ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈ ಬಾರಿ ೧೬೬೬೦ ವಿದ್ಯಾರ್ಥಿಗಳು

  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
         ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ೬೦ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಈ ಬಾರಿ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಆ ಪೈಕಿ ೯೨೦೪ ಬಾಲಕರು ಹಾಗೂ ೭೪೫೬ ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಲ್ಲಿ ೧೫೪೫೦ ವಿದ್ಯಾರ್ಥಿಗಳು ಹೊಸಬರಾದರೆ, ೧೨೧೦ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯುವವರಾಗಿದ್ದಾರೆ.  ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೈಕಿ ೨೪೪೧-ಪರಿಶಿಷ್ಟ ಜಾತಿ, ೨೦೦೩-ಪ.ವರ್ಗ, ೧೨೦೬- ವರ್ಗ-೧ ಹಾಗೂ ೧೧೦೧೦- ಇತರೆ ವರ್ಗಕ್ಕೆ ಸೇರಿದವರಾಗಿದ್ದಾರೆ.  ಜಿಲ್ಲೆಯಲ್ಲಿ ೦೪ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಹಾಗೂ ೦೨ ಕೇಂದ್ರಗಳನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದೆ.     ಗಂಗಾವತಿ ತಾಲೂಕು ಸಿದ್ದಾಪುರದ ಸರ್ಕಾರಿ ಪ.ಪೂ. ಕಾಲೇಜು, ಕೊಪ್ಪಳ ತಾಲೂಕು ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು, ಕುಷ್ಟಗಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವೆಂದು ಗುರುತಿಸಲಾಗಿದೆ.  ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಕುಷ್ಟಗಿ ತಾಲೂಕು ಹನುಮನಾಳದ ಸರ್ಕಾರಿ ಪ.ಪೂ. ಕಾಲೇಜಿನ ಪರೀಕ್ಷಾ ಕೇಂದ್ರವನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರವಾಗಿ ಗುರುತಿಸಲಾಗಿದೆ.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಜಾಗೃತ ದಳವನ್ನು ನೇಮಕ ಮಾಡಲಾಗಿದ್ದು, ಜಾಗೃತ ದಳದ ತಂಡ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಯುವ ಕುರಿತು ಪರೀಕ್ಷಾ ಕೇಂದ್ರಗಳಿಗೆ ಆಕಸ್ಮಿಕವಾಗಿ ಭೇಟಿ ನೀಡಿ ಪರಾಮರ್ಶಿಸಲಿದೆ.  ತಾಲೂಕು ಕೇಂದ್ರಗಳಲ್ಲಿ ಸ್ಥಾನಿಕ ಜಾಗೃತ ದಳವನ್ನು ರಚಿಸಲಾಗಿದೆಯಲ್ಲದೆ, ಪರೀಕ್ಷಾ ನಕಲನ್ನು ಪತ್ತೆ ಹಚ್ಚಲು ಮೊಬೈಲ್ ಸ್ಕ್ವಾಡ್ ಸಹ ರಚಿಸಲಾಗಿದೆ.  ಪರೀಕ್ಷಾ ಕೆಲಸ ಕಾರ್ಯಗಳಿಗೆ ಪರೀಕ್ಷೆಯ ಆಯಾ ವಿಷಯವಾರು ಶಿಕ್ಷಕರನ್ನು ಬಿಟ್ಟು, ಪ್ರೌಢಶಾಲೆಯ ಉಳಿದ ವಿಷಯಗಳ ಶಿಕ್ಷಕರನ್ನೆ ಪರೀಕ್ಷಾ ಕಾರ್ಯಕ್ಕೆ ನೇಮಕ ಮಾಡಲಾಗುವುದು.  ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳು, ಹಾಗೂ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಪಂಡಿತ್ ಯಲ್ಲಪ್ಪ ಅವರು ತಿಳಿಸಿದ್ದಾರೆ.
Please follow and like us:
error

Related posts

Leave a Comment