ದೂರ ಶಿಕ್ಷಣ ಕೇಂದ್ರದ ನಿರ್ದೇಶಕರ ಮೇಲೆ ಹಲ್ಲೆ : ಮುತಾಲಿಕ್ ಸೇರಿ ಆರು ಮಂದಿಯ ಸೆರೆ

ಬೆಂಗಳೂರು, ಡಿ.16: ಬೆಂಗಳೂರು ವಿಶ್ವ ವಿದ್ಯಾನಿಲಯದ ದೂರಶಿಕ್ಷಣ ಕೇಂದ್ರದ ನಿರ್ದೇಶಕ ನಿರಂಜನ್‌ರ ಮೇಲೆ ಹಲ್ಲೆ ಮತ್ತು ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ 6 ಮಂದಿಯನ್ನು ನಗರದ ಹಲಸೂರು ಗೇಟ್ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೆಂಗಳೂರು ದೂರ ಶಿಕ್ಷಣ ಕೇಂದ್ರದ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ ಮತ್ತಿತರ ಕಡೆಗಳಲ್ಲಿ ಸಾಮೂಹಿಕ ನಕಲು ನಡೆದಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಈಗ ಪುನಃ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿನ ಬೆಂಗಳೂರು ದೂರ ಶಿಕ್ಷಣ ಕೇಂದ್ರಕ್ಕೆ ನುಗ್ಗಿದ ಪ್ರಮೋದ್ ಮುತಾಲಿಕ್ ನೇತೃತ್ವದ ಹಲವಾರು ಶ್ರೀರಾಮಸೇನೆಯ ಕಾರ್ಯಕರ್ತರು ನಿರ್ದೇಶಕ ನಿರಂಜನ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆ ಹಿನ್ನೆಲೆಯಲ್ಲಿ ದೂರ ಶಿಕ್ಷಣ ಕೇಂದ್ರದ ನಿರ್ದೇಶಕ ನಿರಂಜನ್ ನೀಡಿದ ದೂರಿನನ್ವಯ ಪೊಲೀಸರು ಪ್ರಮೋದ್ ಮುತಾಲಿಕ್ ಸೇರಿದಂತೆ ಆರೇಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಮೋದ್ ಮುತಾಲಿಕ್ ಬಂಧನ ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಹಲಸೂರು ಗೇಟ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಠಾಣೆಯ ಮುಂಭಾಗದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
Please follow and like us:
error