿದರು ಎಂಬ ಕಾರಣಕ್ಕೆ ಮಹಾನಗರ ಪಾಲಿಕೆಯನ್ನು ಸೂಪರ್‌ ಸೀಡ್ ಮಾಡಲು ಬರುವುದಿಲ್ಲ ಎಂದು ಕಾನೂನು ತಜ್ಞರು ಮಂಗಳವಾರ ತಮ್ಮ ಅಭಿಪ್ರಾಯ ವನ್ನು ಸರ್ಕಾರಕ್ಕೆ ತಿಳಿಸಿದ್ದಾರೆ.
ಈ ಕಾರಣದಿಂದ ನಗರಾಭಿವೃದ್ಧಿ ಸಚಿವ ಎಸ್‌ಸುರೇಶ್‌ಕುಮಾರ್ ಅವರು ಬುಧವಾರ ಬೆಳಿಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದು, ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಇದ್ದುಕೊಂಡೇ ರಾಜ್ಯದ ಆಶಯಗಳಿಗೆ ವಿರುದ್ಧವಾಗಿರುವವರಿಗೆ ಸರಿಯಾದ ಪಾಠ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಹೀಗಾಗಿ ಈ ಕಾರಣಗಳಲ್ಲದೆ, ಬೆಳಗಾವಿ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಲು ಇತರ ಅನೇಕ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಂಡು ಎಂ.ಇ.ಎಸ್ ಬೆಂಬಲಿಗರಿಗೆ ಪಾಠ ಕಲಿಸಲು ಸರ್ಕಾರ ಮುಂದಾಗಿದೆ.
ಬೆಳಗಾವಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ. ಇದಕ್ಕೆ ಅಲ್ಲಿನ ದುರಾಡಳಿತವೇ ಕಾರಣ. ಇದನ್ನು ಮುಂದಿಟ್ಟುಕೊಂಡು ಸೂಪರ್‌ಸೀಡ್ ಮಾಡಿದರೆ ಹೇಗೆ ಎಂಬ ಚಿಂತನೆಯಲ್ಲಿ ಸರ್ಕಾರ ಇದೆ.
ಈ ನಡುವೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಎಂ.ಶಿವಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದ್ದು, ಅವರ ವರದಿ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್, ಕಾನೂನು ಇಲಾಖೆ ಕಾರ್ಯದರ್ಶಿ ಸಿದ್ಧಲಿಂಗೇಶ್, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ವೈ.ಎಸ್.ಪಾಟೀಲ್ ಸೇರಿದಂತೆ ಇತರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11.30ಕ್ಕೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಲಿದೆ. ಕನ್ನಡಕ್ಕೆ ಅಗೌರವ ಸೂಚಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆ ಅಥವಾ ಇಡೀ ಪಾಲಿಕೆಯನ್ನೇ `ಸೂಪರ್‌ಸೀಡ್` ಮಾಡಬೇಕೆ ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ರಾಜೀನಾಮೆ ಪತ್ರಕ್ಕೆ 18 ಸದಸ್ಯರ ಸಹಿ
ಬೆಳಗಾವಿ ವರದಿ: ಕನ್ನಡ ವಿರೋಧಿ ಚಟುವಟಿಕೆ ನಡೆಸಿದ ಬೆಳಗಾವಿ ಮೇಯರ್ ಹಾಗೂ ಉಪ ಮೇಯರ್ ಸದಸ್ಯತ್ವ ರದ್ದತಿಗೆ ಒತ್ತಾಯಿಸಿ ಆಡಳಿತ ಪಕ್ಷದ `ಸರ್ವಭಾಷಿಕ ಸಮ ವಿಚಾರ ವೇದಿಕೆ`ಯ 18 ಸದಸ್ಯರು ಸಾಮೂಹಿಕ ರಾಜೀನಾಮೆ ಪತ್ರಕ್ಕೆ ಮಂಗಳವಾರ ಸಹಿ ಮಾಡಿದ್ದಾರೆ.
ಕನ್ನಡ ವಿರೋಧಿ ನೀತಿ ಅನುಸರಿಸಿದ ಮೇಯರ್ ಮಂದಾ ಬಾಳೇಕುಂದ್ರಿ ಹಾಗೂ ಉಪ ಮೇಯರ್ ರೇಣು ಕಿಲ್ಲೇಕರ ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದರಿಂದ ಬೇಸರಗೊಂಡಿರುವ ವೇದಿಕೆಯ 21 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿ, ಶಾಸಕ ಫಿರೋಜ್ ಸೇಠ್ ಮನೆಯಲ್ಲಿ ಮಂಗಳವಾರ ಸಭೆ ನಡೆಸಿದರು. ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಲಾಯಿತು.
`ಈಗಾಗಲೇ 18 ಮಂದಿ ಸಹಿ ಹಾಕಿದ್ದಾರೆ. ಕನ್ನಡ ಸದಸ್ಯರಾದ ಬಸಪ್ಪ ಸಿದ್ದಪ್ಪ ಚಿಕ್ಕಲದಿನ್ನಿ, ನಟರಾಜ ಲೋಹಾರ, ಯಲ್ಲಪ್ಪ ಕುರುಬರ ಅವರೂ ರಾಜೀನಾಮೆ ಪತ್ರಕ್ಕೆ ಸಹಿ ಹಾಕುವುದಾಗಿ ಹೇಳಿದ್ದಾರೆ. ಈ ಮೂವರೂ ಸಹಿ ಹಾಕಿದ ತಕ್ಷಣ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಲಾಗುವುದು` ಎಂದು ವೇದಿಕೆಯ ಹಿರಿಯ ಸದಸ್ಯ, ಮಾಜಿ ಮೇಯರ್ ಎನ್.ಬಿ. ನಿರ್ವಾಣಿ `ಪ್ರಜಾವಾಣಿ`ಗೆ ತಿಳಿಸಿದರು.
ಈ ನಡುವೆ, ಮೇಯರ್ ಹಾಗೂ ಉಪ ಮೇಯರ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಮಂಗಳವಾರ 3ನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ವರು ಕಾರ್ಯಕರ್ತರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Leave a Comment