ನಾಚಿಕೆಯನ್ನು ತೊರೆದರೆ ಎಲ್ಲವನ್ನೂ ತೊರೆದಂತೆ

‘ಮೂರೂ ಬಿಟ್ಟವನು ಊರಿಗೆ ದೊಡ್ಡವನು’ ಎನ್ನುವ ಗಾದೆಗೆ ಅಧಿಕೃತ ಹಕ್ಕುದಾರ ತಾನೇ ಎನ್ನುವುದನ್ನು ಯಡಿಯೂರಪ್ಪ ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ. ಹತ್ತು ಹಲವು ಭ್ರಷ್ಟಾಚಾರದ ಹೆಣಗಳನ್ನು ಹೊತ್ತುಕೊಂಡು ತಿರುಗಾಡುತ್ತಿರುವ ಯಡಿಯೂರಪ್ಪ ಅವುಗಳನ್ನು ದಫನ ಮಾಡಿ, ಮಿಂದು ಶುಚಿಯಾಗುವ ದಾರಿ ಹುಡುಕುವುದನ್ನು ಬಿಟ್ಟು, ಆ ಹೆಣಗಳನ್ನು ಹೊತ್ತುಕೊಂಡೇ ಕೊಪ್ಪಳದ ಚುನಾವಣೆ ಯಲ್ಲಿ ಓಡಾಡುತ್ತಿದ್ದಾರೆ. ನಾಡು ನುಡಿ ಅವರ ಕೃತ್ಯಗಳಿಂದ ದುರ್ವಾಸನೆಗೀಡಾಗಿದೆ. ವಿಪರ್ಯಾಸವೆಂದರೆ, ಈ ಎಲ್ಲ ಬೆಳವಣಿಗೆ ಅವರಲ್ಲಿ ಸಣ್ಣ ನಾಚಿಕೆಯನ್ನೂ ಬಿತ್ತಿಲ್ಲ. ಈ ಸಂದರ್ಭದಲ್ಲಿ ಅವರ ಪುತ್ರರು ಮತ್ತು ಅಳಿಯನ ನಿವಾಸಗಳ ಮೇಲೆ ಲೋಕಾಯುಕ್ತರ ದಾಳಿಯಾಗಿದೆ. ಆದರೆ, ಈ ದಾಳಿಯನ್ನೂ ಅವರು ತನಗೆ ಸಿಕ್ಕಿದ ಗೌರವ ಎಂದೇ ತಿಳಿದುಕೊಂಡಂತಿದೆ. ಅಷ್ಟೇ ಅಲ್ಲ, ದಾಳಿ ನಡೆಸುವುದು ತನಗೆ ಹಿಂದಿನ ರಾತ್ರಿಯೇ ಗೊತ್ತಿತ್ತು ಎಂಬ ಹೇಳಿಕೆಯನ್ನು ನೀಡಿ, ತನ್ನ ಮೇಲಿರುವ ಎಲ್ಲ ಆರೋಪಗಳನ್ನೂ ಸಮರ್ಥಿಸಿಕೊಂಡಿದ್ದಾರೆ.
ಇಂದು ಕೊಪ್ಪಳ ಚುನಾವಣೆಯ ನೇತೃತ್ವವನ್ನು ಪರೋಕ್ಷವಾಗಿ ಯಡಿಯೂರಪ್ಪ ನವರೇ ವಹಿಸಿಕೊಂಡಿದ್ದಾರೆ. ಇದರರ್ಥ ಬಿಜೆಪಿಯಲ್ಲಿ ಉಳಿದವರೆಲ್ಲ ಸಾಚಾ, ಯಡಿಯೂರಪ್ಪ ಮಾತ್ರ ಭ್ರಷ್ಟ ಎಂದಲ್ಲ. ಸದ್ಯಕೆ ಬಿಜೆಪಿಯ ಯಾವ ನಾಯಕನಿಗೂ ಮತದಾರರ ಬಳಿಗೆ ಹೋಗುವ ನೈತಿಕತೆ ಇಲ್ಲ. ಅಲ್ಲಿಯ ಜನತೆಯ ಮೇಲೆ ಹೇರಿರುವ ಚುನಾವಣೆಯೇ ಬಿಜೆಪಿಯ ಅಕ್ರಮಗಳಿಗೆ ಸಾಕ್ಷಿ ಹೇಳುತ್ತದೆ. ಆಪರೇಷನ್ ಕಮಲದ ಫಲವನ್ನು ಜನರು ಉಣ್ಣುತ್ತಿದ್ದಾರೆ.
ಇದರ ಮೇಲೆ, ಅಕ್ರಮ ಗಣಿಗಾರಿಕೆಯ ಆರೋಪದಲ್ಲಿ ರಾಜೀನಾಮೆ ನೀಡಿದ ಯಡಿಯೂರಪ್ಪನವರನ್ನು ಚುನಾವಣೆಯಲ್ಲಿ ಮುಂದೆ ಹಾಕಿರುವುದು ಅದರ ಅಸಹಾಯಕತೆಯನ್ನು, ದೈನೇಸಿ ಸ್ಥಿತಿಯನ್ನು ತಿಳಿಸುತ್ತದೆ. ಇಂತಹ ಸಂದರ್ಭದಲ್ಲೇ ಯಡಿಯೂರಪ್ಪನವರ ಕುಟುಂಬದವರ ನಿವಾಸಗಳ ಮೇಲೆ ಲೋಕಾಯುಕ್ತ ಮತ್ತೆ ದಾಳಿ ನಡೆಸಿದೆ. ಇದು ಯಡಿಯೂರಪ್ಪ ನವರಿಗೆ ಮಗದೊಂದು ಆಘಾತ. ಸರಿ, ಈ ದಾಳಿಯನ್ನು ಒಪ್ಪಿಕೊಂಡು ಬಾಯಿಮುಚ್ಚಿ ಕೊಂಡಿದ್ದರೆ ಅವರಿಗೆ ಒಂದಿಷ್ಟಾದರೂ ಮಾರ್ಯದೆ ಇರುತ್ತಿತ್ತು. ಆದರೆ, ಈ ದಾಳಿ ನಡೆಯುತ್ತಿರುವುದು ತನಗೆ ಮೊದಲೇ ಗೊತ್ತಿತ್ತು ಎನ್ನುವ ಮೂಲಕ ಅವರು ಇನ್ನಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿ ದ್ದಾರೆ.
ಯಡಿಯೂರಪ್ಪ ಹೇಳಿದ ಮಾತನ್ನು ಪೂರ್ತಿಯಾಗಿ ನಂಬುವಂತಿಲ್ಲ. ಲೋಕಾಯುಕ್ತ ಅಧಿಕಾರಿಗಳ ವಿಶ್ವಾಸಾರ್ಹತೆಯನ್ನು ಕುಂದಿಸುವುದಕ್ಕೂ ಇಂತಹದೊಂದು ಹೇಳಿಕೆಯನ್ನು ನೀಡಿರಲೂ ಸಾಕು. ಆದರೆ ಈ ಹಿಂದೆ, ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗೆ ಜನಾರ್ದನ ರೆಡ್ಡಿಯವರ ನಿವಾಸಗಳಿಗೆ ಐಟಿ ದಾಳಿ ನಡೆದಿತ್ತು. ಈ ದಾಳಿ ನಡೆಯುವುದಕ್ಕೆ ಎರಡು ದಿನ ಮೊದಲು ‘‘ಸರಕಾರ ಇಂತಹದೊಂದು ದಾಳಿ ನಡೆಸುವುದಕ್ಕೆ ಯೋಜನೆ ರೂಪಿಸಿದೆ’’ ಎಂದು ಧನಂಜಯಕುಮಾರ್ ಹೇಳಿಕೆ ನೀಡಿದ್ದರು. ಅಂದರೆ ಅಧಿಕಾರಿಗಳೊಳಗೆ ಮಾಹಿತಿ ಸೋರಿಕೆಯಾಗುವುದೇನೂ ಸುಳ್ಳಲ್ಲ. ಲೋಕಾಯುಕ್ತರಿಂದ ಮೊದಲೇ ಮಾಹಿತಿ ಸೋರಿಕೆಯಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಅದನ್ನು ಯಡಿಯೂರಪ್ಪ ಬಹಿರಂಗವಾಗಿ ಒಪ್ಪಿಕೊಂಡಿರುವುದು ಮಾತ್ರ ಅವರ ಅಧಃಪತನದ ಆಳವನ್ನು ಸೂಚಿಸುತ್ತದೆ.
ಸಾಧಾರಣವಾಗಿ ಲೋಕಾಯುಕ್ತದ ದಾಳಿಯ ಕುರಿತಂತೆ ಮೊದಲೇ ಮಾಹಿತಿ ಯಿದ್ದರೆ, ದಾಖಲೆಗಳನ್ನು ಮುಚ್ಚಿಡುವ ಸಾಧ್ಯತೆಗಳೇ ಹೆಚ್ಚು. ಅಂದರೆ, ಲೋಕಾಯುಕ್ತ ದಾಳಿಗೆ ಮೊದಲೇ ದಾಖಲೆಗಳನ್ನೆಲ್ಲ ಮುಚ್ಚಿಡ ಲಾಗಿದೆ ಎನ್ನುವುದನ್ನು ಬಹಿರಂಗವಾಗಿ ಯಡಿ ಯೂರಪ್ಪನವರೇ ಒಪ್ಪಿಕೊಳ್ಳುತ್ತಿದ್ದಾರೆಯೇ? ಒಂದು ವೇಳೆ ಲೋಕಾಯುಕ್ತದೊಳಗಿಂದಲೇ ದಾಳಿಯ ಸುದ್ದಿ ಸೋರಿಕೆಯಾಗಿದೆಯೆಂದು ಇಟ್ಟುಕೊಳ್ಳೋಣ. ಆದರೆ, ಅದನ್ನು ಅವರು ಮಾಧ್ಯಮಗಳ ಮುಂದೆ ಯಾಕೆ ಹೇಳಿ ಕೊಂಡರು? ಅದರ ಉದ್ದೇಶವಾದರೂ ಏನು? ತನಗೆ ಹೇಗೂ ಕಳಂಕ ಅಂಟಿಕೊಂಡಾಗಿದೆ, ತನ್ನ ಬೆಂಬತ್ತಿರುವ ಲೋಕಾಯುಕ್ತಕ್ಕೂ ಮುಜುಗರ ಉಂಟು ಮಾಡೋಣ ಎನ್ನುವ ಉದ್ದೇಶ ಇದರಲ್ಲಿ ಎದ್ದು ಕಾಣುತ್ತದೆ. ಈ ಕಾರಣಕ್ಕಾಗಿಯೇ ಅವರು ಆರೋಪವನ್ನು ಮಾಡಿದ್ದಾರೆ. ಪರೋಕ್ಷವಾಗಿ ಇದೂ ಅವರು ಮಾಡಿರುವ ಅಕ್ರಮದ ಒಂದು ಭಾಗವೇ ಅಲ್ಲವೇ? ತನ್ನ ಹಣದಿಂದ ಲೋಕಾಯುಕ್ತ ವನ್ನು ಕೊಂಡಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಂತೇ ಅಲ್ಲವೇ?
ಅದೇನೇ ಇರಲಿ, ಲೋಕಾಯುಕ್ತವೂ ಕೂಡ ಯಡಿಯೂರಪ್ಪನವರ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕಾಗಿದೆ. ಹಾಗೆಯೇ, ಯಾವುದೇ ದಾಳಿ ಮೊದಲೇ ಆರೋಪಿಗಳಿಗೆ ಸೋರಿಕೆಯಾಗುತ್ತದೆಯೆಂದಾದರೆ ಆ ಸೋರಿಕೆ ಎಲ್ಲಿ ಆಗುತ್ತದೆಯೆನ್ನುವುದನ್ನು ಪತ್ತೆ ಹಚ್ಚಿ ಅದನ್ನು ಮುಚ್ಚಬೇಕಾಗಿದೆ. ಇಡೀ ವ್ಯವಸ್ಥೆಯೇ ಭ್ರಷ್ಟವಾಗಿರುವ ಇಂದಿನ ಸಂದರ್ಭದಲ್ಲಿ, ಮಾಹಿತಿ ಸೋರಿಕೆಯಾಗುವುದರಲ್ಲಿ ಅಚ್ಚರಿ ಯೇನಿಲ್ಲ. ಆದರೆ ಅದನ್ನು ಪತ್ತೆ ಹಚ್ಚಿ ಆ ತೂತುಗಳನ್ನು ಮುಚ್ಚುವುದು ಅತ್ಯಗತ್ಯ. ಹಾಗೆಯೇ, ಯಡಿಯೂರಪ್ಪ ಇನ್ನಾದರೂ ತಾನು ಮಾಡಿರುವ ಕೃತ್ಯಗಳಿಗಾಗಿ ನಾಚಿಕೊಳ್ಳು ವುದನ್ನು ಕಲಿಯಬೇಕಾಗಿದೆ. ತಾನು ಮಾಡಿದ ಕೃತ್ಯಕ್ಕೆ ಸ್ವತಃ ನಾಚಿಕೊಳ್ಳದವನನ್ನು ಯಾವ ನ್ಯಾಯಾಲಯದಿಂದಲೂ ಶಿಕ್ಷಿಸಲಾಗದು.                – ವಾರ್ತಾಭಾರತಿ
Please follow and like us:
error