You are here
Home > Koppal News > ಜಿಲ್ಲೆಯಲ್ಲಿ ರೋಗಗಳ ಹರಡುವಿಕೆಗೆ ಮುಂಜಾಗ್ರತೆ ಕ್ರಮ

ಜಿಲ್ಲೆಯಲ್ಲಿ ರೋಗಗಳ ಹರಡುವಿಕೆಗೆ ಮುಂಜಾಗ್ರತೆ ಕ್ರಮ

 ಜಿಲ್ಲೆಯಲ್ಲಿ ಡೆಂಗ್ಯೂ, ಚಿಕೂನ್ಗುನ್ಯಾ ಮೊದಲಾದ ರೋಗವಾಹಕ ಆಶ್ರಿತ ರೋಗಗಳು ಹರಡದಂತೆ ಮುನ್ನೇಚ್ಚರಿಕೆಯಾಗಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಬಂಧಿಸಿದ ನಾಲ್ಕು ತಾಲೂಕಿನ ತಾಲೂಕ ಆರೋಗ್ಯಾಧಿಕಾರಿಗಳಿಗೆ, ಕಾರ್ಯಕ್ರಮ ಅನುಷ್ಠಾಧಿಕಾರಿಗಳಿಗೆ, ಮೇಲ್ವಿಚಾರಕರು ಕಿರಿಯ ಆರೋಗ್ಯ ಸಹಾಯಕ ಮಹಿಳೆ ಮತ್ತು ಪುರುಷ ಸಿಬ್ಬಂದಿಯವರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ಎಂ.ಎಂ.ಕಟ್ಟಿಮನಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ಕಾಯಿಲೆಗಳ ಹರಡುವಿಕೆ, ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಇಲಾಖೆಯಿಂದ ಮುಂಜಾಗ್ರತೆ ಮತ್ತು ತಡೆಗಟ್ಟುವಿಕೆ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳು ಲಾರ್ವಾ ಸಮೀಕ್ಷೆ ಮತ್ತು ಸೊರ್ಸರಿಡೇಕ್ಷನ್ ಕಾರ್ಯಕ್ರಮ, ಬ್ರಿಡಿಂಗ್ ಚೆಕ್ಕರ್ಸ್ ಕಾರ್ಯಕ್ರಮ, ಜ್ವರ ಪ್ರಕರಣಗಳ ಸಮೀಕ್ಷೆ, ನಿಂತ ನೀರಿನ ತಾಣಗಳನ್ನು ಗುರುತಿಸಿ ನೀರು ನಿಲ್ಲದಂತೆ ಕ್ರಮ ಜರುಗಿಸಲಾಗಿದೆ. ಜೈವಿಕ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗಪ್ಪಿ ಮತ್ತು ಗ್ಯಾಂಬೂಸಿಯಾ ಮೀನುಗಳನ್ನು ನೀರಿನ ತಾಣಗಳಲ್ಲಿ ಬಿಡುವುದು, ಒಳಾಂಗಣ ಧೂಮಿಕರಣ ಜರುಗಿಸುವುದು ಮತ್ತು ಕಿಟನಾಶಕ ಸಿಂಪರಣಾ ಕಾರ್ಯಕ್ರಮಕ್ಕೆ ಆದ್ಯತೆ ನೀಡಿ, ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಅನಾಫೀಲಿಸ್ ಸೊಳ್ಳೆಯಿಂದ ಮಲೇರಿಯಾ ರೋಗ, ಈಡೀಸ್ ಜಾತಿಯ ಸೊಳ್ಳೆಯಿಂದ ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ರೋಗ ಮತ್ತು ಕ್ಯುಲೆಕ್ಷ ಜಾತಿಯ ಸೊಳ್ಳೆಯಿಂದ ಮೆದಳು ಜ್ವರ ಮತ್ತು ಆನೆಕಾಲು ರೋಗ ಹರಡುವ ಕುರಿತು ವಿವರಿಸಿದರು. ಡೆಂಗ್ಯೂ ರೋಗದ ಲಕ್ಷಣಗಳೆಂದರೆ, ಇದ್ದಕ್ಕಿದ್ದಂತೆ ತೀವ್ರ ಜ್ವರ, ತೀವ್ರತರವಾದ ತಲೆನೋವು, ಹಣೆಯ ಮುಂಬಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಕಣ್ಣಿನ ಹಿಂಬಾಗದ ನೋವು ಕಣ್ಣಿನ ಚಲನೆಯಿಂದ ಹೆಚ್ಚಾಗುವುದು. ಮೈಕೈನೋವು, ವಾಂತಿ ಮತ್ತು ಬಾಯಿ, ಮೂಗು, ವಸಡುಗಳಿಂದ ರಕ್ತ ಸ್ರಾವವಾಗುವುದು ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತ ಸ್ರಾವದ ಗುರುತುಗಳು ಕಾಣಿಸಿಕೊಳ್ಳಲಿವೆ. ಚಿಕೂನ್ಗುನ್ಯಾ ರೋಗವು ಜ್ವರ ವಿಪರಿತ, ಕಿಲು ನೋವು, ಕೀಲುಊತ ಈ ರೋಗದ ಲಕ್ಷಣಗವಾಗಿದೆ. ಮಲೇರಿಯಾ ರೋಗವು ಚಳಿಜ್ವರ, ಮೈಬೆವರೊಡೆಯುವುದು, ಸುಸ್ತು, ವಾಂತಿ, ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಅರೆ ಪ್ರಜ್ಞಾವಸ್ತೆ, ಕಾಮಾಲೆ ಪ್ರಮುಖ ಲಕ್ಷಣವಾಗಿವೆ.
ನೀರು ಶೇಖರಣಾ ಸಲಕರಣೆಗಳಾದ ಡ್ರಮ್ಗಳು, ಬ್ಯಾರಲ್ಗಳು, ತೊಟ್ಟಿಗಳು, ಎರ್ಕೂಲರ್ಗಳು, ಕಲ್ಲಿನ ಮಣ್ಣಿನ ಡೋಣಿಗಳು ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಸ್ವಚ್ಚವಾಗಿ ತೊಳೆದು ಮತ್ತೆ ಭರ್ತಿ ಮಾಡಿ, ಭದ್ರವಾದ ಮುಚ್ಚಳದಿಂದ ಮುಚ್ಚಿಡುವುದು. ಮನೆಯ ಸುತ್ತಮುತ್ತಲಿನ ತ್ಯಾಜ್ಯ ವಸ್ತುಗಳಾದ ಹಳೆಯ ಟೈರು, ಒರಳುಕಲ್ಲು, ಎಳೆನೀರಿನ ಚಿಪ್ಪು, ಪ್ಲಾಸ್ಟಿಕ್ ಹಾಗೂ ಗಾಜಿನ ಸಲಕರಣೆಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು. ಮತ್ತು ಸಾರ್ವಜನಿಕರ ಸ್ವಯಂ ರಕ್ಷಣಾ ಕ್ರಮಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಆರೋಗ್ಯ ಶಿಕ್ಷಣ ನೀಡುವುದು ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿಯವರಿಂದ ಪ್ರಥಮ ಆದ್ಯತೆಯೊಂದಿಗೆ ನಡೆಯಬೇಕೆಂದು ವಿವರಿಸಿದರು. ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆ ಧ್ಯಯ ವಾಕ್ಯದಡಿಯಲ್ಲಿ ಜಿಲ್ಲೆಯಾದ್ಯಂತ ವರ್ಷಪೂರ್ತಿ ಮಾರ್ಗಸೂಚಿಯಂತೆ ಕಾರ್ಯಕ್ರಮ ನಿರಂತರ ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಸಿಬ್ಬಂದಿಗಳ ಸಹಕಾರವನ್ನು ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀಕಾಂತ ಬಾಸೂರ ವಹಿಸಿದ್ದರು. ಜಿಲ್ಲೆಯ ನಾಲ್ಕು ತಾಲೂಕಿನ ತಾಲೂಕ ಆರೋಗ್ಯಾಧಿಕಾರಿಗಳು, ಕಾರ್ಯಕ್ರಮ ಅನುಷ್ಠಾಧಿಕಾರಿಗಳು, ಮೇಲ್ವಿಚಾರಕರು ಕಿರಿಯ ಆರೋಗ್ಯ ಸಹಾಯಕ ಮಹಿಳೆ ಮತ್ತು ಪುರುಷ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Top