ಸಂಭವನೀಯ ರಾಸಾಯನಿಕ ದುರಂತಗಳ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ

– ತುಳಸಿ ಮದ್ದಿನೇನಿ
ಕೊಪ್ಪಳ ಡಿ. ೨೧:  ಕೈಗಾರಿಕಾ ಕ್ಷೇತ್ರದಲ್ಲಿ ಸಂಭವನೀಯ ರಾಸಾಯನಿಕ ದುರಂತ ಸೇರಿದಂತೆ ಬೆಂಕಿ ಅನಾಹುತಗಳು ಆಗದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಭೂಪಾಲ್ ಅನಿಲ ಸೋರಿಕೆ ದುರಂತಹ ಕಹಿ ನೆನಪಿನ ಅಂಗವಾಗಿ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ವತಿಯಿಂದ ತಾಲೂಕಿನ ಗಿಣಿಗೇರಾ ಬಳಿಯ ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್‌ನ ಕಲ್ಯಾಣಿ ಕಾರ್ಖಾನೆಯಲ್ಲಿ ಏರ್ಪಡಿಸಲಾಗಿದ್ದ ರಾಸಾಯನಿಕ ದುರಂತ ತಡೆಗಟ್ಟುವ ದಿನಾಚರಣೆ ಹಾಗೂ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಬೃಹತ್ ಪ್ರಮಾಣದ ಕಾರ್ಖಾನೆಗಳಿದ್ದು, ಎಲ್ಲಾ ಕಾರ್ಖಾನೆಗಳು ಸಂಭವನೀಯ ರಾಸಾಯನಿಕ ಸೋರಿಕೆ ಅಥವಾ ಬೆಂಕಿ ಅವಘಡದಂತಹ ದುರಂತಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು.  ಇದಕ್ಕಾಗಿ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದಲ್ಲದೆ, ಅಗತ್ಯ ಉಪಕರಣಗಳನ್ನು ಸರಿಯಾಗಿಟ್ಟುಕೊಳ್ಳಬೇಕು.  ಜಿಲ್ಲೆಯಲ್ಲಿ ಯಾವುದೇ ಕಾರ್ಖಾನೆಗಳಲ್ಲಿ ಯಾವುದೇ ದುರಂತ ಸಂಭವಿಸದಂತೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕಾರ್ಖಾನೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.  ನಂತರ ದುರಂತ ಸಂಭವಿಸಿದಾಗ ಕೈಗೊಳ್ಳುವ ನಿರ್ವಹಣಾ ಕ್ರಮಗಳ ಅಣಕು ಪ್ರದರ್ಶನ ವೀಕ್ಷಿಸಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು, ದುರಂತಗಳ ನಿರ್ವಹಣೆಗೆ ಕಾರ್ಖಾನೆಗಳು ಅನುಸರಿಸುವ ನಿವಾರಣಾ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  ಕಲ್ಯಾಣಿ ಸ್ಟೀಲ್ ಕಾರ್ಖಾನೆಯ ಸುರಕ್ಷತಾ ವಿಭಾಗದ ಪ್ರಭುದಾಸ್ ಮತ್ತು ತಂಡದವರು, ಕಾರ್ಖಾನೆಯಲ್ಲಿನ ಪವರ್ ಪ್ಲಾಂಟ್, ಗ್ಯಾಸ್ ಸ್ಟೀಮ್ ವಿಭಾಗದಲ್ಲಿ ಸಂಭವಿಸುವ ವಿಷಕಾರಿ ಗ್ಯಾಸ್ ಸೋರಿಕೆ ಹಾಗೂ ಬೆಂಕಿ ಅವಘಡದ ಅಣಕುಪ್ರದರ್ಶನವನ್ನು ನಡೆಸಿಕೊಟ್ಟರು.  ಕಲ್ಯಾಣಿ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಪತ್‌ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್,  ಬಳ್ಳಾರಿಯ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಸೇರಿದಂತೆ ಎಕ್ಸ್-ಇಂಡಿಯಾ, ಕಿರ್ಲೋಸ್ಕರ್ ಮುಂತಾದ ಕಾರ್ಖಾನೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನದಲ್ಲಿ ಕಂಡುಬಂದ ನ್ಯೂನತೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಪಯುಕ್ತ ಸಲಹೆ ಸೂಚನೆ ನೀಡಿದರು.

Related posts

Leave a Comment