ಇಂದಿನಿಂದ ಮೈಸೂರು ದಸರಾ

ಮೈಸೂರು, ಆ.15: ಹತ್ತು ಹಲವು ವೈಶಿಷ್ಟ್ಯ ಮತ್ತು ವೈರುಧ್ಯಗಳೊಂದಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಬಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ನವರಾತ್ರಿಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಚಾಮುಂಡಿಬೆಟ್ಟದ ದೇವಿಯ ಸನ್ನಿಧಿ ಸರ್ವ ವಿಧದಲ್ಲೂ ಸಜ್ಜಾಗಿದ್ದು ಏಕಕಾಲಕ್ಕೆ ದಸರೆಯ ವಿವಿಧ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ದಸರಾ ಉತ್ಸವವನ್ನು ಉದ್ಘಾಟಿಸಲು ಈಗಾ ಗಲೇ ಮೈಸೂರಿಗೆ ಆಗಮಿಸಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹುಣಸೂರು ರಸ್ತೆಯಲ್ಲಿರುವ ನಕ್ಷತ್ರ ವನದ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಬೆಳಗ್ಗೆ 10:42ರಿಂದ 11:12ರ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸಿದ್ಧಗೊಂಡಿರುವ ವೇದಿಕೆಯಲ್ಲಿ ದಸರಾ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳ್ಳಿಯ ಮಂಪಟದಲ್ಲಿ ಪ್ರತಿಷ್ಠಾಪಿಸಲಾಗುವ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಗುವುದು.

ಇಂದು ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತರ ನೇತೃತ್ವದಲ್ಲಿ ಮೂರ್ತಿ ಮತ್ತು ಮಂಪಟ ಸ್ವಚ್ಛಗೊಳಿಸಿ ಸಿಂಗರಿಸುವ ಕಾರ್ಯ ನಡೆಯಿತು . ಚಾಮುಂಡೇಶ್ವರಿ ದೇವಸ್ಥಾನ ವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಹಸಿರು ತೋರಣ, ವರ್ಣರಂಜಿತ ನಿಶಾನೆ, ರಂಗೋಲಿಗಳು ರಾರಾಜಿಸುತ್ತಿವೆ. ಸುಮಾರು 2000 ಮಂದಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಲಿದ್ದು, ಶಾಸಕ ಎಂ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರಮನೆಯ ಆವರಣದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚಾಲನೆ ನೀಡಲಿದ್ದಾರೆ.ಮಧ್ಯಾಹ್ನ 1 ಗಂಟೆಗೆ ಜೆ.ಕೆ. ಸಭಾಂಗಣದಲ್ಲಿ (ಜೆ.ಕೆ.ಮೈದಾನ) ಮ್ಯಾಜಿಕ್ ಷೋ, 1:30ಕ್ಕೆ ಕಾಡಾ ಕಚೇರಿಯ ಆವರಣದಲ್ಲಿ ಆಹಾರ ಮೇಳವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಪ್ರವಾಸೋದ್ಯಮವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, 3:30ಕ್ಕೆ ದಿ.ದೇವರಾಜ್ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಪಶು ಸಂಗೋಪನ ಸಚಿವ ರೇವೂ ನಾಯಕ್ ಬೆಳಮಗಿ ಉದ್ಘಾಟಿಸಲಿದ್ದಾರೆ.
ಸಂಜೆ 4 ಗಂಟೆಗೆ ಕಲಾಮಂದಿರದಲ್ಲಿ ದಸರಾ ಚಲನ ಚಿತ್ರೋತ್ಸವವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. 4:30ಕ್ಕೆ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ದಸರಾ ವಸ್ತು ಪ್ರದರ್ಶನವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಅನಾವರಣಗೊಳಿಸಲಿದ್ದಾರೆ. ಸಂಜೆ 5 ಗಂಟೆಗೆ ಕರ್ಜನ್ ಪಾರ್ಕ್ ಆವರಣದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್, ಸಂಜೆ 6 ಗಂಟೆಗೆ ದಸರಾ ದೀಪಾಲಂಕಾರಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಲಿದ್ದಾರೆ.
ವೈಶಿಷ್ಟ:
*ವಸ್ತು ಪ್ರದರ್ಶನ, ಚಲನಚಿತ್ರೋತ್ಸವ, ಆಹಾರ ಮೇಳ ಫಲಪುಷ್ಪ ಪ್ರದರ್ಶನ ಶುರು  *ನಗರದ ಎಲ್ಲ ಪ್ರಮುಖ ವೃತ್ತ, ರಸ್ತೆ, ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ*ಮೈಸೂರು ವೈಮಾನಿಕ ವೀಕ್ಷಣೆಗೆ ಚಾಲನೆ
ವೈರುಧ್ಯ:
* ಇನ್ನೂ ಪೂರ್ಣಗೊಳ್ಳದ ದಸರಾ ಕಾಮಗಾರಿ, ಅಂತಿಮಗೊಳ್ಳದ ಕಾರ್ಯಕ್ರಮ ಪಟ್ಟಿ
* ಎಲ್ಲೆಲ್ಲೂ ಕಳಪೆ ಕಾಮಗಾರಿ, ಪ್ರಚಾರಕ್ಕೆ ಆದ್ಯತೆ, ಪಾವಿತ್ರತೆಗೆ ಧಕ್ಕೆ, ಕಳೆಕಟ್ಟದ ನಗರ.
* ಪ್ರತಿ ವರ್ಷದಂತೆ ಈ ವರ್ಷವೂ ದಸರಾ ವಸ್ತು ಪ್ರದರ್ಶನದಲ್ಲಿ ತುಂಬದ ಮಳಿಗೆಗಳು.
* ನಗರದಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ, ಗ್ರಾಮಾಂತರ ಭಾಗದಲ್ಲಿ ಕರೆಂಟೇ ಇಲ್ಲ.
* ವಿಮಾನ ನಿಲ್ದಾಣ ಪೂರ್ಣಗೊಂಡು ಎರಡು ವರ್ಷ ಕಳೆದರೂ ವಿಮಾನ ಹಾರಾಟ ಇಲ್ಲ.
Please follow and like us:
error