ಸಂಭ್ರಮದ ರಥೋತ್ಸವ

ಕೊಪ್ಪಳ : ಮಹಾಮಹಿಮ ಗವಿಸಿದ್ದೇಶ್ವರನಿಗೆ ಜಯವಾಗಲಿ ಎಂಬ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಕೊಪ್ಪಳದ ಶ್ರೀಗವಿಸಿದ್ದೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು.  ಎಲ್ಲಿ ನೋಡಿದರಲ್ಲಿ ಜನವೋ ಜನ. ಜನಸಾಗರವೇ ಹರಿದು ಬಂದಿತ್ತು ಗವಿಮಠದ ಜಾತ್ರೆಗೆ. ಸಾಲುಮರದ ತಿಮ್ಮಕ್ಕ ಧ್ವಜಾರೋಹಣ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಸಾಗರದ ನಡುವೆ ಸಾಗಿದ ರಥಕ್ಕೆ ಭಕ್ತರು ಉತ್ತತ್ತಿ ಮತ್ತು ಬಾಳೆಹಣ್ಣುಗಳನ್ನು ತೂರಿ ಪುನಿತರಾದರು. ನಂತರ ಮಾತನಾಡಿದ ಸಾಲುಮರದ ತಿಮ್ಮಕ್ಕ ಕೊಪ್ಪಳದ ಜಾತ್ರೆಯಲ್ಲಿ  ಇಷ್ಟೊಂದು ಜನ ಸೇರಿರುವದನ್ನು ನೋಡಿ ಸಂತೋಷವಾಗಿದೆ. ಇಷ್ಟುಜನ ಸೇರುವ ಜಾತ್ರೆಯನ್ನು ನಾನು ನೋಡಿಯೇ ಇಲ್ಲ. ಇಂತಹ ಜಾತ್ರೆಗೆ ಚಾಲನೆ ನೀಡಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ ಎಂದರು.
ನಿಡಸೋಸಿಯ ಸಿದ್ದಸಂಸ್ಥಾನಮಠದ ಶ್ರೀ ಜಗದ್ಗುರು ಪಂಚಮಲಿಂಗೇಶ್ವರ  ಮಹಾಸ್ವಾಮಿಗಳು ಮಾತನಾಡಿ ಭಕ್ತ ಸಾಗರವನ್ನು ನೋಡಿದರೆ ಇದು ಮತ್ತೊಂದು ಪುರಿ ಎನ್ನಬಹುದು ಎಂದರು. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿದರು. ಕಾರ‍್ಯಕ್ರಮದಲ್ಲಿ ವಿವಿಧ ಮಠಾಧೀಶರು ಸ್ವಾಮಿಜಿಗಳು ಭಾಗವಹಿಸಿದ್ದರು.
 

Leave a Reply