You are here
Home > Koppal News > ಕೊಳಲು ಮಾಂತ್ರಿಕ ಬಾಪು ಪದ್ಮನಾಭ :ಕೈಲಾಸ ಮಟ್ಟಪದಲ್ಲಿ ಅಂತರ್ಧ್ವನಿ ಕಾರ್ಯಕ್ರಮ

ಕೊಳಲು ಮಾಂತ್ರಿಕ ಬಾಪು ಪದ್ಮನಾಭ :ಕೈಲಾಸ ಮಟ್ಟಪದಲ್ಲಿ ಅಂತರ್ಧ್ವನಿ ಕಾರ್ಯಕ್ರಮ

(ದಿನಾಂಕ: ೧೮-೦೧-೨೦೧೪ ರಂದು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕೈಲಾಸ ಮಟ್ಟಪದಲ್ಲಿ ಅಂತರ್ಧ್ವನಿ ಕಾರ್ಯಕ್ರಮ ನೀಡುವ ನಿಮಿತ್ಯವಾಗಿ ಶ್ರೀ ಬಾಪುಪದ್ಮನಾಭ ರವರ ವಿಶೇಷ ಲೇಖನ)
ಹರಿಹರ ಪಟ್ಟಣದಲ್ಲಿ ಜನಿಸಿದ ಬಾಲಕನೊಬ್ಬ ಜಾತ್ರೆಯೊಂದರಲ್ಲಿ ಸಹೋದರಿ ಕೊಡಿಸಿದ ಆಟಿಕೆ ಕೊಳಲನ್ನು ನುಡಿಸುತ್ತಾ ಖ್ಯಾತ ಕೊಳಲುವಾದಕರಾದ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ ಚೌರಾಸಿಯಾ ಅವರಂಥ ಬಾನ್ಸುರಿ ವಾದಕರ ಅನುಯಾಯಿಯಾಗಿ ಪರಿಪೂರ್ಣ ಶಿಷ್ಯರಾಗಿ ಉನ್ನತ ಹಂತಕ್ಕೆ ಬೆಳೆದ ಯಶೋಗಾಥೆ ಯಾರಿಗಾದರೂ ಬೆರಗು ಮೂಡಿಸುತ್ತದೆ. ಈ ಅಪೂರ್ವ ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಕ್ರಮಿಸಿದ ಸಂಗೀತ ಸಾಧಕ, ಕರ್ನಾಟಕದ ಹೊಸಪೇಟೆಯಲ್ಲಿ ಟೂಲ್ ಇಂಜಿನೀಯರಿಂಗ್ ಕಲಿತವರು, ಎಲ್ಲರಿಂದಲೂ ಪ್ರೀತಿಯಿಂದ ಬಾಪು ಎಂದೇ ಕರೆಯಲ್ಪಡುತ್ತಿರುವ     ಬಾಪು ಪದ್ಮನಾಭರವರು.
 ಮಾಲತೇಶರಾವ್ ಮತ್ತು ಶ್ರೀಮತಿ ಬನಶಂಕರಿರವರ ದಂಪತಿಗಳ ಮಗನಾಗಿ ದಿನಾಂಕ: ೧೮-೧೧-೧೯೭೮ ರಂದು ಹರಿಹರದಲ್ಲಿ ಜನಿಸಿದರು. ಬಾಪುರವರು ತಮ್ಮ ೧೬ನೇ ವಯಸ್ಸಿನಲ್ಲಿ ಸಂಗೀತ ಯಾತ್ರೆ ಆರಂಭಿಸಿ ಇಂದಿಗೂ ಬೇರೆ ಏನನ್ನೂ ಕಂಡವರಲ್ಲ.
ಅಜ್ಜ ಕಲಿಸಿದ ಹಾರ್ಮೋನಿಯಂ ಸಂಗೀತ ಸ್ವರಗಳಿಗೆ ಮಾತ್ರ ಸಂಗೀತದ ಜ್ಞಾನ ಸೀಮಿತವಾಗಿತ್ತು. ನಂತರ ಬಾನ್ಸುರಿಯಿಂದ ಸಂಗೀತ ನುಡಿಸುವ ಉತ್ಕಟ ಹಂಬಲದಲ್ಲಿ ತನ್ನ ಆರಾಧ್ಯ ದೈವ ಪಂಡಿತ ಪದ್ಮಭೂಷಣ   ಹರಿಪ್ರಸಾದ ಚೌರಾಸಿಯವರ ಅನುಪಸ್ಥಿತಿಯಲ್ಲಿಯೂ ತನ್ನ ಗುರುವೆಂದು ನಂಬಿ ಏಕಲವ್ಯನಂತೆ ಅವರ ಅಮೂಲ್ಯ ಸಂಗೀತದ ಧ್ವನಿಸುರುಳಿಗಳನ್ನು ಖರೀದಿಸಿ ಘಂಟಾನೂಗಟ್ಟಲೆ ಅವರ ಶೈಲಿಯನ್ನು ಅನುಕರಣೆ ಮಾಡಲು ಪ್ರಾರಂಭಿಸಿದರು. ಜೊತೆಗೆ ಕರ್ನಾಟಕದಲ್ಲಿ ಕ್ರಮಬದ್ಧ ಕೊಳಲು ನುಡಿಸುವ ಶಿಕ್ಷಣ ಮತ್ತು ಕಲಿಸುವ ಗುರುವಿಗಾಗಿ ಹುಡುಕಾಟ ಮಾಡಿದರೂ ಅದು ಫಲಿಸಲಿಲ್ಲ. ಏಕೆಂದರೆ ಬಹುಷ್ಯಃ ಹರೀಜಿಯವರ ಶಿಷ್ಯನಾಗಬೇಕೆನ್ನುವುದು ದೈವ ನಿರ್ಧರವಾಗಿತ್ತೇನು ಎಂದೆನಿಸುತ್ತದೆ.
 ಬಾಪುರವರು ಅಗಷ್ಟ್ ೧೯೯೯ ರಲ್ಲಿ ಟೂಲ್ ಇಂಜಿನೀಯರಿಂಗ್‌ನ ಕೊನೆಯ ಸೆಮಿಸ್ಟರ್‌ನಲ್ಲಿ ಕೈಗಾರಿಕಾ ತರಬೇತಿ ನೆಪದಲ್ಲಿ ಮಾಯಾನಗರಿ ಮುಂಬಯಿಗೆ ತನ್ನ ಆರಾಧ್ಯದೈವ ಶ್ರೀ ಹರಿಪ್ರಸಾದ ಚೌರಾಸಿಯವರನ್ನು ಬೇಟಿಯಾಗಲು ಹೋದರು. ಪ್ರಾರಂಭದಲ್ಲಿ ಹರೀಜಿ ಅವರನ್ನು ಬೇಟಿಯಾಗುವ ಭಾಗ್ಯ ಸಿಗದೇ ಮರಳಿ ಬಂದರು. ಆದರೆ ಇದರಿಂದ ಬಾಪು ನಿರಾಶರಾಗಲಿಲ್ಲ. ಸತತ ಪ್ರಯತ್ನ ಅಭ್ಯಾಸಗಳನ್ನ ಮುಂದುವರೆಸಿ ಯಶಸ್ಸು ಕಂಡರು.
ಹರೀಜಿಯವರ ಸಮ್ಮುಖದಲ್ಲಿ ಪ್ರಾಯೋಗಿಕ ಪ್ರದರ್ಶನದ ನಂತರ ಶಿಷ್ಯತ್ವ ಪಡೆಯುವ ಬಹುದಿನಗಳ ಕನಸು ನನಸಾಗಿ ಅವಕಾಶ ಲಭಿಸಿತು. ಹರೀಜಿಯವರು ತಮ್ಮ ಕೊಳಲನ್ನು ಆಶೀರ್ವಾದದ ರೂಪದಲ್ಲಿ ಬಾಪುಗೆ ನೀಡಿದರು. ಹೆತ್ತವರ ಒಪ್ಪಿಗೆ ಇಲ್ಲದೆ ಅವರ ಗಮನಕ್ಕೂ ತರದೆ ಮುಂಬಯಿಗೆ ಹೋದ ಬಾಪು ಸಾಕಷ್ಟು ಹಣಕಾಸಿನ ತೊಂದರೆ ಅನುಭವಿಸುವಂತಾಯಿತು. ಬೆಳಿಗ್ಗೆ ಹರೀಜಿಯವರ ಬಳಿ ಸಂಗೀತ ಅಭ್ಯಾಸದ ನಂತರ ಸಣ್ಣ ಹೊಟೇಲ್ ಮಾಣಿಯಾಗಿ ದುಡಿಯುವ ಗೌರವಯುತ ಬದುಕು ಪ್ರಾಪ್ತಿಯಾಯಿತು. ೪೫ ದಿನಗಳ ಬದುಕಿನ ಸಂಘರ್ಷದ ನಂತರ ಸ್ವತಃ ಹರೀಜಿಯವರ ಸಂಪೂರ್ಣ ಸಹಕಾರ ದೊರೆಯಿತು. ಒಂದು ವರ್ಷದವರೆಗೆ ಪ್ರತಿ ತಿಂಗಳು ತಮ್ಮ ಬೃಂದಾವನ ಚಾರಿಟೇಬಲ್ ಟ್ರಸ್ಟ್ ನಿಂದ ಪನ್ನಾದೇವಿ ಸಂಗೀತ ಶಿಷ್ಯವೇತನ ನೀಡಿದ್ದು ಬಾಪು ಅವರಲ್ಲಿ ಹೊಸ ಚೈತನ್ಯ ಮತ್ತು ಭರವಸೆ ತುಂಬಲು ಕಾರಣವಾಯಿತು. ತಮ್ಮ ಟೂಲ್ ಇಂಜಿನೀಯರಿಂಗ್ ಪದವಿ ಮುಗಿಸಿದ ಬಾಪುವಿಗೆ ಕರ್ನಾಟಕದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ, ಬಾನ್ಸುರಿ ವಾದನವೇ ತಮ್ಮ ನಿಜವಾದ ವೃತ್ತಿ ಎನ್ನುವ ತುಡಿತ ಮತ್ತೆ ಅವರನ್ನು ಮುಂಬಯಿಗೆ ಕರೆದೊಯ್ಯಿತು. ಸುದೈವಕ್ಕೆ ಮುಂಬಯಿಗೆ ಸಮೀಪದಲ್ಲಿದ್ದ ಪ್ರಸಿದ್ಧ ಸಾಂಸ್ಕೃತಿಕ ಕೇಂದ್ರವಾಗಿದ್ದ ಪುಣೆಯ ಟೆಕೋ ಕಂಪನಿಯಲ್ಲಿ ಉದ್ಯೋಗ ದೊರಕಿಸಿಕೊಂಡ ಬಾಪು ತಮ್ಮ ಹೆಚ್ಚಿನ ಸಮಯವನ್ನು ಬಾನ್ಸುರಿವಾದನದ ಅಭ್ಯಾಸದಲ್ಲಿ ಪರಿಪೂರ್ಣತೆ ಪಡೆಯಲು ಮೀಸಲಿರಿಸಿದರು.
ಸೆಪ್ಟಂಬರ ೨೦೦೧ರಲ್ಲಿ ಪುಣೆಯ ಓಶೋ ಸಮಾಧಿ ಸ್ಥಳದಲ್ಲಿ ನೀಡಿದ ಮೊದಲ ಮುಖ್ಯ ಪ್ರದರ್ಶನ ಅವರ ಸಂಗೀತ ಯಾತ್ರೆಯಲ್ಲಿ ಬಹುದೊಡ್ಡ ತಿರುವನ್ನು ನೀಡಿತು. ಸಂಗೀತದ ಮೂಲಕ ಭಕ್ತಿಯನ್ನು ಪ್ರಚೋದಿಸುವ ಮಾನಸಿಕ ಶಾಂತಿ ನೀಡುವ ಹೊಸ ಆಯಾಮಗಳಿಗೆ ಆಸಕ್ತಿವಹಿಸಿದರು. ನಂತರ ಪುಣೆಯ ಈಖಿII (ಈiಟm ಖಿeಟevisioಟಿ Iಟಿsಣiಣuಣe oಜಿ Iಟಿಜiಚಿ) ಯಲ್ಲಿ ಹಲವಾರು ಪ್ರಾದೇಶಿಕ ಚಿತ್ರಗಳಿಗೆ ಸಂಗೀತ ಸಂಯೋಜಕರಾಗಿ ಭಾರತದ ಅನೇಕ ಸಾಧನೆಯ ಯಾತ್ರೆ ಮುಂದುವರೆಸಿದರು. ಇದೇ ಸಮಯಕ್ಕೆ ಅವರ ಆಸಕ್ತಿ ಸಂಪೂರ್ಣವಾಗಿ ಸಂಗೀತ ಕ್ಷೇತ್ರದೆಡೆಗೆ ತಿರುಗಿ ಬಾಪುರವರು ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿ ಪರಿಪೂರ್ಣವಾಗಿ ತಮ್ಮನ್ನು ಸಂಗೀತ ಸಾಧನೆಯಲ್ಲಿ ತೊಡಗಿಸಿಕೊಳ್ಳಲು ದೃಢನಿರ್ಧಾರ ಮಾಡಿದರು. ಇದರಿಂದ ಅವರ ಆರ್ಥಿಕ ಸ್ಥಿತಿಯು ಸುಧಾರಿಸಿ ತಾವು ತೆಗೆದುಕೊಂಡ ನಿರ್ಧಾರಕ್ಕೆ ಪಶ್ಚಾತಾಪ ಪಡುವ ಕಾರಣವಿಲ್ಲವೆನ್ನುವುದು ಮನವರಿಕೆಯಾಯಿತು. ಇದಕ್ಕೆ ಅನೇಕ ಸ್ಥಳೀಯ ಗೆಳೆಯರ ಮತ್ತು ಹಿತೈಷಿಗಳ ಸಹಕಾರ, ಪ್ರೋತ್ಸಾಹವಿತ್ತು. ಇಂತಹ ಪ್ರೇರಣೆಯ ಫಲವಾಗಿಯೇ ಡಿಸೆಂಬರ್ ೨೦೦೪ ರಲ್ಲಿ ಅವರ ಮೊದಲ ಸಿ.ಡಿ ವಿವಿಧ ಬಿಡುಗಡೆಯಾಯಿತು. ಅಂದಿನಿಂದ ಇಂದಿನರೆಗೆ ಬಾಪು ಅವರ ಅನೇಕ ಸಂಗೀತ ಧ್ವನಿಸುರುಳಿಗಳು ಬಿಡುಗಡೆಯಾಗಿ ಸಂಗೀತ ಪ್ರೇಮಿಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿವೆ. ಅಲ್ಲದೇ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ. ದೇಶದ ಪುಣೆ, ಬಾಂಬೆ, ದಿಲ್ಲಿ, ಕಲ್ಕತ್ತಾ ಮುಂತಾದ ನಗರಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೇ ದೇಶದ ಹೊರಗೆ ಯೂರೋಪ್, ಅಮೇರಿಕಾ ಮುಂತಾದ ರಾಷ್ಟ್ರಗಳಲ್ಲಿ ಧ್ಯಾನಕ್ಕಾಗಿ ಇವರು ನೀಡಿದ ಸಂಗೀತ ಕಾರ್ಯಕ್ರಮಗಳನ್ನು ಅಲ್ಲಿನ ಸಂಗೀತ ಪ್ರಿಯರು ಆಲಿಸುತ್ತಿದ್ದಾರೆ.
ಬಾಪು ರವರು ಹಲವಾರು ಕನ್ನಡ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಬಾಲಿವುಡ್‌ನ ಖ್ಯಾತ ಗಾಯಕರಾದ ಹರಿಹರನ್ ಮತ್ತು ’ಶಾನ್’ ಅವರೊಂದಿಗೆ ಕೆಲಸ ಮಾಡಿದ್ದಾರೆ. ಬಾಪು ರವರ ಅಂತರ್ಧ್ವನಿ ಎಂಬ ತಮ್ಮದೇ ಆದ ಸಂಗೀತ ತಂಡವನ್ನು ಹೊಂದಿ ಇದರ ಮೂಲಕ ಆಸಕ್ತರಿಗೆ ಧ್ಯಾನದ ಶಿಬಿರಗಳನ್ನು ಅನೇಕ ಸ್ಥಳಗಳಲ್ಲಿ ಏರ್ಪಡಿಸಿ ಖ್ಯಾತಿಯನ್ನ ಪಡೆದಿದ್ದಾರೆ. ಅಹೀರ್ ಭೈರವಿ ರಾಗವೆಂದರೆ ಶ್ರೀ ಬಾಪುರವರಿಗೆ ತುಂಬಾ ಇಷ್ಟ. ದಿನಾಂಕ: ೧೮-೦೧-೨೦೧೪ ರಂದು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕೈಲಾಸ ಮಟ್ಟಪದಲ್ಲಿ ಸ್ವತಃ ತಾವೇ ರಚಿಸಿದ ಹೊಸ ರಾಗ ಶಿವನರುದ್ರಮಂತ್ರ ಜಾತ್ರೆಗೆ ಬರುವ ಭಕ್ತರಿಗಾಗಿ ಅರ್ಪಿಸಲಿದ್ದಾರೆ. ಶ್ರೀಬಾಪು ಅವರು ಕೊಳಲು ನುಡಿಸಿ ಸಂಗೀತ ಪ್ರಿಯರ ಮನ ಗೆದ್ದಿದ್ದಾರೆ.
ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು,

Leave a Reply

Top