ಶಿವಯೋಗಿ ಸಿದ್ಧರಾಮರು ಸಮಾಜ ಮುಖಿ ಕಾಯಕ ಯೋಗಿ- ರಾಘವೇಂದ್ರ ಹಿಟ್ನಾಳ್

ಕೊಪ್ಪಳ ಜ. ೧೫ (ಕ ವಾ) ಕ್ರಾಂತಿಕಾರಿ ಧೋರಣೆಗಳಿಂದ ಸಮಾಜ ತಿದ್ದುವ ಕಾರ್ಯ ಮಾಡುವುದರ ಜೊತೆಗೆ ಸಮಾಜ ಮುಖಿ ಕಾಯಕ ಮಾಡುವುದರ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಬಣ್ಣಿಸಿದರು.
     ಜಿಲ್ಲಾಡಳಿತ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ವಿಚಾರಧಾರೆಯನ್ನು ಹೊಂದಿದ್ದ ಶಿವಯೋಗಿ ಸಿದ್ಧರಾಮರು, ತಮ್ಮ ಕ್ರಾಂತಿಕಾರಿ ಧೋರಣೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು.   ಬೋವಿ ಜನಾಂಗದವರು ಶ್ರಮ ಜೀವಿಗಳಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಸಿದ್ಧರಾಮರ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬಂದು, ಶಿಕ್ಷಣ, ರಾಜಕೀಯ ಇನ್ನಿತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು.  ಸಿದ್ಧರಾಮರ ಚಿಂತನೆಗಳನ್ನು ಅಳವಡಿಸಿಕೊಂಡು, ಅವರ ಕನಸುಗಳನ್ನು ಸಾಕಾರಗೊಳಿಸುವ ಹೊಣೆ ಇಂದಿನ ಸಮಾಜದ ಮುಖಂಡರ ಮೇಲಿದೆ.  ಸಕಾರ ಈಗಾಗಲೆ ಬೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಇದಕ್ಕೆ ಇತ್ತೀಚೆಗಷ್ಟೇ ರಾಜ್ಯಪಾಲರ ಅಂಕಿತವಾಗಿದೆ.  ನಿಗಮ ಶೀಘ್ರದಲ್ಲೇ ಪ್ರಾರಂಭಿಸಲು ಎಲ್ಲ ಸಹಕಾರ ನೀಡಲಾಗುವುದು.  ಕೈಯಿಂದ ಕಲ್ಲು ಒಡೆಯುವ ಬೋವಿ ಸಮುದಾಯದವರಿಗೆ ಕಲ್ಲುಗುಡ್ಡವನ್ನು ಕನಿಷ್ಟ ೩ ಎಕರೆ ಗುತ್ತಿಗೆ ನೀಡುವಂತಹ ಯೋಜನೆಗೆ ಈಗಾಗಲೆ ಸಂಪುಟ ಅನುಮೋದನೆ ನೀಡಿದ್ದು, ಶೀಘ್ರ ಕಾರ್ಯರೂಪಕ್ಕೆ ಬರಲಿದೆ. ಸಮಾಜಗಳನ್ನು ಒಡೆಯುವ ಕಾರ್ಯವನ್ನು ಕಾಣದ ಕೈಗೊಳು ಯತ್ನಿಸುತ್ತಿವೆ.  ಆದರೆ ಸಂಘಟನೆಯ ಮೂಲಕವೇ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಾವು ತೋರಿಸಬೇಕಿದೆ.  ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು, ಬೋವಿ ಸಮುದಾಯ ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕರೆ ನೀಡಿದರು.
       ಸಿದ್ದರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದ ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಟಿ.ಎಸ್. ಬಸವರಾಜ ಅವರು, ಸಿದ್ದರಾಮೇಶ್ವರರ ವಚನಗಳು, ಮಾತಿಗಿಂತ ಕೃತಿ ಲೇಸು, ವಿದ್ಯೆ ಎಂಬುದು ಹಾಗೆಯೇ ಬರುವ ಸ್ವತ್ತು ಅಲ್ಲ, ಸತತ ಅಭ್ಯಾಸಿಗಳಿಗೆ ಮಾತ್ರ ಒಲಿಯುವಂಥಾದ್ದು, ಯಾರು ಜ್ಞಾನಿಗಳೋ, ಅವರೇ ಹಿರಿಯರು ಎಂಬ ತತ್ವಗಳನ್ನು ಬಿಂಬಿಸುತ್ತವೆ.  ಸಿದ್ದರಾಮೇಶ್ವರರ ಬದುಕಿನ ಚಿಂತನೆಗಳನ್ನು ನಾವು ಎಲ್ಲರಿಗೂ ಹಂಚಬೇಕಿದೆ.  ವೇದ-ಪುರಾಣಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ವಾಸ್ತವ ಬದುಕಿನತ್ತ ಗಮನ ನೀಡಬೇಕು.  ಜನರ ನಡುವೆ ಜನಪರವಾಗಿ ಬದುಕಿರುವಂತಹ ಗುಣ ಹೊಂದಿದವರು ಮಾತ್ರ ಸಾಮಾಜಿಕ ಹೊಣೆಗಾರಿಕೆ ಹೊಂದಲು ಸಾಧ್ಯ ಎಂಬುದು ಸಿದ್ದರಾಮರ ನಿಲುವಾಗಿತ್ತು.  ಅನ್ನದಾನ, ವಸ್ತ್ರದಾನದ ಮೂಲಕ ದಾನದ ಪರಂಪರೆಯನ್ನು ಹಾಗೂ ಸಾಮೂಹಿಕ ವಿವಾಹದ ಪರಿಕಲ್ಪನೆಯನ್ನು ಹುಟ್ಟುಹಾಕಿದ ಸಿದ್ದರಾಮೇಶ್ವರರು, ಸ್ವರ್ಗ-ನರಕದ ಪರಿಕಲ್ಪನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು ಎಂದರು.
      ಬೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಿಸಿದ್ದ ಸರ್ಕಾರ, ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ.  ನಿಗಮವು ಶೀಘ್ರ ಕಾರ್ಯರೂಪಕ್ಕೆ ಬಂದಲ್ಲಿ, ಬೋವಿ ಸಮಾಜವೂ ಕೂಡ ಆರ್ಥಿಕ ಸಬಲತೆ ಸಾಧಿಸಲು ಸಹಕಾರಿಯಾಗಲಿದೆ ಎಂದರು.
     ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ ಅವರು ಕಾರ್ಯಕ್ರಮದಉದ್ಘಾಟನೆ ನೆರವೇರಿಸಿದರು.  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ.
ಪ್ರವೀಣಕುಮಾರ್, ಡಿವೈಎಸ್‌ಪಿ ಶ್ರೀಕಾಂತ್ ಕಟ್ಟಿಮನಿ, ನಗರಸಭೆ ಉಪಾಧ್ಯಕ್ಷ ಬಾಳಪ್ಪ
ಬಾರಕೇರ, ಪೌರಾಯುಕ್ತ ರಮೇಶ್ ಪಟ್ಟೇದಾರ, ಜಿ.ಪಂ. ಸದಸ್ಯ ಜನಾರ್ಧನ ಹುಲಿಗಿ, ಬೋವಿ
ಸಮಾಜದ ಅಧ್ಯಕ್ಷ ಸತ್ಯಪ್ಪ ಬೋವಿ ಸೇರಿದಂತೆ ಸಮಾಜದ ಹಲವು ಗಣ್ಯರು ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದರು.
     ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಸ್ವಾಗತಿಸಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಜಿಲ್ಲೆಯ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
     ಸಮಾರಂಭಕ್ಕೂ ಪೂರ್ವದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದೊಂದಿಗಿನ ಅದ್ಧೂರಿ ಮೆರವಣಿಗೆಗೆ ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ ನೀಡಿದರು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
Please follow and like us:
error