ಆರೋಗ್ಯ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ

– ಲಕ್ಷ್ಮಣ ಸವದಿ

ಕೊಪ್ಪಳ ಡಿ. : ಬಡವರ, ದೀನದಲಿತರ ಆರೋಗ್ಯ ಸುಧಾರಣೆಗೆ ೧೦೮ ಆಂಬುಲೆನ್ಸ್ ಸೇವೆ, ವಾಜಪೇಯಿ ಆರೋಗ್ಯ ಶ್ರೀ ಮುಂತಾದ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಹೇಳಿದರು.
  ಯಲಬುರ್ಗಾ ತಾಲೂಕು ಮಂಗಳೂರು ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗಿರುವ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
  ಮಂಗಳೂರು ಗ್ರಾಮದಲ್ಲಿ ೨. ೪೪ ಕೋಟಿ ರೂ.ಗಳ ವೆಚ್ಚದಲ್ಲಿ ೩೦ ಹಾಸಿಗೆಗಳ ನೂತನ ಸಮುದಾಯ ಆರೋಗ್ಯ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಲಾಗುತ್ತಿದೆ.  ಈ ಭಾಗದಲ್ಲಿ ಆಸ್ಪತ್ರೆ ಕಟ್ಟಡಗಳು ನಿರ್ಮಾಣವಾಗುತ್ತಿವೆ.  ಆದರೆ ತಜ್ಞ ವೈದ್ಯರ ಕೊರತೆ ಇಡೀ ರಾಜ್ಯಾದ್ಯಂತ ಕಾಡುತ್ತಿದೆ.  ಆದರೂ ಸರ್ಕಾರ ಬಡವರ, ದೀನದಲಿತರ ಆರೋಗ್ಯ ಸೇವೆಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.  ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ತಮ್ಮ ಜಮೀನನ್ನು ದಾನ ಮಾಡಿದ ರೈತ ಈಶಪ್ಪ ಹೂಗಾರ ಅವರ ಸೇವಾ ಮನೋಭಾವ ಶ್ಲಾಘನೀಯವಾಗಿದೆ.  ಈ ನಾಡಿನ ರೈತ ಸ್ವಾವಲಂಬಿಯಾಗಬೇಕು, ಆತನ ಬದುಕು ಹಸನಾಗಬೇಕಾದಲ್ಲಿ, ಸರ್ಕಾರದ ಸೌಲಭ್ಯಗಳು ಸಾರ್ವಜನಿಕರ ಮನೆಬಾಗಿಲಿಗೆ ತಲುಪುವಂತಾಗಬೇಕು.  ಸರ್ಕಾರ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ದರಿಸಿದೆ.  ರೈತರು ಬೆಳೆಯುವ ಬೆಳೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.  ಬೆಳೆಗಳ ದರ ಕುಸಿದ ಸಂದರ್ಭದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಸ್ಥಾಪಿಸಿ, ಸರ್ಕಾರವೇ ರೈತರಿಂದ ಬೆಳೆ ಖರೀದಿಸುತ್ತಿದೆ.  ಬೆಂಬಲ ಬೆಲೆ ಯೋಜನೆಯಡಿ ಡಿ. ೨೩ ರಿಂದ ಈರುಳ್ಳಿ ಖರೀದಿಸಲು ಕೊಪ್ಪಳದ ಟಿಎಪಿಸಿಎಂಎಸ್ ಆವರಣದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.  ಉತ್ತಮ ಗುಣಮಟ್ಟದ ಈರುಳ್ಳಿಗೆ ಪ್ರತಿ ಕ್ವಿಂಟಾಲಿಗೆ ರೂ. ೭೬೦ ರಂತೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ.  ಮುಂದಿನ ನಾಲ್ಕು ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯಯುತವಾಗಿ ದೊರಕಬೇಕಾದ ನೀರಾವರಿ ಯೋಜನೆಯನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ.  ಮುಂದಿನ ವರ್ಷ ಸರ್ಕಾರಿ ಪದವಿಪೂವ್ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜುಗಳನ್ನು ನೂತನವಾಗಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ.  ಜನಪ್ರತಿನಿಧಿಗಳು ತಮ್ಮ ಪಕ್ಷ ಬೇಧ ಮರೆತು, ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಮನವಿ ಮಾಡಿದರು.
  ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ ಅವರು ಮಾತನಾಡಿ, ಮಂಗಳೂರಿನಲ್ಲಿ ಉದ್ಘಾಟನೆಗೊಂಡಿರುವ ೩೦ ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ಸದ್ಬಳಕೆಯಾಗಬೇಕಿದ್ದಲ್ಲಿ, ತಜ್ಞ ವೈದ್ಯರು, ಸಿಬ್ಬಂದಿಗಳ ಅಗತ್ಯವಿದೆ.  ಈ ದಿಸೆಯಲ್ಲಿ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು.  ಯಾವುದೇ ಕಾಮಗಾರಿಗಳ ಗುಣಮಟ್ಟ ಕಳಪೆಯಾದಲ್ಲಿ ಅದಕ್ಕೆ ಜನಪ್ರತಿನಿಧಿಗಳೆ ನೇರ ಹೊಣೆ ಹೊರಬೇಕಾಗುತ್ತದೆ.  ಕೃಷ್ಣ- ಬಿ ಸ್ಕೀಂ ಯೋಜನೆಯಡಿ ಪದೇ ಪದೇ ಬರಗಾಲಕ್ಕೆ ತುತ್ತಾಗುವ ಈ ಭಾಗದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
  ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ತೋಟದ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು, ಮಂಗಳೂರು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಅಗತ್ಯವಾಗಿ ಬೇಕಾಗಿರುವ ಯೋಜನೆಗಳ ಈಡೇರಿಕೆಗಾಗಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.  
  ಕಾರ್ಯಕ್ರಮದಲ್ಲಿ  ಗಣ್ಯರಾದ ನವೀನ್ ಗುಳಗಣ್ಣವರ್, ತಾಲೂಕಾ ಪಂಚಾಯತಿ ಅಧ್ಯಕ್ಷೆ ನೀಲಮ್ಮ ಕೊಟ್ರಪ್ಪ ಜವಳಿ, ಉಪಾಧ್ಯಕ್ಷ ಹೊಳೇಗೌಡ ಪೊಲೀಸ್ ಪಾಟೀಲ್, ತಾ.ಪಂ. ಸದಸ್ಯೆ ಸುಮಂಗಲಾ ಉಪ್ಪಾರ, ಮಂಗಳೂರು ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಚೆಟ್ಟಿ, ಉಪಾಧ್ಯಕ್ಷ ಮಹೇಶ್ ಗೂಗಿ, ಗಣ್ಯರಾದ ಶಿವಶರಣಪ್ಪ ಗೌಡ ಪಾಟೀಲ, ಸಂಗಪ್ಪ ವಕ್ಕಳದ, ಡಾ. ರಾಂಪೂರ, ಎ.ಪಿಎಂಸಿ ಉಪಾಧ್ಯಕ್ಷ ಶರಣಯ್ಯ, ಮುಂತಾದ ಗಣ್ಯರು ಭಾಗವಹಿಸಿದ್ದರು. 
Please follow and like us:
error