ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಸಮರ್ಪಕವಾಗಿ ವಿತರಿಸಿ- ವಿ. ರಶ್ಮಿ

  ಜಿಲ್ಲೆಯಲ್ಲಿ ಪ್ರಸಕ್ತ ಉತ್ತಮ ಮಳೆಯಾಗುತ್ತಿದ್ದು, ಎಲ್ಲ ರೈತರಿಗೆ ಅಗತ್ಯ ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಸಮರ್ಪಕವಾಗಿ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಕಾರ್ಯದರ್ಶಿ ವಿ. ರಶ್ಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಪ್ರಸಕ್ತ ವರ್ಷದ ಮುಂಗಾರು ಜಿಲ್ಲೆಯಲ್ಲಿ ಉತ್ತಮವಾಗಿದ್ದು, ಕುಷ್ಟಗಿ ತಾಲೂಕು ಹೊರತುಪಡಿಸಿ ಉಳಿದೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.  ಇದುವರೆಗೂ ಜಿಲ್ಲೆಯಲ್ಲಿ ಕೇವಲ ಶೇ. ೫೬ ರಷ್ಟು ಅಂದರೆ ೮೩೭೦೦ ಹೆ. ಮಾತ್ರ ಬಿತ್ತನೆಯಾಗಿದೆ.  ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ೨೫೨೫೦೦ ಹೆ. ಬಿತ್ತನೆಯ ಗುರಿ ಇದ್ದು, ಬಿತ್ತನೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.  ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರದ ಯಾವುದೇ ಕೊರತೆಯಾಗದಂತೆ, ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ಪದ್ಮಯನಾಯಕ್ ಅವರು, ಜಿಲ್ಲೆಯ ಬಿತ್ತನೆ ಗುರಿಯ ಪೈಕಿ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ೩೯೫೦೦ ಹೆ. ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ತುಂಗಭದ್ರಾ ಜಲಾಶಯದಿಂದ ಈಗಾಗಲೆ ಕಾಲುವೆಗಳಿಗೆ ನೀರು ಹರಿಸಲಾಗಿದೆ.  ಈ ತಿಂಗಳ ಒಳಗಾಗಿ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.  ಜಿಲ್ಲೆಯಲ್ಲಿ ಈ ಬಾರಿ ಮುಸುಕಿನ ಜೋಳ ಬೆಳೆ ಅತಿಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ.  ಈಗಾಗಲೆ ೧೦೬೫೪ ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದ್ದು, ಇನ್ನೂ ೭೫೧೯ ಕ್ವಿಂ. ಬಿತ್ತನೆ ಬೀಜ ಹಾಗೂ ಗೊಬ್ಬರದ ದಾಸ್ತಾನು ಇದೆ.  ಅಗತ್ಯಕ್ಕೆ ಅನುಗುಣವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಗ್ರಾ.ಪಂ. ಮಟ್ಟದಲ್ಲಿ ಮಳೆ ವರದಿ ಸಂಗ್ರಹಿಸಿ : ಜಿಲ್ಲೆಯ ಎಲ್ಲಾ ೧೩೪ ಗ್ರಾಮ ಪಂಚಾಯತಿಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಲು ಈಗಾಗಲೆ ಸೂಚನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಶೇ. ೬೦ ರಷ್ಟು ಮಾತ್ರ ಸಾಧನೆಯಾಗಿದೆ.  ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಮಳೆ ಮಾಪನ ಉಪಕರಣಗಳ ಅಳವಡಿಕೆ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು.  ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿವಾರು ಮಳೆ ಪ್ರಮಾಣದ ವರದಿಯ ಅಂಕಿ-ಅಂಶಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.
ರೈತರಿಗೆ ೧೩ ಕೋಟಿ ರೂ. ಧನಸಹಾಯ : ಕಳೆದ ವರ್ಷ ಉಂಟಾದ ಭೀಕರ ಬರ ಪರಿಸ್ಥಿತಿಯ ಕಾರಣದಿಂದ ತೊಂದರೆಗೆ ಒಳಗಾದ ಸಣ್ಣ- ಅತಿಸಣ್ಣರೈತರು, ಪ್ರಸಕ್ತ ವರ್ಷ ಬೆಳೆ ಬೆಳೆಯಲು ಅನುವಾಗುವಂತೆ ಕೇಂದ್ರ ಸರ್ಕಾರ ಜಿಲ್ಲೆಯ ೧. ೧೫ ಲಕ್ಷ ರೈತರಿಗೆ ವಿತರಿಸಲು ೧೩. ೭೬ ಕೋಟಿ ರೂ.ಗಳ ಧನ ಸಹಾಯ (ಇನ್‌ಪುಟ್ ಸಬ್ಸಿಡಿ) ಬಿಡುಗಡೆ ಮಾಡಿದ್ದು, ಈಗಾಗಲೆ ಆಯಾ ತಾಲೂಕು ತಹಸಿಲ್ದಾರರುಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.  ಗರಿಷ್ಠ ೫ ಎಕರೆಗೆ ರೂ. ೨೦೦೦ ಗಲಂತೆ ಧನ ಸಹಾಯವನ್ನು ರೈತರಿಗೆ ಚೆಕ್ ಮೂಲಕ ಹಣ ಪಾವತಿಸಲು ಸೂಚನೆ ನೀಡಲಾಗಿದ್ದು, ಚೆಕ್ ವಿತರಣೆ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು.  ಚೆಕ್ ಮೂಲಕ ಧನಸಹಾಯ ವಿತರಣೆಯ ಬದಲಿಗೆ, ಉದ್ಯೋಗಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವವರ ಮಾಹಿತಿ ಸಂಗ್ರಹಿಸಿ, ಆನ್‌ಲೈನ್ ಮೂಲಕ ತ್ವರಿತವಾಗಿ ಹಣ ಪಾವತಿಗೆ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.  ಇದಕ್ಕೆ ಉತ್ತರಿಸಿದ ಪ್ರಭಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು, ಈಗಾಗಲೆ ಜಿಲ್ಲೆಯ ೧. ೧೫ ಲಕ್ಷ ರೈತರ ಪೈಕಿ ೯೧೦೦೦ ರೈತರಿಗೆ ಧನಸಹಾಯದ ಚೆಕ್ ವಿತರಿಸಲಾಗಿದೆ ಎಂದರು.  ಎಕ್ಸಿಸ್ ಬ್ಯಾಂಕ್‌ನಿಂದ ಚೆಕ್ ನಗದು ಆಗಿರುವ ಬಗ್ಗೆ ಸ್ಟೇಟ್‌ಮೆಂಟ್ ಪಡೆದು, ಖಚಿತಪಡಿಸಿಕೊಳ್ಳುವಂತೆ ಕಾರ್ಯದರ್ಶಿ ವಿ. ರಶ್ಮಿ ಅವರು ಸೂಚನೆ ನೀಡಿದರು.
ಎಲ್ಲ ಶಾಲೆ, ಅಂಗನವಾಡಿಗಳಿಗೆ ಸೌಲಭ್ಯ : ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢ, ಕಾಲೇಜುಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸುವ ಕುರಿತು ಡಿಡಿಪಿಐ, ಕಾಲೇಜು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಶಾಲಾವಾರು ಸಮಗ್ರ ವರದಿಯನ್ನು ಸಲ್ಲಿಸಬೇಕು.  ಬಾಲಕ, ಬಾಲಕಿಯರು ಕಂಬೈನ್ಡ್ ಆಗಿ ವಿದ್ಯಾಭ್ಯಾಸ ಮಾಡುವ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಶೌಚಾಲಯಗಳು ಪ್ರತ್ಯೇಕವಾಗಿರಬೇಕು.  ಜಿಲ್ಲೆಯ

ಲ್ಲಿ ಬಿಸಿಎಂ, ಅಲ್ಪಸಂಖ್ಯಾತರ ಮತ್ತು ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ೧೨೬ ಹಾಸ್ಟೆಲ್‌ಗಳಿದ್ದು, ಇದರಲ್ಲಿ ಒಟ್ಟು ೧೨೬೨೭ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ಇದರಲ್ಲಿ ಬಹಳಷ್ಟು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಸಮರ್ಪಕ ಸೌಲಭ್ಯಗಳಿಲ್ಲ.  ಅಲ್ಲದೆ ಸ್ವಂತ ಕಟ್ಟಡಗಳು ಇಲ್ಲ.  ಸ್ವಂತ ಕಟ್ಟಡ ನಿರ್ಮಿಸಬೇಕಿರುವ ಹಾಸ್ಟೆಲ್‌ಗಳ ಪೂರ್ಣ ವರದಿಯನ್ನು ತಯಾರಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಬ್‌ಮಿಷನ್ ವಿಳಂಬಕ್ಕೆ ಅಸಮಧಾನ : ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮ ಯೋಜನೆಗಳ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಲ್ಲಿ ಆನೆಗೊಂದಿ, ಶ್ರೀರಾಮನಗರ, ಕನಕಗಿರಿ ಮುಂತಾದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ.  ಇದರಿಂದಾಗಿ ಸಾರ್ವಜನಿಕರಿಗೆ ಉತ್ತಮ ಕುಡಿಯುವ ನೀರು ಪೂರೈಸುವ ಉದ್ದೇಶ ವಿಫಲವಾಗಿದೆ.  ಅಧಿಕಾರಿಗಳು ಕ್ರಿಯಾ ಯೋಜನೆ ಮಾಡುವಾಗ, ಸಮರ್ಪಕ ಮಾಹಿತಿ ಪಡೆಯದೆ, ಅವೈಜ್ಞಾನಿಕವಾಗಿ ಯೋಜನೆ ತಯಾರಿಸುವುದರಿಂದ, ಕೊನೆಯ ಭಾಗದ ಗ್ರಾಮಗಳಿಗೆ ನೀರು ಸರಬರಾಜು ಆಗದಿರುವುದರಿಂದ ಬಹುಗ್ರಾಮ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಹೊಂದುತ್ತಿಲ್ಲ.  ಜಿಲ್ಲೆಯ ಎಲ್ಲ ಸಬ್ ಮಿಷನ್ ಯೋಜನೆಗಳ ಬಗ್ಗೆ ಪ್ರತಿ ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸುವಂತೆ ಕಾರ್ಯದರ್ಶಿಗಳ ಜಿ.ಪಂ. ಸಿಇಓ ಡಿ.ಕೆ. ರವಿ ಅವರಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಪ್ರಭಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error