ಸಾಹಿತ್ಯ ಸಮ್ಮೇಳನಗಳಿಗೂ ‘ಆಪರೇಷನ್ ಕಮಲ’ವೇ?

ಶತಮಾನಗಳ ಹಿಂದೆ,ಈ ನಾಡನ್ನು ರಾಜ ಮಹಾರಾಜರು ಆಳುತ್ತಿದ್ದಾಗ ಅವರು ತಮ್ಮನ್ನು ಹೊಗಳೆಲೆಂದೇ ಕೆಲವು ಹೊಗಳುಭಟ್ಟರನ್ನು ಆಸ್ಥಾನದಲ್ಲಿ ಇಟ್ಟುಕೊಳ್ಳುತ್ತಿದ್ದರಂತೆ. ಹಾಗೆಯೇ ಅನಧಿಕೃತವಾಗಿಯೂ ಆ ಆಸ್ಥಾನದಲ್ಲಿ ಕೆಲವು ಪ್ರಮುಖ ಹೊಗಳುಭಟ್ಟರು ಇರುತ್ತಿದ್ದರು. ಅವರನ್ನು ಆಸ್ಥಾನ ಕವಿಗಳೆಂದು ಕರೆಯುತ್ತಿದ್ದರು. ರಾಜರು ವೇತನಕೊಟ್ಟು ಅವರನ್ನು ಸಾಕುತ್ತಿದ್ದರು. ಈ ಆಸ್ಥಾನ ಕವಿಗಳು ಕಾವ್ಯ ಬರೆಯುವ ಹೆಸರಿನಲ್ಲಿ ಪರೋಕ್ಷವಾಗಿ ಆ ರಾಜನನ್ನು ಹೊಗಳುವ ಕೆಲಸವನ್ನು ಮಾಡುತ್ತಿದ್ದರು. ಆತನನ್ನು ಟೀಕಿಸುವುದಂತೂ ದೂರವೇ ಉಳಿಯಿತು ಬಿಡಿ. ಇಂತಹ ಸಂದರ್ಭದಲ್ಲೂ ಕೆಲವು ಕವಿಗಳು ರೂಪಕಗಳ ಮೂಲಕ, ಉಪಮೆಗಳ ಮೂಲಕ ರಾಜನನ್ನು ಟೀಕಿಸುವ ಪ್ರಯತ್ನವನ್ನು ಅಲ್ಲಲ್ಲಿ ಮಾಡಿದುದುಂಟು. ಅಂತಹ ಕವಿಗಳಲ್ಲಿ ಪಂಪನೂ ಒಬ್ಬ. ಹರಿಹರರಂತಹ ಕವಿಗಳು ಈ ರಾಜರ ಸಹವಾಸವೇ ಬೇಡ ಎಂದು ದೂರ ಉಳಿದು ಬಿಟ್ಟಿದ್ದರು. ಇದೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಇದೀಗ ಪ್ರಜಾಪ್ರಭುತ್ವದ ಕಾಲದಲ್ಲಿ ನಮ್ಮ ಸರಕಾರ, ಇಂತಹದೇ ಸರಕಾರಿ ಕವಿಗಳನ್ನು ನೇಮಕ ಮಾಡಿಕೊಳ್ಳುವ ಆಲೋಚನೆಯಲ್ಲಿದೆ. ಇತ್ತೀಚೆಗೆ ಸಚಿವ ಗೋವಿಂದ ಕಾರಜೋಳ ಸಾಹಿತಿಗಳ ಕುರಿತಂತೆ ವ್ಯಕ್ತಪಡಿಸಿದ ಅನಿಸಿಕೆ, ಈ ಹುನ್ನಾರಕ್ಕೆ ಪುಷ್ಟಿ ನೀಡುವಂತಿದೆ.
ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಕಾರದ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಕಾರಜೋಳ ಖಾರವಾಗಿ ಪ್ರತಿಕ್ರಿಯಿಸಿದ್ದರು. ‘‘ಸರಕಾರ ದಿಂದಲೇ ಹಣ ಪಡೆದು ಸರಕಾರಕ್ಕೆ ಬೈಯುವುದೇ?’’ ಎನ್ನುವುದು ಅವರ ಮಾತಿನ ದಾಟಿಯಾಗಿತ್ತು. ತಮ್ಮಿಂದ ಹಣ ಪಡೆದು ತಮ್ಮನ್ನೇ ಟೀಕಿಸುವುದಕ್ಕೆ ನಾಚಿಕೆ ಯಾಗುವುದಿಲ್ಲವೇ ಎಂಬರ್ಥದಲ್ಲಿ ಅವರು ಮಾತನಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತಿಗಳು, ಕವಿಗಳು ಸರಕಾರಕ್ಕೆ ಋಣಿಗಳಾಗಿರ ಬೇಕಾಗುತ್ತದೆ. ಅಷ್ಟೇ ಅಲ್ಲ, ಸಮ್ಮೇಳನದಲ್ಲಿ ಸರಕಾರದ ವಿರುದ್ಧ ಯಾವುದೇ ಮಾತು ಗಳನ್ನಾಡದೆ, ಸಾಧ್ಯವಾದರೆ ಹಣ ಬಿಡುಗಡೆ ಮಾಡಿದ ಸರಕಾರವನ್ನು ಹೊಗಳಬೇಕು. ಇದು ಕಾರಜೋಳರ ಮಾತಿನ ನಿಜವಾದ ಅರ್ಥ.ಸಾಹಿತ್ಯ, ಸಂಸ್ಕೃತಿ, ಕನ್ನಡ ಪರಂಪರೆಯನ್ನು ಕುಲಗೆಡಿಸಿದ ಸರಕಾರವೊಂದರ ಸಚಿವರೊಬ್ಬರು ಈ ರೀತಿ ಮಾತನಾಡುವುದರಲ್ಲಿ ಅಚ್ಚರಿಯೇನಿಲ್ಲ.
ಸಾಹಿತ್ಯ ಸಮ್ಮೇಳನಕ್ಕೆ ಸೇರಿದ ಜನರಿಗೂ, ರಾಜಕೀಯ ಸಮ್ಮೇಳನಕ್ಕೆ ಸೇರಿದ ಜನರಿಗೂ ಇರುವ ವ್ಯತ್ಯಾಸವನ್ನು ಅವರು ಗುರುತಿಸುವುದು ಕಷ್ಟ. ಸೇರಿದ ಜನರು, ಯಾವ ಜಾತಿ, ತಮಗೆಷ್ಟು ಮತಗಳು ಬೀಳಬಹುದು ಎನ್ನುವುದಷ್ಟನ್ನೇ ಅವರು ಲೆಕ್ಕಾಚಾರ ಮಾಡಲು ಸಾಧ್ಯ. ಸಾಹಿತ್ಯವೆಂದರೆ ಪಕ್ಷದ ಅಥವಾ ಸರಕಾರದ ಕರಪತ್ರವೆಂದಷ್ಟೇ ಅವರು ಭಾವಿಸ ಬಲ್ಲರು. ಸರಕಾರದ ಖಜಾನೆಯನ್ನು ತಮ್ಮ ಖಾಸಗಿ ಆಸ್ತಿಯೆಂಬಂತೆ ದೋಚುತ್ತಿರುವ ರಾಜಕಾರಣಿಗಳಿಗೆ, ಸಾಹಿತ್ಯ ಸಮ್ಮೇಳನಕ್ಕೆ ನೀಡಿರುವ ಹಣ, ತಮ್ಮ ಖಾಸಗಿ ತಿಜೋರಿಯಿಂದ ತೆಗೆದುಕೊಟ್ಟುದು ಎಂಬಂತೆ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಈಗಾಗಲೇ ತಮ್ಮ ಹಣದಿಂದ, ಪ್ರಶಸ್ತಿಗಳಿಂದ ಹಲವು ಸಾಹಿತಿಗಳನ್ನು, ವಿಚಾರವಾದಿಗಳನ್ನು ಕೊಂಡು ಕೊಂಡಿರುವ ಸರಕಾರ, ಕೆಲವು ಕೋಟಿ ಕೊಟ್ಟು ಎಲ್ಲ ಕನ್ನಡ ಸಾಹಿತಿಗಳನ್ನು ಒಂದೇ ಗಂಟಿನಲ್ಲಿ ಸಾಹಿತ್ಮ ಸಮ್ಮೇಳನದ ಮೂಲಕ ಕೊಂಡುಕೊಳ್ಳಲು ಹೊರಟಂತಿದೆ.
ಸಾಹಿತ್ಯ ಸಮ್ಮೇಳನಕ್ಕೆ ಹಣ ನೀಡುವ ಮೂಲಕ ಸಾಹಿತಿಗಳ ‘ಆಪರೇಷನ್ ಕಮಲ’ ಮಾಡಬಹುದು ಎಂದು ಸರಕಾರ ತಿಳಿದಂತಿದೆ. ಸಾಹಿತ್ಯ ಒಂದು ನಾಡಿನ ಆತ್ಮಸಾಕ್ಷಿಯಿದ್ದಂತೆ. ಇಲ್ಲಿನ ಪ್ರಭುತ್ವ ಕುಲಗೆಟ್ಟಾಗ, ಜನ ಮೈಮರೆತಾಗ ಅವರನ್ನು ಎಚ್ಚರಿಸಲು, ಸುಜ್ಞಾನದ ಹಾದಿಯಲ್ಲಿ ಮುನ್ನಡೆಸಲು ಸಾಹಿತ್ಯ ನೆರವಾಗುತ್ತದೆ. ಸಾಹಿತಿಗಳಿರುವುದು ಸರಕಾರ ವನ್ನು, ರಾಜಕಾರಣಿಗಳನ್ನು ಹೊಗಳುವುದಕ್ಕಲ್ಲ. ರಾಜಕಾರಣಿಗಳು ತಮ್ಮ ಕರ್ತವ್ಯವನ್ನು ಮರೆತಾಗ ಅವರನ್ನು ತಿದ್ದುವುದಕ್ಕೆ. ಅದು ಸದಾ ವಿರೋಧ ಪಕ್ಷದ ಕೆಲಸವನ್ನು ಮಾಡುತ್ತಿರಬೇಕು. ದೀನ ದಲಿತರಿಗೆ ಅನ್ಯಾಯವಾದಾಗ, ಅಕ್ರಮಗಳು ಮಿತಿ ಮೀರಿದಾಗ ಅದರ ವಿರುದ್ಧ ಮಾತನಾಡು ವುದೇ ಸಾಹಿತ್ಯ. ನಾಡು, ನುಡಿ, ಪರಂಪರೆಗೆ ಧಕ್ಕೆ ಬಂದಾಗ ಜಾಗೃತಿಯನ್ನು ಮೂಡಿಸುವುದು ಸಾಹಿತ್ಯದ ಕೆಲಸ. ಅಂತಹ ಸಾಹಿತ್ಯವಷ್ಟೇ ಸಾಹಿತ್ಯ. ಉಳಿದುದೆಲ್ಲ ಹಿರಿಯರಾಜಕಾರಣಿಯೊಬ್ಬರು ಹಿಂದೊಮ್ಮೆ ನುಡಿದಂತೆ ಬೂಸಾ.
ಸಾಹಿತ್ಯ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡುವುದು, ಸರಕಾರ ಮಾಡುವ ಉಪಕಾರವಲ್ಲ. ಅದು ಸರಕಾರದ ಕರ್ತವ್ಯ. ಮಠಗಳಿಗೆ ಉದಾರವಾಗಿ ಹಣ ಬಿಡುಗಡೆ ಮಾಡಿದಂತಲ್ಲ ಇದು. ಹಣ ಪಡೆದುಕೊಂಡ ಮಠದ ಸ್ವಾಮೀಜಿಗಳು ರಾಜಕಾರಣಿಗಳು ಜೈಲಿಗೆ ಹೋದಾಗ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಅಂತಹ ಆವಶ್ಯಕತೆ ಸಾಹಿತಿಗಳಿಗಿಲ್ಲ. ಸಾಹಿತ್ಯ ಸಮ್ಮೇಳನಗಳು ಎಲ್ಲಿಯವರೆಗೆ ಸರಕಾರದ ವಿರುದ್ಧ ಮಾತ ನಾಡುತ್ತಾ ಇರುತ್ತವೆಯೋ ಅಲ್ಲಿಯವರೆಗೆ ಅವು ಜೀವಂತವಿರುತ್ತವೆ. ಯಾವಾಗ ಸರಕಾರದ ತುತ್ತೂರಿಯಾಗಿ ಪರಿವರ್ತನೆಯಾಗುತ್ತವೆಯೋ, ಆಗ ಸಮ್ಮೇಳನಗಳು ಪಕ್ಷಗಳ ಪ್ರಚಾರ ವೇದಿಕೆಗಳಾಗಿ ಪರಿವರ್ತನೆಯಾಗುತ್ತವೆ.
ನಿಜಕ್ಕೂ ಸರಕಾರಕ್ಕೆ ತನ್ನನ್ನು ಹೊಗಳುವ ಸಾಹಿತಿಗಳು ಬೇಕಾದರೆ,ಅದಕ್ಕಾಗಿ ಪ್ರತಿವರ್ಷ ನೇಮಕಾತಿಗಳನ್ನು ಮಾಡಿಕೊಳ್ಳಲಿ.ಅವರಿಗೆ ಸಕಲ ಸವಲತ್ತು ನೀಡುತ್ತಾ, ಸರಕಾರದ ಬಗ್ಗೆ ಬರೆಯುವ ಕಾಯಕವನ್ನು, ಹೊಗಳುವ ಜವಾಬ್ದಾರಿಯನ್ನು ನೀಡಲಿ.ಆದರೆ ಸಾಹಿತ್ಯ ಸಮ್ಮೇಳನವನ್ನು ಸರಕಾರಿ ಸಮ್ಮೇಳನವಾಗಿ ಪರಿವರ್ತಿಸುವ ದುಸ್ಸಾಹಸಕ್ಕೆ ಇಳಿಯುವುದು ಸರಿಯಲ್ಲ. ತನ್ನ ಹೇಳಿಕೆಗಾಗಿ ಸಚಿವರು ತಕ್ಷಣ ನಾಡಿನ ಕ್ಷಮೆ ಯಾಚಿಸಬೇಕು
                                                                                              – ವಾರ್ತಾಭಾರತಿ ಸಂಪಾದಕೀಯ
Please follow and like us:
error