ನೂರೆಂಟು ಪ್ರಶ್ನೆಯ ಉತ್ತರಕ್ಕಾಗಿ ದಿ.೧೩ ರಿಂದ ಹೋರಾಟ ಆರಂಭಿಸುವೆ : ಬಿ.ಶ್ರೀರಾಮುಲು

 ಕೊಪ್ಪಳ,ಮಾ.೦೪: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಅಭಿವೃದ್ದಿ ವಿರೋಧಿ ನೀತಿ ಖಂಡಿಸಿ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಒತ್ತಾಯಿಸಿ ನೂರೆಂಟು ಪ್ರಶ್ನೆಗೆ ಉತ್ತರಕ್ಕಾಗಿ ಹೋರಾಟ ಎಂಬ ವಿನೂತನ ಮಾದರಿಯ ಬೃಹತ್ ಹೋರಾಟ ಇದೇ ದಿ.೧೩ ಮತ್ತು ೧೪ ರಂದು ಗದಗನಲ್ಲಿ ಆರಂಭಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಬಿಎಸ್‌ಆರ್ ಸ್ವಾಭಿಮಾನಿ ಕರ್ನಾಟಕ ಪಕ್ಷದ ಮುಖ್ಯಸ್ಥ ಬಿ.ಶ್ರೀರಾಮುಲು ಹೇಳಿದರು.

ಅವರು ಶನಿವಾರ ರಾತ್ರಿ ಕೊಪ್ಪಳ ನಗರದಲ್ಲಿರುವ ಸೈಯ್ಯದ್ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಂ.ಸೈಯ್ಯದ್‌ರವರ ನಿವಾಸಕ್ಕೆ ಭೇಟಿ ಮಾಡಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಏರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತ, ಇದೇ ದಿ.೧೩ ಮತ್ತು ೧೪ ರಂದು ಉತ್ತರಕ್ಕಾಗಿ ಉಪವಾಸ ಸತ್ರಾಗ್ರಹ ಹಾಗೂ ಸರ್ಕಾರಕ್ಕೆ ೧೦೮ ಪ್ರಶ್ನೆಗಳು ಎಂಬ ವಿನೂತನ ಸತ್ಯಾಗ್ರಹ ನಡೆಸಲಾಗುವುದೆಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ಹೈದ್ರಬಾದ್ ಕರ್ನಾಟಕದಲ್ಲಲ್ಲದೇ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದರೂ ಕೂಡ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ದಿಗೆ ಸ್ಪಂಧಿಸಲಿಲ್ಲ. ಅದರಲ್ಲೂ ವಿಶೇಷವಾಗಿ ಹೈ.ಕ.-ಉ.ಕ.ಭಾಗ ಹಿನ್ನಡೆಗೆ ಬಿಜೆಪಿ ಪಕ್ಷದವರೇ ಕಾರಣ ಯಡಿಯೂರಪ್ಪಗೆ ನಮ್ಮ ಈ ಭಾಗ ಬೇಕಾಗಿಲ್ಲ. ಹೀಗಾಗಿ ನೂತನ ಪಕ್ಷವನ್ನು ಕಟ್ಟಿ ಈ ಭಾಗದ ಅಭಿವೃದ್ದಿಗೆ ಶ್ರಮಿಸುವೆ. ಹೈ.ಕ.ಭಾಗಕ್ಕೆ ೩೭೧ನೇ ಕಲಂ ತಿದ್ದುಪಡಿ ಮಾಡಬೇಕು, ಡಾ.ನಂಜುಂಡಪ್ಪ ವರದಿ ಜಾರಿಯಾಗಬೇಕು ಹೀಗೆ ಸುಮಾರು ೧೦೮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದ ಅವರು, ಬಿಜೆಪಿ ಪಕ್ಷದಲ್ಲಿ ನನಗೆ ಅನ್ಯಾಯವಾಗಿದೆ. ನನಗೆ ಆಗಿರುವ ಅನ್ಯಾಯ ಬೇರೆಯವರಿಗೆ ಆಗಬಾರದು ಎಂದ ಅವರು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವ ವಿಚಾರ ಸದ್ಯಕ್ಕಿಲ್ಲ. ನಮ್ಮ ಪಕ್ಷ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದರು.
ಬಿಎಸ್‌ಆರ್‌ಬಿ ಸ್ವಾಭಿಮಾನಿ ಪಕ್ಷಕ್ಕೆ ಬಹುತೇಕ ಎಲ್ಲಾ ಪಕ್ಷಗಳಿಂದ ಪ್ರಮುಖರು ನಮ್ಮ ಪಕ್ಷ ಕಟ್ಟಿದ ಬಳಿಕ ಸೇರಲಿದ್ದಾರೆ. ಅವರೆಲ್ಲರನ್ನು ಕರೆದುಕೊಂಡು ಈ ಭಾಗ ಹೆಚ್ಚು ಅಭಿವೃದ್ದಿ ಪಡಿಸುವುದಾಗಿ ಹೇಳಿದ ಅವರು, ಸತ್ಯ ಸುದ್ದಿ ಮಾಡಿದ ಪತ್ರಕರ್ತರ ಮೇಲೆ ಕೆಲ ನ್ಯಾಯವಾದಿಗಳು ಮಾಡಿರುವ ಹಲ್ಲೆ ಖಂಡನಾರ್ಹವಾಗಿದೆ. ಪತ್ರಕರ್ತರಿಗೆ ರಕ್ಷಣೆ ನೀಡುವ ಅಗತ್ಯವಿದೆ. ಆ ಘಟನೆ ರಾಜ್ಯದ ಬೆಂಗಳೂರಿನಲ್ಲಿ ನಡೆಯಲು ಸರ್ಕಾರದ ವಿಫಲತೆ ಮತ್ತು ಗೃಹ ಇಲಾಖೆಯ ವಿಫಲತೆಯೇ ಕಾರಣ. ಗೃಹ ಸಚಿವ ಆರ್.ಅಶೋಕರವರು ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಯಡಿಯೂರಪ್ಪನವರಿಗೆ ಒಂದು ಮಾಡುವಲ್ಲೇ ಕಾಲ ಹರಣ ಮಾಡುತ್ತಿದ್ದಾರೆ. ಹೀಗಾಗಿ ಗೃಹ ಇಲಾಖೆ ಮೇಲೆ ನಿಯಂತ್ರಣ ತಪ್ಪಿದಂತಾಗಿದೆ ಎಂದು ಟೀಕಿಸಿದರು.
ಕೆ.ಎಂ.ಸೈಯ್ಯದ್ ರವರು ಒಬ್ಬ ಉತ್ಸಾಹಿ ಯುವ ನಾಯಕರಾಗಿದ್ದು, ಅವರನ್ನು ತಮ್ಮ ಸ್ವಾಭಿಮಾನಿ ಪಕ್ಷಕ್ಕೆ ಆಹ್ವಾನಿಸಲಾಗಿದೆ. ಅವರು ಕೂಡ ನಮ್ಮೊಂದಿಗೆ ಇದ್ದುಕೊಂಡು ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಜನಸಾಮಾನ್ಯರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತಾ ಜನರ ಸಮಸ್ಯೆಗಳಿಗೆ ನೇರ ಸ್ಪಂಧನೆ ನೀಡುವಂತಹ ಕೆಲಸಕ್ಕೆ ಅವರು ಶ್ರಮಿಸುತ್ತಾರೆ ಎಂದು ಕೆ.ಎಂ.ಸೈಯ್ಯದ್‌ರವರ ಬಗ್ಗೆ ಮಾಜಿ ಸಚಿವ ಬಿ.ಶ್ರೀರಾಮುಲು ಆಶಾ ಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆ.ಎಂ.ಸೈಯ್ಯದ್ ಅಭಿಮಾನಿ ಬಳಗದ ಅಧ್ಯಕ್ಷ ಹಾಜಿ ಸೈಯ್ಯದ್ ಹಜರತ್ ಪಾಷಾ ಖಾದ್ರಿ, ಮುಖಂಡರಾದ ಪ್ರಭುಗೌಡ ಪಾಟೀಲ್, ಮಲ್ಲಣ್ಣ ಬತ್ತಿ, ಗುಡದಪ್ಪ ಭಾನಪ್ಪನವರ ಹಲಗೇರಿ, ಸಜ್ಜಾದ್‌ಸಾಬ ಕವಲೂರು, ಸಾದಿಕ್ ಅಹ್ಮದ್ ಸಾಬ ಪಟೇಲ್, ಸಾದಿಕ್ ಶೇಖ್, ವಾಹೀದ್ ಸೋಂಪೂರು, ಮಹಿಳಾ ಮುಖಂಡರಾದ ಖುತೀಜಾ ಬೇಗಂ ಮುನಿರಾಬಾದ್, ಶ್ಯಾಮೀದ್ ಸಾಬ ಮನಿಯಾರ್ ಮತ್ತಿತರರು ಪಾಲ್ಗೊಂಡಿದ್ದರು. ಅಲ್ಲದೇ ನಗರಸಭೆ ಸದಸ್ಯರಾದ ಎಂ.ಪಾಷಾ ಕಾಟನ್, ಮಾನ್ವಿ ಪಾಷಾ, ಜಾಕೀರ್ ಕಿಲ್ಲೇದಾರ ಸೇರಿದಂತೆ ಹಿರಿಯ ನ್ಯಾಯವಾದಿ ಪೀರಾಹುಸೇನ್ ಹೊಸಳ್ಳಿ ವಕೀಲರು ಮತ್ತಿತರರು ಅನೌಪಚಾರಿಕವಾಗಿ ಭೇಟಿ ಮಾಡಿ ಮಾಜಿ ಸಚಿವ ಬಿ.ಶ್ರೀರಾಮುಲು ರವರೊಂದಿಗೆ ಸ್ನೇಹ ಪೂರ್ವಕ ಭೇಟಿ ಮಾಡಿದರು.

Leave a Reply